ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದಲ್ಲಿ 23ನೇ ಘಟಿಕೋತ್ಸವ (ಭಾಗ–2) ಮಾರ್ಚ್ 7ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ ಹೇಳಿದರು.
‘ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೆಲ್ಕೋ ಫೌಂಡೇಷನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಹರೀಶ ಹಂದೆ ಆಗಮಿಸುವರು. ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಉಪಸ್ಥಿತರಿರುವರು’ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈ ಹಿಂದೆ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗಾಗಿ ವರ್ಷಕ್ಕೊಮ್ಮೆ ಏಕಕಾಲಕ್ಕೆ ಘಟಿಕೋತ್ಸವ ನಡೆಯುತ್ತಿತ್ತು. ಆದರೆ, ಸ್ನಾತಕ ಕೋರ್ಸ್‌ಗಳ ಫಲಿತಾಂಶ ಬೇಗ ಪ್ರಕಟಗೊಳ್ಳುವ ಕಾರಣ, ವಿದ್ಯಾರ್ಥಿಗಳು ಘಟಿಕೋತ್ಸವ ಪ್ರಮಾಣಪತ್ರಕ್ಕಾಗಿ ಎಂಟು ತಿಂಗಳು ಕಾಯಬೇಕಿತ್ತು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವವರು, ಉದ್ಯೋಗ ಹುಡುಕುವವರಿಗೂ ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸಲು 2023ರ ಆ.1ರಂದು ಸ್ನಾತಕ ವಿದ್ಯಾರ್ಥಿಗಳಿಗೆ ಮೊದಲ ಹಂತದ ಘಟಿಕೋತ್ಸವ ನಡೆಸಿದ್ದೆವು. ಈಗ ಸ್ನಾತಕೋತ್ತರ ಕೋರ್ಸ್‌ಗಳು(ಎಂಬಿಎ, ಎಂಸಿಎ, ಎಂ.ಟೆಕ್, ಎಂ.ಆರ್ಚ್, ಎಂ.ಪ್ಲ್ಯಾನ್) ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಎರಡನೇ ಹಂತದ ಘಟಿಕೋತ್ಸವ ನಡೆಸುತ್ತಿದ್ದೇವೆ’ ಎಂದರು.
‘ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಒಂದೇ ವರ್ಷದಲ್ಲಿ ಎರಡು ಘಟಿಕೋತ್ಸವ ನಡೆಯುತ್ತಿರುವುದು ನಮ್ಮಲ್ಲೇ ಮೊದಲು. ಈ ಪದ್ಧತಿ ಮುಂದುವರಿಯಲಿದೆ. ಆದರೆ, ಮೊದಲ ಹಂತದ ಘಟಿಕೋತ್ಸವದಲ್ಲಷ್ಟೇ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು’ ಎಂದು ಹೇಳಿದರು.
ಎಷ್ಟು ಮಂದಿಗೆ ಪದವಿ: 4,514 ಎಂಬಿಎ, 4,024 ಎಂಸಿಎ, 920 ಎಂ.ಟೆಕ್, 44 ಎಂ.ಆರ್ಚ್, 27 ಎಂ.ಪ್ಲ್ಯಾನ್ ಪದವಿ ಪ್ರದಾನ ಮಾಡಲಾಗುವುದು. ಪಿಎಚ್.ಡಿ–667, ಎಂ.ಎಸ್ಸಿ ಎಂಜಿನಿಯರಿಂಗ್ ಬೈ ರಿಸರ್ಚ್–2, ಇಂಟಿಗ್ರೇಟೆಡ್ ಡ್ಯುಯೆಲ್ ಡಿಗ್ರಿ ಟು ರಿಸರ್ಚ್–2 ಸಂಶೋಧನಾ ಪದವಿಗಳನ್ನು ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು.
ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್. ಶ್ರೀನಿವಾಸ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.