ಸಂಕೇಶ್ವರ: ಸಂಕೇಶ್ವರದ ಕೃಷಿ ಉತ್ಪನ್ನ ಮಾರುಕಟ್ಟೆ ರಾಜ್ಯದಲ್ಲೇ ಹೆಸರಾಗಿದೆ. ಆದರೆ, ಈಗ ರೈತರು– ವರ್ತಕರಲ್ಲಿ ಎರಡು ಭಾಗಗಳಾಗಿದ್ದು, ಎಪಿಎಂಸಿ– ಖಾಸಗಿ ಮಾರುಕಟ್ಟೆಗಳ ತಿಕ್ಕಾಟ ಶುರುವಾಗಿದೆ.
ಸಂಕೇಶ್ವರದಲ್ಲಿ ದುರುದುಂಡೀಶ್ವರ ಮಠದಿಂದ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಇಲ್ಲಿ ಕಳೆದ 30 ವರ್ಷಗಳಿಂದಲೂ ತರಕಾರಿ ಠೋಕ್ ವ್ಯಾಪಾರವು ನಡೆಯುತ್ತ ಬಂದಿದೆ. ಪ್ರಾರಂಭದಲ್ಲಿ ಕೇವಲ ಐದು ಜನ ದಲಾಲರಿಂದ ಆರಂಭವಾದ ತರಕಾರಿ ಮಾರುಕಟ್ಟೆಯಲ್ಲಿ ಈಗ 48 ಜನ ದಲಾಲರು ತಮ್ಮ ಅಂಗಡಿಗಳನ್ನು ತೆರೆದಿದ್ದಾರೆ. ನಿತ್ಯವೂ ಲಕ್ಷಾಂತರ ರೂಪಾಯಿ ತರಕಾರಿ ಸಗಟು ವ್ಯವಹಾರ ನಡೆಯುತ್ತಿದೆ.
ಆದರೆ, ಪಟ್ಟಣದಲ್ಲಿ ಸರ್ಕಾರದಿಂದಲೇ ನಿರ್ಮಿಸಿದ ಎಪಿಎಂಸಿ ಉಪ ಮಾರುಕಟ್ಟೆ ಇದೆ. ಖಾಸಗಿ ಮಾರುಕಟ್ಟೆಯ ಕಾರಣದಿಂದ ಸರ್ಕಾರಿ ಮಾರುಕಟ್ಟೆ ಪಾಳುಬಿದ್ದಿದೆ. ಹಾಗಾಗಿ, ಕೃಷಿ ವ್ಯಾಪಾರವನ್ನು ಎಪಿಎಂಸಿಗೇ ಸ್ಥಳಾಂತರಿಸಬೇಕು ಎಂದು ಅಪಾರ ಸಂಖ್ಯೆಯ ರೈತರು ಪಟ್ಟು ಹಿಡಿದರು. ಇದಕ್ಕಾಗಿ ಸಾಕಷ್ಟು ಹೋರಾಟ ಕೂಡ ಮಾಡಿದರು. ಸ್ವತಃ ಜಿಲ್ಲಾಧಿಕಾರಿ, ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿದರು. ಆದರೂ ಶಾಶ್ವತ ಪರಿಹಾರ ಇನ್ನೂ ಸಾಧ್ಯವಾಗಿಲ್ಲ.
ಕಡಿಮೆ ನೀರಿನಿಂದ ಹಾಗೂ ಕಡಿಮೆ ಸಮಯದಲ್ಲಿ ಬೆಳೆಯಬಹುದಾದ ತರಕಾರಿ ವ್ಯವಸಾಯವು ಸಂಕೇಶ್ವರ ಗಡಿ ಭಾಗದಲ್ಲಿ ತುಂಬ ಜನಪ್ರಿಯ. ಸಣ್ಣ ಹಿಡುವಳಿದಾರರಿಗೆ, ಮನೆಯಲ್ಲಿಯೇ ಉದ್ಯೋಗ ಮಾಡಬೇಕೆನ್ನುವವರಿಗೆ ತರಕಾರಿ ಕೃಷಿಯು ತುಂಬ ಲಾಭದಾಯಕ ವೃತ್ತಿ. ಕಬ್ಬು, ತಂಬಾಕು, ಸೋಯಾಬಿನ್‌ನಂಥ ವಾಣಿಜ್ಯ ಬೆಳೆಗಳಿಗೆ ಸೆಡ್ಡು ಹೊಡೆಯುತ್ತಿರುವ ತರಕಾರಿ ವ್ಯವಸಾಯವೇ ಇಲ್ಲಿ ಹೆಚ್ಚು. ಕಳೆದ 30 ವರ್ಷಗಳಿಂದ ರೈತರು ಇದನ್ನು ಮಾಡಿಕೊಂಡು ಬಂದಿದ್ದಾರೆ.
