ADVERTISEMENT

ಯುಕ್ತಿ–2024: ಇಳಿಸಂಜೆಗೆ ಮೈ ನವಿರೇಳಿಸಿದ ವಿಜಯಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 19:23 IST
Last Updated 13 ಜನವರಿ 2024, 19:23 IST
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ‘ಯುಕ್ತಿ–2024’ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯಪ್ರಕಾಶ್‌ ಹಾಗೂ ಅನುರಾಧಾ ಭಟ್‌ ಗಾಯನ ಪ್ರಸ್ತುತಪಡಿಸಿದ ಪರಿ / ಪ್ರಜಾವಾಣಿ ಚಿತ್ರ
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ‘ಯುಕ್ತಿ–2024’ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯಪ್ರಕಾಶ್‌ ಹಾಗೂ ಅನುರಾಧಾ ಭಟ್‌ ಗಾಯನ ಪ್ರಸ್ತುತಪಡಿಸಿದ ಪರಿ / ಪ್ರಜಾವಾಣಿ ಚಿತ್ರ   

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ‘ಯುಕ್ತಿ–2024’ ರಾಷ್ಟ್ರಮಟ್ಟದ ಸಾಂಸ್ಕೃತಿಕ ಹಾಗೂ ತಾಂತ್ರಿಕ ಉತ್ಸವದಲ್ಲಿ ಹಿನ್ನೆಲೆ ಗಾಯಕ ವಿಜಯಪ್ರಕಾಶ್‌ ಅವರ ಗಾಯನ ಮೋಡಿ ಮಾಡಿತು.

ದೇಶದ ವಿವಿಧೆಡೆಯಿಂದ ಬಂದಿದ್ದ 6,000ಕ್ಕೂ ಅಧಿಕ ಸ್ಪರ್ಧಾಳುಗಳು ಇಳಿಸಂಜೆಯ ತಂಗಾಳಿಗೆ ಮೈಯೊಡ್ಡಿ ಗಾಯನ ಕೇಳಲು ಅಣಿಯಾದರು. ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಹಾಕಿದ್ದ ವರ್ಣರಂಜಿತ ವೇದಿಕೆಯಲ್ಲಿ ಗಾಯಕ ಬರುತ್ತಿದ್ದಂತೆಯೇ ಯುವ ಮನಸ್ಸುಗಳು ಹೋಯ್‌ ಎಂದು ಕೂಗಿದವು.

ಕನ್ನಡ, ಹಿಂದಿ ಚಲನಚಿತ್ರಗಳಲ್ಲಿ ಮೂಡಿಬಂದ ಹಲವು ಗೀತೆಗಳಲ್ಲಿ ಆಯ್ದ, ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಿದಾಗ ಯುವಜನರು ಕುಣಿದು ಕುಪ್ಪಳಿಸಿದರು. ಕಿವಿಗಡಚಿಕ್ಕುವ ವಾದ್ಯ ಮೇಳದ ಬೀಟ್‌ಗಳಿಗೆ ತಕ್ಕಂತೆ ಹೆಜ್ಜೆ ಹಾಕಿದರು.

ADVERTISEMENT

ಪುನೀತ್‌ ರಾಜ್‌ಕುಮಾರ್ ಅವರ ಚಲನಚಿತ್ರಕ್ಕೆ ಹಾಡಿದ್ದ ‘ಗೊಂಬೆ ಹೇಳುತೈತೆ’ ಗೀತೆಯನ್ನು ಆರಂಭಿಸುತ್ತಿದ್ದಂತೆಯೇ ಮೈಯಲ್ಲಿ ಪುಳಕ. ಗಾಯಗ ವಿಜಯಪ್ರಕಾಶ್‌ ಅವರೊಂದಿಗೆ ದನಿಗೂಡಿಸಿದ ಯುವಕ– ಯುವತಿಯರು ತಮ್ಮ ಮೊಬೈಲ್‌ ಟಾರ್ಚ್‌ಗಳನ್ನು ಬೆಳಗಿ, ಪುನೀತ್‌ ಅವರಿಗೆ ಭಾವನಮನ ಸಲ್ಲಿಸಿದರು.

ವಿಜಯಪ್ರಕಾಶ್‌ ಹಾಗೂ ಅನುರಾಧ ಭಟ್‌ ಅವರಿಂದ ಮೂಡಿಬಂದ ಯುಗಳ ಗೀತೆಗಳಂತೂ ಹಸಿ ಮನಸ್ಸುಗಳಲ್ಲಿ ಚೈತನ್ಯ ಮೂಡಿಸಿದವು. ಸಿಂಗಾರ ಸಿರಿಯೇ, ಯಾರೇ ಬಂದರೂ, ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊಂಡನೊ... ಮುಂತಾದ ಪ್ರಸಿದ್ಧ ಗೀತೆಗಳನ್ನ ಹಾಡಿ ರಂಜಿಸಿದರು. ಗಾಯಕರಾದ ನೇಹಾ, ಅಶ್ವಿನ್‌ ಶರ್ಮಾ ಅವರ ಧ್ವನಿಯಲ್ಲೂ ಸುಮಧುರ ಗೀತೆಗಳು ಮೂಡಿಬಂದವು.

ಇದಕ್ಕೂ ಮುನ್ನ ವಿಶ್ವವಿದ್ಯಾಲಯದಿಂದ ಗಾಯಕರನ್ನು ಸನ್ಮಾನಿಸಲಾಯಿತು. ವಿಟಿಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ, ಕುಲಸಚಿವ ಪ್ರೊ.ಬಿ.ಈ. ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವ ಪ್ರೊ.ಟಿ.ಎನ್. ಶ್ರೀನಿವಾಸ, ಕಾರ್ಯಕಾರಿ ಪರಿಷತ್ ಸದಸ್ಯ ಸನ್ನಿ ರಾಜ್, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಡಿಸಿಪಿ ‍ಪಿ.ವಿ.ಸ್ನೇಹ ಕೂಡ ವೇದಿಕೆ ಮೇಲಿದ್ದರು.

ಯುವ ದಿನಾಚರಣೆ ಅಂಗವಾಗಿ ನಡೆದ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ‘ಯುಕ್ತಿ–2024’ ಕಾರ್ಯಕ್ರಮದಲ್ಲಿ ಗಾಯಕ ವಿಜಯಪ್ರಕಾಶ್‌ ಅವರ ಗಾಯನ ವೇಳೆ ಮೊಬೈಲ್‌ ದೀಪ ಬೆಳಗಿಸಿದ ಯುವಪಡೆ  / ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.