ADVERTISEMENT

ಮಳೆಗಾಲದಲ್ಲಿ ಸಂಪರ್ಕ ಕಡಿದುಕೊಳ್ಳುವ ಹಳ್ಳಿಗಳು: ಕಾಡುವಾಸಿಗಳ ಬದುಕಿಗೆ ಲಾಕ್‌ಡೌನ್

ಪ್ರಸನ್ನ ಕುಲಕರ್ಣಿ
Published 29 ಜುಲೈ 2024, 4:34 IST
Last Updated 29 ಜುಲೈ 2024, 4:34 IST
ಖಾನಾಪುರ ತಾಲ್ಲೂಕಿನ ಶಿರೋಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರ ಬಳಿ ಮಾಂಡವಿ ನದಿಗೆ ಕಟ್ಟಿದ ಕಾಲುಸಂಕ
ಖಾನಾಪುರ ತಾಲ್ಲೂಕಿನ ಶಿರೋಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರ ಬಳಿ ಮಾಂಡವಿ ನದಿಗೆ ಕಟ್ಟಿದ ಕಾಲುಸಂಕ   

ಖಾನಾಪುರ: 93 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶದಿಂದ ಸುತ್ತುವರಿದ ಖಾನಾಪುರ ತಾಲ್ಲೂಕಿನ 100ಕ್ಕೂ ಹೆಚ್ಚು ಗ್ರಾಮಗಳು ದಟ್ಟ ಅರಣ್ಯ ಪ್ರದೇಶದಲ್ಲಿವೆ. ಪ್ರತಿ ಬಾರಿ ಮಳೆಗಾಲದಲ್ಲಿ ಈ ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿತಗೊಳ್ಳುತ್ತವೆ. ಮಳೆಗಾಲ ಮುಗಿಯುವವರೆಗೂ ಭಯದಲ್ಲೇ ಬದುಕಬೇಕಾದ ಅನಿವಾರ್ಯವಿದೆ.

ಲೋಂಡಾ, ನಾಗರಗಾಳಿ, ಕಣಕುಂಬಿ ಮತ್ತು ಭೀಮಗಡ ವನ್ಯಧಾಮ ವ್ಯಾಪ್ತಿಯಲ್ಲಿರುವ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಹೊಲ– ಗದ್ದೆಗಳು ಮತ್ತು ಜನವಸತಿಗಿಂತ ಅರಣ್ಯ ಪ್ರದೇಶವೇ ಅಧಿಕ ಪ್ರಮಾಣದಲ್ಲಿದೆ. ವನ್ಯಜೀವಿಗಳ ಮೇಲೆ ಮನುಷ್ಯರ ದಾಳಿ ಹಾಗೂ ಮನುಷ್ಯರ ಮೇಲೆ ಮೃಗಗಳ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ಪೂರ್ವಜರ ಕಾಲದಿಂದಲೂ ಇಂತಹ ಗ್ರಾಮಗಳಲ್ಲಿ ವಾಸಿಸುತ್ತಿರುವ ಕಾನನವಾಸಿಗಳು ಇಂದಿಗೂ ರಸ್ತೆ, ಸೇತುವೆ, ಸಾರಿಗೆ ವ್ಯವಸ್ಥೆ, ಶಿಕ್ಷಣ, ವಿದ್ಯುತ್ ಆರೋಗ್ಯ ಮತ್ತಿತರ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಸ್ಥಳಾಂತರ ಯತ್ನ: ಕಾಡು ಜನರ ಮನವೊಲಿಸಿ ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಇತ್ತೀಚಿನ ದಿನಗಳಲ್ಲಿ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಭೀಮಗಡ ವನ್ಯಧಾಮ ವ್ಯಾಪ್ತಿಯ ತಳೇವಾಡಿ ಗ್ರಾಮದ ಜನರ ಮನವೊಲಿಸಿ ಅವರು ವಾಸಿಸುವ ಊರಿನ ಸುತ್ತಮುತ್ತಲಿನ ಅರಣ್ಯಪ್ರದೇಶವನ್ನು ಸಂಪೂರ್ಣವಾಗಿ ವನ್ಯಜೀವಿಗಳಿಗೆ ಬಿಟ್ಟುಕೊಡುವ ಕೆಲಸ ಬಹುತೇಕ ಮುಗಿತ್ತ ಬಂದಿದೆ.