ಮಠದಿಂದ ನಿರ್ಮಿಸಿದ ಖಾಸಗಿ ಮಾರುಕಟ್ಟೆಯಲ್ಲಿ ತರಕಾರಿಗಳ ಬಹಿರಂಗ ಲಿಲಾವು ಆಗುವುದಿಲ್ಲ. ದಲಾಲರು ನಿಗದಿ ಪಡಿಸಿದ ದರವನ್ನೇ ರೈತರು ಪಡೆಯಬೇಕು. ಅದಕ್ಕೆ ಮತ್ತೆ ಶೇ 10ರಷ್ಟು ಕಮಿಷನ್ ರೈತರೇ ಕೊಡಬೇಕು. ಖಾಸಗಿ ಮಾರುಕಟ್ಟೆ ಪ್ರವೇಶಿಸುವ ಪ್ರತಿ ರೈತರು ತಮ್ಮ ಪ್ರತಿಯೊಂದು ಮೂಟೆಗೆ ₹10 ಶುಲ್ಕ, ಶೌಚಾಲಯ ಉಪಯೋಗಿಸಿದರೆ ಅದಕ್ಕೆ ₹10 ಶುಲ್ಕ, ಹೊರಗಿನಿಂದ ಬರುವ ಖರೀದಿದಾರರು ತಮ್ಮ ವಾಹನಗಳಿಗೆ ₹100 ಶುಲ್ಕವನ್ನು ಮಠದ ಪ್ರತಿನಿಧಿಗೆ ಕೊಡಬೇಕಾಗಿತ್ತು.
ರೈತರಿಂದ ದಲಾಲರು ಖರೀದಿಸಿದ್ದ ದರಕ್ಕೂ ದಲಾಲರು ಹೊರಗಿನ ಖರೀದಿದಾರರಿಗೂ ವಿಕ್ರಿ ಮಾಡುವ ದರಕ್ಕೂ ಅಜಗಜಾಂತರ ಆಗುತ್ತಿತ್ತು. ಹೀಗೆ ರೈತರಿಗೂ ಹಾಗೂ ಹೊರಗಿನ ಖರೀದಿದಾರರಿಗೂ ಅನ್ಯಾಯವಾಗುತ್ತಲೇ ಇತ್ತು ಎಂದು ರೈತರಾದ ನಿರ್ವಾಣಿ ಘೋಡಗೇರಿ ಮತ್ತು ಅಪ್ಪಾಸಾಹೇಬ ನಿರಲಕಟ್ಟಿ ಬಿಚ್ಚಿಡುತ್ತಾರೆ.
ಹೀಗೆ ರೈತರಿಗೆ ಅನ್ಯಾಯವಾಗುತ್ತಿರುವಾಗ ರೈತ ಸಂಘದ ಮುಖಂಡರು ಅದರಲ್ಲಿ ಪ್ರವೇಶಿಸಿ ಸಮಸ್ಯೆಯನ್ನು ಜಿಲ್ಲಾಡಳಿತ ಮುಂದೆ ಬಹಿರಂಗ ಸಭೆಯಲ್ಲಿ ಬಿಚ್ಚಿಟ್ಟರು. ಆ ಸಭೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಾಗವಹಿಸಿ ರೈತರ ಸಮಸ್ಯೆಯನ್ನು ಆಲಿಸಿ ತಕ್ಷಣವೇ ದುರುದುಂಡೀಶ್ವರ ಮಠದ ವಾಣಿಜ್ಯ ಸಂಕೀರ್ಣದಲ್ಲಿ ನಡೆಯುತಿದ್ದ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಸೀಜ್ ಮಾಡಿದರು.
ನಂತರ ತರಕಾರಿ ವ್ಯಾಪಾರವು ಸರ್ಕಾರಿ ಎ.ಪಿ.ಎಂ.ಸಿಗೆ ವರ್ಗಾವಣೆಗೊಂಡಿತು. ಸದ್ಯ ಅಲ್ಲಿಯೇ ತರಕಾರಿ ಸಗಟು ವ್ಯವಹಾರವು ನಡೆಯುತ್ತಿದೆ.
