ADVERTISEMENT

ಮಾ.10ಕ್ಕೆ ವಿಟಿಯು ಘಟಿಕೋತ್ಸವ; ರಾಯಚೂರಿನ ಬುಶ್ರಾಗೆ ದಾಖಲೆಯ 16 ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 14:09 IST
Last Updated 5 ಮಾರ್ಚ್ 2022, 14:09 IST
   

ಬೆಳಗಾವಿ: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ 21ನೇ ವಾರ್ಷಿಕ ಘಟಿಕೋತ್ಸವವನ್ನು ಮಾರ್ಚ್ 10ರಂದು ಬೆಳಿಗ್ಗೆ 11.30ಕ್ಕೆ‌ ಇಲ್ಲಿನ ‘ಜ್ಞಾನಸಂಗಮ’ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ’ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭೆ ಸಭಾಪತಿ ಓಂ ಬಿರ್ಲಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ತಾಂತ್ರಿಕ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುವುದು. ಇನ್ಫೊಸಿಸ್ ಸಹ ಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣನ್, ಹೈದರಾಬಾದ್‌ನ ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷ ಡಾ‌‌.ಕೃಷ್ಣ ಎಲ್ಲಾ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಹೈಎನರ್ಜಿ ಭೌತಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಪ್ರೊ.ರೋಹಿಣಿ‌ ಗೋಡಬೋಲೆ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘57,498 ಬಿಇ/ಬಿ.ಟೆಕ್, 902 ಬಿ.ಆರ್ಕ್.,‌ 12 ಬಿ ಪ್ಲಾನ್, 4,362 ಎಂಬಿಎ, 1,387 ಎಂಸಿಎ, 1,292 ಎಂ.ಟೆಕ್, 73 ಎಂ.ಆರ್ಕ್. ಮತ್ತು 33 ಪಿಜಿ ಡಿಪ್ಲೊಮಾ, 515 ಪಿಎಚ್.ಡಿ., 4 ಎಂ.ಎಸ್ಸಿ. (ಎಂಜಿನಿಯರಿಂಗ್) ಬೈ ರಿಸರ್ಚ್ ಮತ್ತು 3 ಇಂಟಿಗ್ರೇಟೆಡ್‌ ಡುಯೆಲ್ ಡಿಗ್ರಿ ಪದವಿಗಳನ್ನು ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು.

‘ಬಿಇ/ಬಿ.ಟೆಕ್‌.ನಲ್ಲಿ 193, ಬಿ.ಆರ್ಕ್‌.–10, ಬಿ.ಪ್ಲಾನ್‌–1, ಎಂಬಿಎ–11, ಎಂಸಿಎ 10, ಎಂ.ಟೆಕ್.–100 ಮತ್ತು ಎಂ.ಆರ್ಕ್‌.ನಲ್ಲಿ 9 ಸೇರಿ ಒಟ್ಟು 334 ವಿದ್ಯಾರ್ಥಿಗಳು ರ‍್ಯಾಂಕ್‌ ಗಳಿಸಿದ್ದಾರೆ’ ಎಂದು ತಿಳಿಸಿದರು.

‘ಹೊಸ ವಿದ್ಯಾರ್ಥಿಗಳಲ್ಲಿ ಅಂದರೆ ಸಿಬಿಸಿಎಸ್ (ಛಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಂ) ಯೋಜನೆಯಲ್ಲಿ ಬಿಇ/ಬಿ.ಟೆಕ್‌.ನಲ್ಲಿ ಶೇ 83.75, ಬಿ.ಆರ್ಕ್‌.– ಶೇ 87.25, ಬಿ.ಪ್ಲಾನ್–ಶೇ 100, ಎಂ.ಆರ್ಕ್‌.– ಶೇ 90.12, ಎಂ.ಟೆಕ್.–ಶೇ 95.55, ಎಂಎಂಬಿ–ಶೇ 80.24, ಎಂಸಿಎ ವಿಭಾಗದಲ್ಲಿ ಶೇ 91.97ರಷ್ಟು ಫಲಿತಾಂಶ ಬಂದಿದೆ’ ಎಂದು ಮಾಹಿತಿ ನೀಡಿದರು.