ADVERTISEMENT

ಇದೇ ಮಾದರಿಯಲ್ಲಿ ಇನ್ನುಳಿದ ಕಾನನದಂಚಿನ ಗ್ರಾಮಗಳಲ್ಲೂ ಈ ಕಾರ್ಯವನ್ನು ಕಾರ್ಯಗತಗೊಳಿಸುವುದು ಅಗತ್ಯ ಎಂಬುದು ಜನರ ಬೇಡಿಕೆ.

ಮೂರು ಕಾಲುಸಂಕ: ನೇರಸಾ ಗ್ರಾಮದಿಂದ ಕೊಂಗಳಾ, ಗವ್ವಾಳಿ ಮತ್ತು ಪಾಸ್ತೋಳಿ ಗ್ರಾಮಗಳಿಗೆ ತೆರಳಲು ಮಧ್ಯೆ ಹರಿಯುವ ಭಂಡೂರಿ ಹಳ್ಳ ಮತ್ತು ಮಹದಾಯಿ ನದಿಗಳಿಗೆ ತಲಾ ಒಂದು ಹಾಗೂ ಕೃಷ್ಣಾಪುರ ಗ್ರಾಮದಿಂದ ಗೋವಾಗೆ ತೆರಳುವ ಮಾರ್ಗದ ಮಾಂಡವಿ ನದಿಗೆ ಒಂದು ಸೇರಿದಂತೆ ಮೂರು ಕಾಲುಸಂಕಗಳನ್ನು ಸ್ಥಳೀಯ ಜನರು ನಿರ್ಮಿಸಿಕೊಳ್ಳುತ್ತಾರೆ.

ಕೃಷ್ಣಾಪುರ ಗ್ರಾಮದಿಂದ ಗೋವಾ ರಾಜ್ಯದ ವಾಳಪೈ ಪಟ್ಟಣಕ್ಕೆ ತೆರಳುವ ಸಲುವಾಗಿ ಕೃಷ್ಣಾಪುರ ಗ್ರಾಮಸ್ಥರು  ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಜೂನ್ ತಿಂಗಳಲ್ಲಿ ನಿರ್ಮಾಣವಾಗುವ ಕಾಲುಸಂಕಗಳು ಅಕ್ಟೋಬರ್ ತಿಂಗಳವರೆಗೆ ತಾಳಿಕೊಳ್ಳುತ್ತವೆ. ಮತ್ತೆ ಮಳೆ ಬಂದರೆ ಅದೇ ಪರಿಸ್ಥಿತಿ ಮರಳುತ್ತದೆ.

ಖಾನಾಪುರ ತಾಲ್ಲೂಕಿನ ಮಾನ ಗ್ರಾಮದವರೆಗಿನ ಕಚ್ಚಾರಸ್ತೆಯನ್ನು ಯುವಕರೇ ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು
93ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ ಕಾಡು ಬೀಡುಬಿಟ್ಟಿವೆ ಅಸಂಖ್ಯಾತ ಪ್ರಾಣಿ, ಪಕ್ಷಿಗಳು ನಿರಂತರವಾಗಿ ನಡೆದಿದೆ ಮಾನವ– ವನ್ಯಜೀವಿ ಸಂಘರ್ಷ

ಇವರೇನಂತಾರೆ?

ಸಚಿವರ ಗಮನಕ್ಕೆ ತರುವೆ ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಜನರಿಗೆ ಮೂಲ ಸೌಲಭ್ಯ ಒದಗಿಸಲು ಅರಣ್ಯ ಇಲಾಖೆಯ ಕಾನೂನಿನ ಅಡಚಣೆ ಎದುರಾಗುತ್ತದೆ. ಆದರೂ ಸಚಿವರ ಮತ್ತು ಹಿರಿಯ ಅಧಿಕಾರಿಗಳ ಮನವೊಲಿಸಿ ಅವರಿಗೆ ಕಾನನವಾಸಿಗಳ ಪರಿಸ್ಥಿತಿ ವಿವರಿಸಿ ಪರಿಹಾರ ಒದಗಿಸುವ ಕೆಲಸ ಮಾಡಲಿದ್ದೇನೆ.

