ADVERTISEMENT

ಬೆಳಗಾವಿ | ವಿಟಿಯು: ಮೂರೇ ಗಂಟೆ‌ಯಲ್ಲಿ ಫಲಿತಾಂಶ ಪ್ರಕಟ

42,323 ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್‌ಗೆ ಮಾಹಿತಿ ರವಾನೆ

​ಪ್ರಜಾವಾಣಿ ವಾರ್ತೆ
Published 30 ಮೇ 2024, 15:41 IST
Last Updated 30 ಮೇ 2024, 15:41 IST
ಪ್ರೊ.ಎಸ್.ವಿದ್ಯಾಶಂಕರ
ಪ್ರೊ.ಎಸ್.ವಿದ್ಯಾಶಂಕರ   

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ವಿವಿಧ ಕೋರ್ಸ್‌ಗಳ ಪರೀಕ್ಷೆ ಮುಗಿಸಿದ ಮೂರೇ ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿ, ವಿಶಿಷ್ಟ ದಾಖಲೆ ಮಾಡಿದೆ.

ಗುರುವಾರ (ಮೇ 30) ಅಂತಿಮ ವರ್ಷದ ಬಿಇ, ಬಿ.ಟೆಕ್., ಬಿ.ಆರ್ಕ್, ಬಿ.ಪ್ಲ್ಯಾನ್‌ ಅಂತಿಮ ಸೆಮಿಸ್ಟರ್ ಪರೀಕ್ಷೆ ನಡೆದವು. ಒಟ್ಟು 42,323 ವಿದ್ಯಾರ್ಥಿಗಳು ಹಾಜರಾಗಿ, ಸಂಜೆ 5.30ಕ್ಕೆ ಪರೀಕ್ಷೆ ಮುಗಿದವು. ರಾತ್ರಿ 8.30ಕ್ಕೆ  ಎಲ್ಲ ಫಲಿತಾಂಶ ಪ್ರಕಟಿಸುವುದರ ಜೊತೆಗೆ ಎಲ್ಲ ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಫಲಿತಾಂಶ ರವಾನಿಸಲಾಗಿದೆ.

‘ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ 25 ವರ್ಷಗಳ ಇತಿಹಾಸದಲ್ಲೇ ಇದು ದಾಖಲೆಯ ದಿನ. ಇಂಥ ಪ್ರಯೋಗ ಹಿಂದೆ ಎಲ್ಲಿಯೂ ಆಗಿಲ್ಲ. ಪರೀಕ್ಷೆ ಮುಗಿದ ದಿನವೇ ಎಲ್ಲ 42,323 ವಿದ್ಯಾರ್ಥಿಗಳ ಫಲಿತಾಂಶವನ್ನೂ ನೀಡಿದ್ದೇವೆ’ ಎಂದು ವಿಟಿಯು ಕುಲ‍ಪತಿ ಪ್ರೊ. ಎಸ್.ವಿದ್ಯಾಶಂಕರ ತಿಳಿಸಿದ್ದಾರೆ.

ADVERTISEMENT

‘ಎಂಜಿನಿಯರಿಂಗ್‌ ಫಲಿತಾಂಶ ಬೇಗನೇ ಪ್ರಕಟಿಸುವುದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ, ಉದ್ಯೋಗ, ಭವಿಷ್ಯಕ್ಕೆ  ಅನುಕೂಲವಾಗುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಟಿಯುನಲ್ಲಿ ಆಡಳಿತ, ಶೈಕ್ಷಣಿಕ, ಪರೀಕ್ಷೆ, ಸಂಶೋಧನೆ ವಿಭಾಗದಲ್ಲಿ ಕ್ರಾಂತಿಕಾರಕ ಸುಧಾರಣೆ ತರಲಾಗಿದೆ. ಆದ್ದರಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ವಿಟಿಯು ವ್ಯಾಪ್ತಿಗೆ ಒಳಪಟ್ಟ ಎಲ್ಲ ಎಂಜಿನಿಯರಿಂಗ್‌ ಕಾಲೇಜುಗಳಲ್ಲೂ ಈ ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳು ಯಶಸ್ವಿಯಾಗಿ ನಡೆದವು. ಜತೆಗೆ, ಎಲ್ಲ ಸೆಮಿಸ್ಟರ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಪದವಿಯನ್ನು ಯಶಸ್ವಿಯಾಗಿ ಮುಗಿಸಿದ ವಿದ್ಯಾರ್ಥಿಗಳು ಪ್ರೊವಿಜನಲ್ ಪದವಿ ಸರ್ಟಿಫಿಕೇಟ್‌ಗಳನ್ನು (ಪಿಡಿಸಿ) ಜೂನ್‌ 3ರಿಂದ ಆನ್‌ಲೈನ್ ಮೂಲಕ ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.

‘ಈ ಹಿಂದೆ ಪರೀಕ್ಷೆ ಮುಗಿಸಿದ ಬಳಿಕ ಫಲಿತಾಂಶಕ್ಕೆ ಎರಡು ತಿಂಗಳಿಗೂ ಹೆಚ್ಚು ಸಮಯ ಕಾಯಬೇಕಿತ್ತು. ತಾಂತ್ರಿಕ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಏಳು ದಿನಗಳಲ್ಲಿ ಫಲಿತಾಂಶ ನೀಡುವಂತೆ ಮಾಡಿದ್ದೆ. ಆದರೆ, ಈಗ ಒಂದು ದಿನವೂ ಕಾಯಬೇಕಿಲ್ಲ. ಫರೀಕ್ಷೆ ಮುಗಿದ ಮೂರೇ ಗಂಟೆಯಲ್ಲಿ ಅವರ ಕೈಗೆ ಫಲಿತಾಂಶ ಕೊಟ್ಟಿದ್ದೇವೆ. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸ್ಕ್ಯಾನಿಂಗ್‌ ಕೇಂದ್ರ, ಮೌಲ್ಯಮಾಪನ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗಿದೆ. ಎಲ್ಲ ಪ್ರಾಧ್ಯಾಪಕರಿಗೂ ಮೌಲ್ಯಮಾಪನ ಕಡ್ಡಾಯ ಮಾಡಲಾಗಿದೆ. ಇದರಿಂದ ಒಂದೇ ದಿನದಲ್ಲಿ ಫಲಿತಾಂಶ ನೀಡಲು ಸಾಧ್ಯವಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.