ಅಲ್ಲಿ ವಿಶಾಲವಾದ ಜಾಗ ಇದ್ದು ರೈತರ ವಾಹನಗಳಿಗೂ ಹಾಗೂ ಹೊರಗಿನಿಂದ ಬರುವ ಖರೀದಿದಾರರ ವಾಹನಗಳಿಗೂ ನಿಲ್ಲಿಸಲು ಬಹಳ ಅನುಕೂಲವಾಗಿದೆ. ಅಲ್ಲಿ ವಿಶಾಲವಾದ ಮಾರುಕಟ್ಟೆ ಪ್ರಾಂಗಣವಿದ್ದು, ತರಕಾರಿಗಳ ಬಹಿರಂಗ ವ್ಯಾಪಾರವು ನಡೆಯುತ್ತಿದೆ. ರೈತರಿಂದ ಯಾವುದೇ ಕಮಿಷನ್ ದಲಾಲರು ತೆಗೆದುಕೊಳ್ಳುತ್ತಿಲ್ಲ. ವಾಹನಗಳಿಗೂ ಯಾವುದೇ ಶುಲ್ಕ ಇಲ್ಲ. ಹೊರ ರಾಜ್ಯದ ವ್ಯಾಪಾರಿಗಳ ಸಹಿತ ಬಂದು ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ ಎನ್ನುತ್ತಾರೆ ತಾಲ್ಲೂಕು ರೈತ ಸಂಘದ ಮುಖಂಡ ಸಂಜೀವ ಹಾವನ್ನವರ.
ಖಾಸಗಿ ತರಕಾರಿ ಮಾರುಕಟ್ಟೆಯ ಹೊಂದಿರುವ ನಿಡಸೋಸಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಶ್ರೀಗಳ ಪ್ರಕಾರ, ‘ಸಂಕೇಶ್ವರದ ದುರುದುಂಡೀಶ್ವರ ಮಠದ ವಾಣಿಜ್ಯ ಸಂಕೀರ್ಣದಲ್ಲಿ ಖಾಸಗಿ ತರಕಾರಿ ಮಾರುಕಟ್ಟೆಯು ತಕ್ಷಣವೇ ಜನ್ಮ ತಳೆದಿಲ್ಲ. ಕಳೆದ 30 ವರ್ಷಗಳಿಂದಲೂ ಅದು ಹಂತ ಹಂತವಾಗಿ ಬೆಳೆಯುತ್ತ ಬಂದಿದೆ. ಇಲ್ಲಿಗೆ ಗೋವಾ ಹಾಗೂ ಕೊಂಕಣ ಭಾಗದಿಂದ ತರಕಾರಿ ಖರೀದಿದಾರರು ಬರುತ್ತಾರೆ. ಇದರಿಂದ ನಿತ್ಯವೂ ಇಲ್ಲಿಗೆ 300 ವಾಹನಗಳಷ್ಟು ತರಕಾರಿ ಲೋಡ್ ಬರುತ್ತದೆ.
ಇಲ್ಲಿ ಉತ್ತಮ ದರವೂ ಸಿಗುತ್ತಿರುವದರಿಂದ ರೈತರು ಇಲ್ಲಿಗೇ ಕಳೆದ 30 ವರ್ಷಗಳಿಂದಲೂ ಬರುತ್ತಿದ್ದಾರೆ. ದುರುದುಂಡೀಶ್ವರ ಮಠದ ವಾಣಿಜ್ಯ ಸಂಕೀರ್ಣದಲ್ಲಿ ಖಾಸಗಿ ತರಕಾರಿ ಮಾರುಕಟ್ಟೆಯಲ್ಲಿ 48 ಜನ ದಲಾಲರು ಕಾರ್ಯ ನಿರ್ವಹಿಸುತಿದ್ದಾರೆ. ಆದರೇ ಸರ್ಕಾರಿ ಎ.ಪಿ.ಎಂ.ಸಿ ಯಲ್ಲಿ ಕೇವಲ 12 ಸಣ್ಣ ಮಳಿಗೆಗಳು ಇವೆ. ಅಲ್ಲಿ ತರಕಾರಿಗಳನ್ನು ಸಂಗ್ರಹಿಸಲು ಸಹಿತ ಆಗುವುದಿಲ್ಲ. ಉಳಿದ 36 ದಲಾಲರು ಎಲ್ಲಿ ನಿಂತು ಕಾರ್ಯನಿರ್ವಹಿಸಬೇಕು ಎಂಬುದು ಅವರ ಪ್ರಶ್ನೆ.
