ಅಥಣಿ: ‘ಬಿಜೆಪಿ ರಾಜ್ಯ ಘಟದ ಅಧ್ಯಕ್ಷ ವಿಜಯೇಂದ್ರ ಅವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೊರಟ್ಟಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಹೊರಟಿದ್ದಾರೋ ಅಥವಾ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಹೊರಟಿದ್ದಾರೋ ಎಂಬುವುದನ್ನು ಕಾದು ನೋಡಬೇಕಿದೆ’ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ ದೂರಿದರು.
ಅಥಣಿ ತಾಲ್ಲೂಕಿನ ಹಲ್ಯಾಳ ಗ್ರಾಮದಲ್ಲಿ ಸೋಮವಾರ ರಾತ್ರಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ನಿಗಮದ ಹಣವನ್ನು ಈ ಸರ್ಕಾರ ಕೊಳ್ಳೆ ಹೊಡೆದಿದೆ. ಮತ್ತೊಂದೆಡೆ ಮೈಸೂರಿನ ‘ಮುಡಾ’ ಹಗರಣದಲ್ಲಿ ದಲಿತ ಸಮುದಾಯದ ರೈತನ ಜಮೀನು ನುಂಗಿದ್ದಾರೆ. ನಾವು ಈ ಭ್ರಷ್ಟಾಚಾರ ಮುಂದಿಟ್ಟುಕೊಂಡು, ಯಾವುದೇ ಒಳ ಒಪ್ಪಂದವಿಲ್ಲದೇ ಹೋರಾಟ ಮಾಡುತ್ತಿದ್ದೇವೆ’ ಎಂದರು.
‘ಮುಡಾ’ ಹಗರಣ ಮುಂದಿಟ್ಟುಕೊಂಡು ವಿಜಯೇಂದ್ರ; ಡಿ.ಕೆ.ಶಿವಕುಮಾರ್ ಸಲುವಾಗಿ ಯಾತ್ರೆ ಹೊರಟಂತಿದೆ’ ಎಂದರು.
‘ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳು ಬಂದ್ ಆಗಿವೆ. ಅದರಲ್ಲೂ ಗೃಹಲಕ್ಷ್ಮಿ ಹಣ ಮಹಿಳೆಯರಿಗೆ ತಲುಪುತ್ತಿಲ್ಲ. ‘ಭಾಗ್ಯಲಕ್ಷ್ಮಿ’ ಮಾತ್ರ ಬೆಳಗಾವಿಯಲ್ಲಿ ಕುಳಿತಿದ್ದಾರೆ. ಹಣ ಬಿಡುಗಡೆ ಮಾಡಿ ಇಲ್ಲವೇ ಮನೆಗೆ ನಡೀರಿ’ ಎಂದು ಅವರು ಸಚಿವೆ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಕಿಡಿ ಕಾರಿದರು.
ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಮಾತನಾಡಿ, ‘ಅಪ್ಪ– ಮಕ್ಕಳು ಇಷ್ಟು ದಿನ ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡಿಕೊಂಡೇ ಬಂದಿದ್ದಾರೆ. ಅವರ ಕಪಿಮುಷ್ಟಿಯಿಂದ ಈ ಪಕ್ಷವನ್ನು ಹೊರತೆಗೆಯಬೇಕು. ನಾವು ಹೈಕಮಾಂಡ್‌ಗೆ ಮನವಿ ಮಾಡುತ್ತೇವೆ’ ಎಂದರು.
‘ರಾಜ್ಯ ಸಿದ್ದರಾಮಯ್ಯ ಕಂಟ್ರೋಲ್ ತಪ್ಪಿದೆ. ಸ್ವತಃ ಸಿದ್ದರಾಮಯ್ಯ ಅವರೇ ಡಿ.ಕೆ.ಶಿವಕುಮಾರ್ ಕಂಟ್ರೋಲ್‌ನಲ್ಲಿದ್ದಾರೆ. ಇದನ್ನು ಸರಿ ಮಾಡಲು ಸಾಧ್ಯವಿಲ್ಲ. ಸಾಮೂಹಿಕ ರಾಜೀನಾಮೆ ಕೊಟ್ಟು ಮತ್ತೊಮ್ಮೆ ಚುನಾವಣೆ ಎದುರಿಸಬೇಕು’ ಎಂದರು.
‘ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಖಂಡಿಸಿ ನಾವು ಸಾಮೂಹಿಕ ನಾಯಕತ್ವದಲ್ಲಿ ಬಳ್ಳಾರಿಗೆ ಪಾದಯಾತ್ರೆ, ಹೋಗುತ್ತೇವೆ. ‘ಮುಡಾ’ ಹಗರಣ ವ್ಯಕ್ತಿಗತವಾಗಿದೆ. ವಾಲ್ಮೀಕಿ ನಿಗಮದ ಹಣ ಸಮುದಾಯಕ್ಕೆ ಸೇರಿದ್ದು. ನಮ್ಮ ಉದ್ದೇಶ ಸಮುದಾಯಕ್ಕೆ ನ್ಯಾಯ ಕೊಡಿಸುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.