ADVERTISEMENT

'ಡ್ರೈವಿಂಗ್‌ ಸ್ಕೂಲ್‌ಗಳಲ್ಲೇ ಪರೀಕ್ಷೆ ನಡೆಸಲು ಅನುಮತಿ ಕೊಡಿ'

ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಸಂಘಗಳ ಒಕ್ಕೂಟದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 14:33 IST
Last Updated 8 ಡಿಸೆಂಬರ್ 2023, 14:33 IST
   

ಬೆಳಗಾವಿ: ರಸ್ತೆ ಸುರಕ್ಷತೆ ದೃಷ್ಟಿಯಿಂದ ವಾಹನ ಚಾಲಕರಿಗೆ ಕಲಿಕಾ ಪರವಾನಗಿ ಪರೀಕ್ಷೆಯನ್ನು ಕಡ್ಡಾಯವಾಗಿ ಮೋಟಾರು ಡ್ರೈವಿಂಗ್‌ ಸ್ಕೂಲ್‌ಗಳಲ್ಲೇ ನಡೆಸಲು ಸರ್ಕಾರ ಅನುಮತಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಸಂಘಗಳ ಒಕ್ಕೂಟದವರು ತಾಲ್ಲೂಕಿನ ಕೊಂಡಸಕೊಪ್ಪದ ಗುಡ್ಡದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

‘ವಾಹನ ಚಾಲನಾ ಪರವಾನಗಿ ಪಡೆಯುವ ಪ್ರತಿ ಚಾಲಕ, ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ತಿಳಿವಳಿಕೆ ಹೊಂದಬೇಕು. ಹಾಗಾಗಿ ಪರವಾನಗಿ ಪಡೆಯುವವರು ನಮ್ಮ ಶಾಲೆಗಳಿಂದಲೇ ನಮೂನೆ–14 ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಶಾಲೆಗಳು ವಾಹನ ತರಬೇತಿಗೆ ವಿಧಿಸುವ ಶುಲ್ಕ ಹೆಚ್ಚಿಸಬೇಕು. ಪ್ರತಿ ತಿಂಗಳು ಸಾರಿಗೆ ಆಯುಕ್ತರು ಸಭೆ ನಡೆಸಿ, ಕುಂದುಕೊರತೆ ಆಲಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದ ಎಲ್ಲ ಪ‍್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯಿದ್ದು, ಕೆಲಸಗಳು ವಿಳಂಬವಾಗುತ್ತಿವೆ. ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಬೇಕು. ಡ್ರೈವಿಂಗ್‌ ಸ್ಕೂಲ್‌ಗಳ ನಿರ್ವಹಣೆಗೆ ಸರ್ಕಾರ ವಿಶೇಷ ಅನುದಾನ ನೀಡಬೇಕು’ ಎಂದೂ ಒತ್ತಾಯಿಸಿದರು.

ADVERTISEMENT

ಸಂಘದ ಅಧ್ಯಕ್ಷ ಆನಂದ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಚ್‌.ಸಿ.ನಾಗರಾಜ, ಕೋಶಾಧ್ಯಕ್ಷ ಬಸವರಾಜ ಹಾನಗಲ್‌, ಗೌರವಾಧ್ಯಕ್ಷ ಟಿ.ಆರ್‌.ಸದಾಶಿವಯ್ಯ ಹಾಜರಿದ್ದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಸಚಿವ ಮಧು ಬಂಗಾರಪ್ಪ, ‘ನಿಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ. ಡಿಸೆಂಬರ್‌ 3ನೇ ವಾರ ಒಕ್ಕೂಟದ ಪ್ರಮುಖರ ಭೇಟಿಗೆ ಅವಕಾಶ ಕೊಡಿಸುತ್ತೇನೆ’ ಎಂದು ಭರವಸೆ ಕೊಟ್ಟರು. ಬಳಿಕ ಒಕ್ಕೂಟದವರು ಪ್ರತಿಭಟನೆ ಹಿಂಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.