ಖಾಸಗಿ ತರಕಾರಿ ಮಾರುಕಟ್ಟೆಯ ಹೊಂದಿರುವ ನಿಡಸೋಸಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಶ್ರೀಗಳ ಪ್ರಕಾರ ‘ಎಪಿಎಂಸಿ ನಿಯಮಾವಳಿಗಳ ಪ್ರಕಾರ ಖಾಸಗಿ ಜಾಗೆಯಲ್ಲಿ ತರಕಾರಿ ಮಾರುಕಟ್ಟೆಯನ್ನು ಹೊಂದಲು ಅವಕಾಶವಿದೆ. ಸದ್ಯದ ಸರ್ಕಾರಿ ಎಪಿಎಂಸಿಯಿಂದ 5 ಕಿ.ಮೀ ಅಂತರದೊಳಗಾಗಿ ಖಾಸಗಿ ಮಾರುಕಟ್ಟೆ ಮಾಡಲು ಬರುವುದಿಲ್ಲ ಎಂಬ ಅಂಶ ಕೃಷಿ ಉತ್ಪನ್ನ ಮಾರುಕಟ್ಟೆಯ ನಿಮಮಾವಳಿಗಳಲ್ಲಿ ಇಲ್ಲವೇ ಇಲ್ಲ. ಯಾವುದೇ ನೋಟಿಸ್ ನೀಡದೆ ಹುಕ್ಕೇರಿ ತಹಶೀಲ್ದಾರರು ಖಾಸಗಿ ಮಾರುಕಟ್ಟೆಯನ್ನು ಬಂದ್ ಮಾಡಿರುವುದು ಕಾನೂನಿಗೆ ವಿರೋಧ. ಖಾಸಗಿ ಮಾರುಕಟ್ಟೆಯು ತಹಶೀಲ್ದಾರರ ವ್ಯಾಪ್ತಿಗೆ ಬರುವುದಿಲ್ಲ. ಇದನ್ನೆಲ್ಲ ಪರಿಗಣಿಸಿ ಹೈಕೋರ್ಟ್ ಧಾರವಾಡ ಪೀಠವು ತಹಶೀಲ್ದಾರರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಎಂದರು.
ಖಾಸಗಿ ಮಾರುಕಟ್ಟೆಯಲ್ಲಿ 48 ಮಳಿಗೆಗಳಿವೆ. ಪ್ರತಿಯೊಂದಕ್ಕೂ ಮಾಸಿಕ ₹4500 ಬಾಡಿಗೆ ಇದೆ. ಅಂದರೆ ಮಾಸಿಕ ₹2.16 ಲಕ್ಷ ಬಾಡಿಗೆ ಹೋಗುತ್ತದೆ. ಇಷ್ಟಾದರೂ ರೈತರು ಮೂತ್ರ ವಿಸರ್ಜನೆ ಮಾಡುವುದಕ್ಕೂ ವಾಹನ ನಿಲ್ಲಿಸುವುದಕ್ಕೂ ಹಣ ಕೊಡಬೇಕಾಗಿದೆ. ನಿಯಮಗಳ ಪ್ರಕಾರ ಸರ್ಕಾರಿ ಮಾರುಕಟ್ಟೆಯೇ ಅಂತಿಮವಾಗಿ ಇರಬೇಕು ಎಂಬುದು ರೈತ ಮುಖಂಡರ ವಾದ.
‘ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ತೆಯಂತೆ ಒಂದು ಎ.ಪಿ.ಎಂ.ಸಿ ಇದ್ದಾಗ 3 ಕಿ.ಮೀ ಅಂತರದ ಒಳಗೆ ಮತ್ತೊಂದು ಉಪ-ಕೃಷಿ ಮಾರುಕಟ್ಟೆಗೆ ಅನುಮತಿ ನೀಡಲು ಆಗುವುದಿಲ್ಲ. ನ್ಯಾಯಾಲಯದಲ್ಲಿಯೂ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ನಿರ್ಧಾರ ಕೈಕೊಳ್ಳಲು ಬರುವುದಿಲ್ಲ. ಆದರೂ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಈಚೆಗೆ ನಡೆದ ಹೋರಾಟದ ವೇಳೆ ಉಪ ವಿಭಾಗಾಧಿಕಾರಿ ಶ್ರವಣಕುಮಾರ ಹಾಗೂ ತಹಶೀಲ್ದಾರ್ ಮಂಜುಳಾ ನಾಯಿಕ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.