-ವಿಠ್ಠಲ ಹಲಗೇಕರ ಶಾಸಕ

ಪೊಳ್ಳು ಭರವಸೆ ಮತ ಕೇಳಲು ಕಾನನಂಚಿನ ಊರುಗಳಿಗೆ ಭೇಟಿ ನೀಡುವ ರಾಜಕಾರಣಿಗಳು ನಂತರ ನಮ್ಮ ಬವಣೆಗಳನ್ನು ಆಲಿಸಲು ಸಿದ್ಧರಿಲ್ಲ. ಪೊಳ್ಳು ಭರವಸೆಗಳು ಮಾತ್ರ ಸಿಕ್ಕಿವೆ. ನಾವು ಹಿಂದಿನಿಂದಲೂ ನಡೆದುಕೊಂಡು ಬಂದಂತೆ ಜೀವನ ನಡೆಸುತ್ತಿದ್ದೇವೆ.

–ದತ್ತಾರಾಮ ಗಾವಡೆ ಪಾರವಾಡ ನಿವಾಸಿ

ಸ್ಥಳಾಂತರ ಯತ್ನ ಲೋಂಡಾ ಭೀಮಗಡ ಮತ್ತು ಕಣಕುಂಬಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹಲವಾರು ಸಣ್ಣಪುಟ್ಟ ಹಳ್ಳಿಗಳು ಕಾನನದ ನಡುವೆ ಇವೆ. ದಟ್ಟ ಅರಣ್ಯದ ನಡುವೆ ಇರುವ ಕೆಲ ಗ್ರಾಮಗಳನ್ನು ಅರಣ್ಯ ಪ್ರದೇಶದಿಂದ ಹೊರಗೆ ಸ್ಥಳಾಂತರಿಸುವ ಕೆಲಸಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಸ್ಥಳಾಂತರಕ್ಕೆ ಮುಂದಾಗುವ ಕಾನನವಾಸಿಗಳಿಗೆ ಅರಣ್ಯ ಇಲಾಖೆಯಿಂದ ಪರಿಹಾರವನ್ನೂ ನೀಡಲಾಗುತ್ತದೆ.

–ಸುನೀತಾ ನಿಂಬರಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ಕಾಲುಸಂಕಕ್ಕೆ ನೆರವು ಭೀಮಗಡ ವನ್ಯಧಾಮ ವ್ಯಾಪ್ತಿಯ ಕೃಷ್ಣಾಪುರ ಗ್ರಾಮದಿಂದ ಗೋವಾ ರಾಜ್ಯದ ವಾಳಪೈ ಕಡೆಗೆ ಹೋಗಿಬರಲು ಮಾರ್ಗಮಧ್ಯದ ಮಾಂಡವಿ ನದಿಗೆ ಸೇತುವೆ ಇಲ್ಲದ್ದರಿಂದ ಮಳೆಗಾಲದಲ್ಲಿ ಸಮಸ್ಯೆ ಉಂಟಾಗುತ್ತದೆ. ತಾತ್ಕಾಲಿಕ ಕಾಲುಸಂಕ ನಿರ್ಮಿಸಲು ಪಂಚಾಯ್ತಿಯಿಂದ ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಆರ್ಥಿಕ ಸಹಾಯ ಮಾಡುತ್ತೇವೆ.