ಚಿನ್ನದ ಪದಕಗಳನ್ನು ಬಾಚಿದ ವಿದ್ಯಾರ್ಥಿನಿಯರು

ಈ ಬಾರಿಯ ಘಟಿಕೋತ್ಸವದಲ್ಲಿ ಅತಿ ಹೆಚ್ಚಿನ ಚಿನ್ನದ ಪದಕ ಪಡೆಯುತ್ತಿರುವವರ ಪಟ್ಟಿಯಲ್ಲಿ ಹೆಚ್ಚಿನವರು ವಿದ್ಯಾರ್ಥಿನಿಯರೇ ಇದ್ದಾರೆ. ವಿದ್ಯಾರ್ಥಿ ಇರುವುದು ಒಬ್ಬರಷ್ಟೆ.

‘ರಾಯಚೂರಿನ ಎಸ್‌ಎಲ್‌ಎನ್ ಕಾಲೇಜಿನ ಬಿಇ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಬುಶ್ರಾ ಮತೀನ್ ಒಟ್ಟು 16 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಇದು ದಾಖಲೆಯಾಗಿದೆ. ಈವರೆಗೆ ಅತಿ ಹೆಚ್ಚು ಅಂದರೆ 13 ಚಿನ್ನದ ಪದಕಗಳನ್ನು ಗಳಿಸಿದ ದಾಖಲೆ ಇತ್ತು’ ಎಂದು ಕುಲಪತಿ ತಿಳಿಸಿದರು.‌

ಬೆಂಗಳೂರು ಬಿ.ಎನ್.ಎಂ. ತಾಂತ್ರಿಕ ಸಂಸ್ಥೆಯ ಇ ಅಂಡ್ ಸಿ ವಿಭಾಗದ ಸ್ವಾತಿ ದಯಾನಂದ, ಬೆಳಗಾವಿಯ ಕೆ.ಎಲ್.ಇ. ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ವಿಭಾಗದ ವಿವೇಕ್ ಭದ್ರಕಾಳಿ, ಬಳ್ಳಾರಿಯ ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ ಇ ಅಂಡ್ ಇ ವಿಭಾಗದ ಚಂದನಾ ಎಂ. ತಲಾ 7 ಚಿನ್ನದ ಪದಕ ಪಡೆದಿದ್ದಾರೆ.

ಬೆಂಗಳೂರಿನ ಸಿಎಂಆರ್ ತಾಂತ್ರಿಕ ಕಾಲೇಜಿನ ಕಂಪ್ಯೂಟರ್‌ ಸೈನ್ಸ್ ಅಂಡ್ ಎಂಜಿನಿಯರಿಂಗ್‌ನ ರಮ್ಯಾ ಟಿ. 6, ಆರ್‌ಎನ್‌ಎಸ್‌ಐಟಿಯ ಎಲೆಕ್ಟ್ರಾನಿಕ್ಸ್ ಅಂಡ್ ಇನ್‌ಸ್ಟ್ರುಮೆಂಟೇಷನ್‌ ವಿಭಾಗದ ಪ್ರಜ್ಞಾ ಎನ್., ಶಿವಮೊಗ್ಗದ ಜೆಎನ್‌ಎನ್‌ಸಿಇ ಮಾಹಿತಿ ತಂತ್ರಜ್ಞಾನ ವಿಭಾಗದ ಪಲ್ಲವಿ ಮತ್ತು ಬೆಂಗಳೂರಿನ ಆರ್‌ಎನ್‌ಎಸ್‌ಐಟಿಯ ಎಂಬಿಎ ವಿದ್ಯಾರ್ಥಿನಿ ತೇಜಸ್ವಿನಿ ಆರ್. ತಲಾ 4 ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ಬೆಂಗಳೂರಿನ ಆರ್‌ಎನ್‌ಎಸ್‌ಐಟಿಯ ಎಂಸಿಎ ವಿದ್ಯಾರ್ಥಿನಿ ಅಶ್ವಿತಾ ಎನ್. ಮತ್ತು ದಾವಣಗೆರೆಯ ಯುಬಿಡಿಟಿ ಕಾಲೇಜಿನ ಎಂ.ಟೆಕ್. ವಿದ್ಯಾರ್ಥಿನಿ ಸವಿತಾ ಎಚ್.ಟಿ. ತಲಾ 3 ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಕುಲಸಚಿವರಾದ ಪ್ರೊ.ಎ.ಎಸ್. ದೇಶಪಾಂಡೆ ಮತ್ತು ಪ್ರೊ.ಬಿ.ಈ.‌ ರಂಗಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.