ADVERTISEMENT

ಸಂಕೇಶ್ವರ | ತರಕಾರಿ ಪೇಟೆ ಎಪಿಎಂಸಿಗೆ ಸ್ಥಳಾಂತರ: ಡಿ.ಸಿ ಆದೇಶ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 15:22 IST
Last Updated 19 ಸೆಪ್ಟೆಂಬರ್ 2024, 15:22 IST
ಸಂಕೇಶ್ವರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿದರು
ಸಂಕೇಶ್ವರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿದರು   

ಸಂಕೇಶ್ವರ: ಸಂಕೇಶ್ವರದ ದುರದುಂಡೀಶ್ವರ ಮಠದ ಜಾಗದಲ್ಲಿ ನಡೆಯುತ್ತಿದ್ದ ಖಾಸಗಿ ತರಕಾರಿ ಪೇಟೆಯನ್ನು ತಕ್ಷಣವೇ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎ.ಪಿ.ಎಂ.ಸಿ) ಸ್ಥಳಾಂತರಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮೌಖಿಕ ಆದೇಶ ನೀಡಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ತರಕಾರಿ ಬೆಳೆಗಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕೃಷಿ ಉತ್ಪನ ಮಾರಾಟದ ನಿಯಮಾವಳಿಗೆ ಅನುಸಾರವಾಗಿ ಖಾಸಗಿ ತರಕಾರಿ ಪೇಟೆಯನ್ನು ಎ.ಪಿ.ಎಂ.ಸಿ ಗೆ ಸ್ಥಳಾಂತರ ಮಾಡಲಾಗುವುದು ಹಾಗೂ ಇದುವರೆಗೂ ಖಾಸಗಿ ತರಕಾರಿ ಪೇಟೆಯಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಮಾತನಾಡಿ, ಕಾನೂನು ಚೌಕಟ್ಟಿನಲ್ಲಿಯೇ ಎಲ್ಲರೂ ವ್ಯವಹರಿಸಬೇಕು ಎಂದು ಹೇಳಿದರು.

ADVERTISEMENT

ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪಾ ಪೂಜೇರಿ ಮಾತನಾಡಿ, 25 ವರ್ಷಗಳಿಂದ ಪಟ್ಟಣದಲ್ಲಿ ಖಾಸಗಿ ಜಾಗದಲ್ಲಿ ಠೋಕ ತರಕಾರಿ ಪೇಟೆ ನಡೆಯುತ್ತಿದ್ದು, ಅಲ್ಲಿನ ವರ್ತಕರು ಸರ್ಕಾರದ ಯಾವುದೇ ಲೈಸೆನ್ಸ್‌ ಹೊಂದಿಲ್ಲ. ತರಕಾರಿಗಳ ಬಹಿರಂಗ ಲಿಲಾವು ನಡೆಯುತ್ತಿಲ್ಲ. ಎಷ್ಟು ದರಕ್ಕೆ ತಮ್ಮ ತರಕಾರಿ ಮಾರಾಟವಾಗಿದೆ ಎಂಬುದೂ ರೈತರಿಗೆ ಗೊತ್ತಾಗುವುದಿಲ್ಲ. ಖಾಸಗಿ ಮಾರುಕಟ್ಟೆ ಪ್ರವೇಶಿಸುವ ಪ್ರತಿ ರೈತರಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ವಿಕ್ರಿ ಮೊತ್ತದ ಮೇಲೆ ಶೇ10 ಕಮಿಷನ್ ರೈತರಿಂದ ಪಡೆಯಲಾಗುತ್ತಿದೆ. ಶೌಚಾಲಯ ಶುಲ್ಕ ₹10 ವಸೂಲಿ ಮಾಡಲಾಗುತ್ತಿದೆ. ಹೀಗೆ ವಿವಿಧ ಸಮಸ್ಯೆಗಳನ್ನು ತರಕಾರಿ ಬೆಳೆಗಾರರು ಎದುರಿಸುತ್ತಿದ್ದರು ಎಂದರು.

ಇದಕ್ಕೂ ಮುಂಚೆ ಹುಕ್ಕೇರಿ, ಸಂಕೇಶ್ವರ, ಗೋಕಾಕ, ಚಿಕ್ಕೋಡಿ ಭಾಗಗಳಿಂದ 150 ಟ್ರ್ಯಾಕ್ಟರ್‌ಗಳಲ್ಲಿ ಬಂದಿದ್ದ ತರಕಾರಿ ಬೆಳೆಗಾರರು ಪಟ್ಟಣದಲ್ಲಿ ಬೃಹತ್ ರ‍್ಯಾಲಿ ನಡೆಸಿ ಸಂಕೇಶ್ವರದ ಖಾಸಗಿ ತರಕಾರಿ ಪೇಟೆಯನ್ನು ಎ.ಪಿ.ಎಂ.ಸಿ ಗೆ ಸ್ಥಳಾಂತರಿಸಲು ತಹಶೀಲ್ದಾರ್‌ ಮಂಜುಳಾ ನಾಯಿಕ ಅವರಿಗೆ ಮನವಿ ಸಲ್ಲಿಸಿದರು.

ಪೊಟೊ- 19 ಎಸಕೆವಿ 2ಇಪಿ- ಸಂಕೇಶ್ವರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸುತಿದ್ದ ತರಕಾರಿ ಬೆಳೆಗಾರರು  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.