–ಪ್ರಭಾಕರ ಭಟ್ ಪಿಡಿಒ ಶಿರೋಲಿ

ಅರಣ್ಯ ಕಾನೂನು ಅಡ್ಡಿ
ಈ ಗ್ರಾಮಗಳಿಗೆ ಹೋಗಿ ಬರಲು ಸಮರ್ಪಕ ರಸ್ತೆಯಿಲ್ಲ ಸೇತುವೆಗಳಿಲ್ಲ. ದೂರವಾಣಿ ವಿದ್ಯುತ್ ವೈದ್ಯಕೀಯ ಹಾಗೂ ಸಾರಿಗೆ ವ್ಯವಸ್ಥೆಗಳೂ ಇಲ್ಲ. ಸರ್ಕಾರ ಈ ಗ್ರಾಮಗಳಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆದಿದೆ. ಆದರೆ ಮಕ್ಕಳ ಸಂಖ್ಯೆ 20 ದಾಟಿಲ್ಲ. 5ನೇ ತರಗತಿಯ ನಂತರ ಮುಂದಿನ ಶಿಕ್ಷಣಕ್ಕೆ ಸಮೀಪದಲ್ಲಿ ವ್ಯವಸ್ಥೆಯಿಲ್ಲ. ವನ್ಯಜೀವಿ ಸಂರಕ್ಷಣಾ ಅಧಿನಿಯಮ ಅಡಿಯಲ್ಲಿ ಈ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಿಷೇಧವಿದೆ. ಆದ್ದರಿಂದ ಅರಣ್ಯ ಪ್ರದೇಶದ ಎಲ್ಲ ಗ್ರಾಮಗಳ ಮೂಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಅರಣ್ಯ ಪ್ರದೇಶದಿಂದ ಸುತ್ತುವರೆದ ಗ್ರಾಮಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಭೇಟಿ ಕೇವಲ ಸಾಂದರ್ಭಿಕ ಸಮಯಗಳಲ್ಲಿ ಮಾತ್ರ. ಮಳೆಗಾಲದ ಸಮಯದಲ್ಲಿ ಎಡೆಬಿಡದೇ ಸುರಿದ ಮಳೆಯಿಂದಾಗಿ ಉಂಟಾದ ಪ್ರವಾಹದ ಸಂದರ್ಭದಲ್ಲಿ ತಮ್ಮ ಕೆಲಸ ಎಂಬಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅತೀವೃಷ್ಟಿ ಬಾಧಿತ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಆಗ ಮಾತ್ರ ಇಲ್ಲಿಯ ಜನರಿಗೆ ಭವಿಷ್ಯದಲ್ಲಿ ಸಂಪರ್ಕ ರಸ್ತೆ ಸೇತುವೆ ಹಾಗೂ ಇನ್ನಿತರ ಕಾರ್ಯಗಳನ್ನು ಮಾಡಿಕೊಡುತ್ತೇವೆ ಎಂಬ ಭರವಸೆ ನೀಡಿ ಹೊರಟುಹೋಗುತ್ತಾರೆ. ಆದರೆ ಕಾನೂನಿನ ಚೌಕಟ್ಟಿನಲ್ಲಿ ಇವರಿಗೆ ಯಾವ ರೀತಿಯ ನ್ಯಾಯ ಒದಗಿಸಬಹುದೆಂಬ ಬಗ್ಗೆ ವಿವೇಚಿಸಲು ಪುರುಸೊತ್ತಿಲ್ಲ.
ಜನರಿಗಿಂತ ಮೃಗಗಳೇ ಅಧಿಕ
ಗವ್ವಾಳಿ ಕೊಂಗಳಾ ಪಾಸ್ತೊಳಿ ಮಂಗೇನಹಾಳ ಮೆಂಡಿಲ್ ದೇಗಾಂವ ಕೃಷ್ಣಾಪುರ ತಳೇವಾಡಿ ಅಮಗಾಂವ ಜಾಮಗಾಂವ ಪಾರವಾಡ ಚಿಕಲೆ ಚಿಗುಳೆ ಮಾನ ಸಡಾ ಹೊಳಂದ ವರ್ಕಡ್ ಪಾಟೆ ಮಾಂಜರಪೈ ಘೋಸೆ ಚಾಪೋಲಿ ಕಾಪೋಲಿ ಚಿರೆಖಾನೆ ತಳಾವಡೆ ಮೊರಬ ಬೆಟಗೇರಿ ಜಟಗೆ ಕಬನಾಳಿ ಶಿಂಧೊಳ್ಳಿ ಮೊಹಿಶೇತ ಮಾಚಾಳಿ ಸಾತನಾಳಿ ಜಾಂಬೇಗಾಳಿ ಸೇರಿದಂತೆ ವಿವಿಧ ಹಳ್ಳಿಗಳ ವ್ಯಾಪ್ತಿಯಲ್ಲಿ ಜನಸಂಖ್ಯೆಗಿಂತ ಆನೆ ಹುಲಿ ಚಿರತೆ ಕರಡಿ ಕಾಡುಕೋಣ ಕಾಡೆಮ್ಮೆ ಮುಳ್ಳುಹಂದಿ ಕಾಡುಹಂದಿ ನರಿ ಕಾಡುನಾಯಿ ತೋಳ ಇತ್ಯಾದಿ ಮೃಗಗಳ ಸಂಖ್ಯೆಯೇ ಅಧಿಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.