ರಾಮದುರ್ಗ: ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಮಲಪ್ರಭಾ ನದಿ ಬತ್ತಿದೆ. ಅಂತರ್ಜಲ ಮಟ್ಟ ಕಡಿಮೆಯಾಗಿ ಕೊಳವೆ ಬಾವಿಯಲ್ಲಿ ನೀರು ಆಳಕ್ಕೆ ಇಳಿದಿದೆ. ಇದರಿಂದ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಏಪ್ರಿಲ್ ಕೊನೆಯ ವಾರಕ್ಕೆ ಸಮಸ್ಯೆ ಇನ್ನೂ ಬಿಗಡಾಯಿಸುವ ಸಾಧ್ಯತೆ ಇದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲವಾದ ಮಲಪ್ರಭೆ ಪೂರ್ಣ ಬತ್ತಿರುವ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತಗೊಂಡಿದೆ. ಈ ಯೋಜನೆಯಡಿ ಒಳಪಡುವ ಒಟ್ಟು 72 ಗ್ರಾಮಗಳಲ್ಲಿ ಅಲ್ಲಲ್ಲಿ ಕೊಳವೆ ಬಾವಿಗಳ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಹೆಚ್ಚಿನ ಸಮಸ್ಯೆ ಎದುರಿಸುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕವೂ ನೀರು ಪೂರೈಸಲು ಜಿಲ್ಲಾಧಿಕಾರಿ ಟೆಂಡರ್ ಕರೆದು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಅಂತರ್ಜಲ ಹಾಗೂ ಕೆರೆಗಳ ಮೂಲ ಬತ್ತಿದ್ದರಿಂದ ಟ್ಯಾಂಕರ್ ನೀರು ಪೂರೈಕೆಗೂ ತೊಂದರೆಯಾಗುವ ಆತಂಕ ಎದುರಾಗಿದೆ.
ತಾಲ್ಲೂಕಿನ ಬಟಕುರ್ಕಿ ಪಂಚಾಯಿತಿ ವ್ಯಾಪ್ತಿಯ ನಾಗನೂರಿನಲ್ಲಿ ತೋಟದ ಕೊಳವೆ ಬಾವಿಯ ನೀರನ್ನು ಪೂರೈಸಿ ಸಮಸ್ಯೆ ನಿವಾರಿಸಲಾಗಿದೆ. ತಾಲ್ಲೂಕು ಆಡಳಿತ ಬಟಕುರ್ಕಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಎರಡು ಕೊಳವೆ ಬಾವಿಗಳನ್ನು ಕೊರೆಯಿಸಿ ಸಮಸ್ಯೆಗೆ ಸ್ಪಂದಿಸಿದೆ.
ಸದ್ಯ ಕೆಲ ಹಳ್ಳಿಗಳಲ್ಲಿ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಲಾಪೂರ ಪಂಚಾಯ್ತಿ, ಚಂದರಗಿ ಪಂಚಾಯ್ತಿ ಮತ್ತು ತೊಂಡಿಕಟ್ಟಿ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು. ಅಲ್ಲಿನ ಸಮಸ್ಯೆಯನ್ನು ನಿವಾರಿಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಟ್ಟಣ ಪ್ರದೇಶದಲ್ಲಿ ನವೀಲುತೀರ್ಥ ಅಣೆಕಟ್ಟೆಯಿಂದ ನೇರವಾಗಿ ನೀರು ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ದಿನ ಬಿಟ್ಟು ದಿನ ನೀರು ಬಿಡುತ್ತಿರುವುದರಿಂದ ಸಮಸ್ಯೆ ಕಾಡುತ್ತಿದೆ. ಪಟ್ಟಣದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಪುರಸಭೆ ಇನ್ನೂ ಮುಂದಾಗಿಲ್ಲ.
‘ನವೀಲುತೀರ್ಥ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಇರುವುದರಿಂದ ಏಪ್ರಿಲ್ ತಿಂಗಳ ಕೊನೆಯವರೆಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಮುಂದೆ ಮಳೆ ಬರದಿದ್ದರೆ ಮೂರು ಟ್ಯಾಂಕರ್‌ಗಳನ್ನು ನೀರು ಪೂರೈಕೆಗೆ ಬಳಕೆ ಮಾಡಿಕೊಳ್ಳಲಾಗುವುದು. ನಾಲ್ಕು ಖಾಸಗಿ ಕೊಳವೆ ಬಾವಿಗಳನ್ನು ಕಾಯ್ದಿರಿಸಿಕೊಂಡಿದ್ದು, ಅಗತ್ಯ ಬಿದ್ದರೆ ಅವುಗಳನ್ನೂ ಬಳಸಿಕೊಳ್ಳಲಾಗುವುದು’ ಎಂದು ಮುಖ್ಯಾಧಿಕಾರಿ ಈರಣ್ಣ ಗುಡದಾರಿ ತಿಳಿಸಿದರು.
ನದಿ ಪಾತ್ರದ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಿದ್ದು, ಆದ್ಯತೆ ಮೇರೆಗೆ ಕೊಳವೆ ಬಾವಿಗಳನ್ನು ಕೊರೆಯಿಸಲು ತಾಲ್ಲೂಕು ಆಡಳಿತಕ್ಕೆ ಟಾಸ್ಕ್‌ಪೂರ್ಸ್‌ಸಮಿತಿ ಸೂಚನೆ ನೀಡಿದೆ.
ಸದ್ಯ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಂಡು ಬಂದಿಲ್ಲ. ಸಮಸ್ಯೆ ಎದುರಾಗುವ ಗ್ರಾಮಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಶ್ರೀನಿವಾಸ ವಿಶ್ವಕರ್ಮ, ಎಇಇ ಗ್ರಾಮೀಣ ಕುಡಿಯುವ ನೀರಿನ ಪೂರೈಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.