ADVERTISEMENT

ಅಮೆರಿಕ ಮೂಲದ 100ಕ್ಕೂ ಅಧಿಕ ಕಂಪನಿ ತರಲು ಪ್ರಯತ್ನ: ಪ್ರೊ.ಎಸ್‌.ವಿದ್ಯಾಶಂಕರ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 5:08 IST
Last Updated 16 ಜುಲೈ 2024, 5:08 IST
ಪ್ರೊ.ಎಸ್‌.ವಿದ್ಯಾಶಂಕರ್‌
ಪ್ರೊ.ಎಸ್‌.ವಿದ್ಯಾಶಂಕರ್‌   

ಬೆಳಗಾವಿ: ‘ಸ್ಥಳೀಯ ಪ್ರತಿಭೆಗಳಿಗೆ ತರಬೇತಿ, ಮಾರ್ಗದರ್ಶನ ನೀಡಿ, ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಮೆರಿಕ ಮೂಲದ 100ಕ್ಕೂ ಅಧಿಕ ಕಂಪನಿಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ(ವಿಟಿಯು) ಆವರಣಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಈ ಸಂಬಂಧ ಮಾತುಕತೆ ನಡೆದಿದೆ’ ಎಂದು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂಜಿನಿಯರಿಂಗ್ ಕೋರ್ಸ್‌ ಮುಗಿಸಿ ಹೊರಬರುವ ವಿದ್ಯಾರ್ಥಿಗಳಿಗೆ ಔದ್ಯೋಗಿಕ ವಲಯಕ್ಕೆ ಅಗತ್ಯವಿರುವ ಕೌಶಲಗಳ ಕುರಿತು ಮಾರ್ಗದರ್ಶನ ನೀಡಲು ವಿಶ್ವೇಶ್ವರಯ್ಯ ರಿಸರ್ಚ್ ಮತ್ತು ಇನ್ನೋವೇಷನ್‌ ಫೌಂಡೇಷನ್ ಸ್ಥಾಪಿಸಲಾಗಿದೆ. ಅದರಡಿ ವಿವಿಧ ಕಂಪನಿಗಳು ಇಲ್ಲಿ ತಮ್ಮ ಕೇಂದ್ರ ತೆರೆಯಲಿವೆ’ ಎಂದರು.

‘ವಿಶ್ವವಿದ್ಯಾಲಯ ಆವರಣಕ್ಕೆ ಈಗಾಗಲೇ ಮೊದಲ ಕಂಪನಿ ಆಗಮಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಿದ್ದೇವೆ. ಒಂದು ವರ್ಷದೊಳಗೆ ಕನಿಷ್ಠ 50 ಕಂಪನಿ ಬರುವ ನಿರೀಕ್ಷೆಯಿದೆ. ಕೆಲವು ಕಂಪನಿ ಇಲ್ಲಿ ಆರಂಭವಾದ ನಂತರ, ವಿಟಿಯು ಆವರಣದಲ್ಲಿ ಹೊಸದಾಗಿ ನಿರ್ಮಿಸಿದ ಆಡಳಿತಾತ್ಮಕ ಬ್ಲಾಕ್ ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.

‘ವಿಟಿಯು ಸಂಯೋಜಿತ ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೌಶಲ ಆಧಾರಿತ ತರಬೇತಿ ನೀಡಲು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಪ್ರತಿ ಕಾಲೇಜಿನ 240 ವಿದ್ಯಾರ್ಥಿಗಳನ್ನು ತರಬೇತಿಗೆ ಅಲ್ಲಿಗೆ ಕಳುಹಿಸಬಹುದು. ಇದಕ್ಕಾಗಿ ಆಯಾ ಕಾಲೇಜಿನ ಪ್ರಾಚಾರ್ಯರು ಆಸಕ್ತ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಬೇಕು. ಇದಕ್ಕೆ ಪೂರಕವಾಗಿ ನಾವು ವೇದಿಕೆ ಕಲ್ಪಿಸುತ್ತೇವೆ’ ಎಂದು ಹೇಳಿದರು.

ADVERTISEMENT

36 ಸ್ವಾಯತ್ತ ಕಾಲೇಜು:

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ–2020 ಜಾರಿಯಾದ ನಂತರ, ವಿಟಿಯು ವ್ಯಾಪ್ತಿಯಲ್ಲಿದ್ದ ಹೆಚ್ಚಿನ ಎಂಜಿನಿಯರಿಂಗ್‌ ಕಾಲೇಜುಗಳು ಸ್ವಾಯತ್ತ ಸ್ಥಾನಮಾನಕ್ಕಾಗಿ ಅರ್ಜಿ ಸಲ್ಲಿಸುತ್ತಿವೆ. ವಿಶ್ವವಿದ್ಯಾಲಯ ಅನುದಾನ ಆಯೋಗವೂ(ಯುಜಿಸಿ) 2030ರ ವೇಳೆಗೆ ಎಲ್ಲ ಕಾಲೇಜು ಸ್ವಾಯತ್ತವಾಗಿರಬೇಕು ಎಂದು ಬಯಸುತ್ತದೆ. ಹಾಗಾಗಿ 212 ಸಂಯೋಜಿತ ಕಾಲೇಜುಗಳಲ್ಲಿ 36 ಸ್ವಾಯತ್ತವಾಗಿವೆ. ಆದರೆ, ಆಯಾ ಕಾಲೇಜಿನವರು ನಾವು ನಿಗದಿಪಡಿಸಿದ ಶೇ 80ರಷ್ಟು ಪಠ್ಯಕ್ರಮವನ್ನೇ ಅನುಸರಿಸುತ್ತಿದ್ದಾರೆ. ಅಲ್ಲಿನ ಶಿಕ್ಷಣದ ಗುಣಮಟ್ಟದ ಮೇಲ್ವಿಚಾರಣೆ ನಾವೇ ಮಾಡುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸ್ವಾಯತ್ತತೆ ಕೋರಿ ಅರ್ಜಿ ಸಲ್ಲಿಸುವ ಕಾಲೇಜುಗಳ ಪರಿಶೀಲನೆಗಾಗಿ ವಿ.ವಿಯ ಕಾರ್ಯಕಾರಿ ಮಂಡಳಿಯು ಸ್ಥಾಯಿ ಸಮಿತಿ ರಚಿಸಿದೆ. ಆ ಸಮಿತಿ ಸದಸ್ಯರು ಕಾಲೇಜು ಪರಿಶೀಲಿಸಿ, ತಿಂಗಳೊಳಗೆ ವರದಿ ಸಲ್ಲಿಸುತ್ತಾರೆ. ಅದನ್ನು ಆಧರಿಸಿ ನಾವು ಯುಜಿಸಿಗೆ ಶಿಫಾರಸು ಕಳುಹಿಸುತ್ತೇವೆ. ನಂತರ ನಿಯಮಾನುಸಾರ ಸ್ವಾಯತ್ತ ಸ್ಥಾನಮಾನ ನೀಡಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.