ADVERTISEMENT

ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ,15 ದಿನ ಹರಿಯಲಿದೆ ನೀರು

ಕುಡಿಯುವ ಉದ್ದೇಶಕ್ಕೆ ನೀರು ಬಿಡುಗಡೆ: ಸಚಿವೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 13:02 IST
Last Updated 20 ಸೆಪ್ಟೆಂಬರ್ 2023, 13:02 IST
<div class="paragraphs"><p>ಬೆಳಗಾವಿಯಲ್ಲಿ ಬುಧವಾರ ನಡೆದ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿದರು. ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ಶಾಸಕರಾದ ಎನ್.ಎಚ್.ಕೋನರೆಡ್ಡಿ, ವಿಶ್ವಾಸ್ ವೈದ್ಯ, ಎಸ್ಪಿ ಡಾ.ಭೀಮಾಶಂಕರ್ ಗುಳೇದ, ಚನ್ನರಾಜ್‌ ಹಟ್ಟಿಹೊಳಿ ಇದ್ದಾರೆ</p></div>

ಬೆಳಗಾವಿಯಲ್ಲಿ ಬುಧವಾರ ನಡೆದ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿದರು. ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ಶಾಸಕರಾದ ಎನ್.ಎಚ್.ಕೋನರೆಡ್ಡಿ, ವಿಶ್ವಾಸ್ ವೈದ್ಯ, ಎಸ್ಪಿ ಡಾ.ಭೀಮಾಶಂಕರ್ ಗುಳೇದ, ಚನ್ನರಾಜ್‌ ಹಟ್ಟಿಹೊಳಿ ಇದ್ದಾರೆ

   

ಬೆಳಗಾವಿ: ‘ಮಲಪ್ರಭಾ ಅಣೆಕಟ್ಟೆಯಿಂದ ಕುಡಿಯುವ ಉದ್ದೇಶಕ್ಕಾಗಿ ಸೆ.22ರಿಂದ ಮುಂದಿನ 15 ದಿನಗಳ ಕಾಲ ನೀರು ಬಿಡುಗಡೆ ಮಾಡಲು ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನೀರಾವರಿ ಹಾಗೂ ಕುಡಿಯುವ ನೀರು; ಎರಡೂ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಕುಡಿಯುವ ನೀರಿನ ಸಂಕಷ್ಟ ನೀಗಿಸಲಾಗುವುದು’ ಎಂದರು.

ADVERTISEMENT

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಎನ್.ಎಚ್.ಕೋನರೆಡ್ಡಿ, ‘ಮಳೆ ಕೊರತೆಯಿಂದಾಗಿ ನೀರಿನ ಸಮಸ್ಯೆ ಉದ್ಭವಿಸಿದೆ. ಜನರಿಗೆ ತೊಂದರೆಯಾಗದಂತೆ ನೀರು ಬಿಡಬೇಕಿದೆ. ನೀರಾವರಿಗೆ ಅಗತ್ಯವಿರುವ ನೀರು ಮೀಸಲಿಟ್ಟುಕೊಂಡು, ಅಗತ್ಯತೆ ಆಧರಿಸಿ ಕುಡಿಯುವ ನೀರು ಬಿಡುಗಡೆಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ಹೆಚ್ಚಾಗುವ ಸಾಧ್ಯತೆ ಇದೆ. ಪರಿಸ್ಥಿತಿ ಆಧರಿಸಿ ಕುಡಿಯುವ ಉದ್ಧೇಶಕ್ಕಾಗಿಯೇ ಹಂತಹಂತವಾಗಿ ಬಿಡುಗಡೆಗೊಳಿಸಬಹುದು’ ಎಂದೂ ಅವರು ಹೇಳಿದರು.

ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಮಾತನಾಡಿ, ‘ಮಳೆ ಅಭಾವದ ಕಾರಣ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ತೀವ್ರವಾಗಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳುವ ಅನಿವಾರ್ಯವಿದೆ. ಮಲಪ್ರಭಾ ಜಲಾಶಯದಿಂದ ನೀರು ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್‌ ಹಟ್ಟಿಹೊಳಿ, ‘ಅಗತ್ಯಕ್ಕೆ ಅನುಗುಣವಾಗಿ ನೀರು ಬಿಡುಗಡೆ ಮಾಡುವುದಕ್ಕೆ ಸಹಮತವಿದೆ’ ಎಂದರು.

ಸಭೆಗೆ ಮಾಹಿತಿ ಒದಗಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ‘ಮುಂದಿನ ಜೂನ್‌ವರೆಗೆ ಲೆಕ್ಕಾಚಾರ ಇಟ್ಟುಕೊಂಡು ಜಲಾಶಯ ನೀರು ನಿರ್ವಹಣೆ ಮಾಡಬೇಕಿದೆ. ಆದ್ದರಿಂದ ಸಲಹಾ ಸಮಿತಿಯು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು’ ಎಂದು ಹೇಳಿದರು.

ಯೋಜನೆಯ ಮುಖ್ಯ ಎಂಜಿನಿಯರ್ ಅಶೋಕ, ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಎಂಜಿನಿಯರ್ ವಿ.ಎಸ್.ಮಧುಕರ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

**

ಎಲ್ಲೆಲ್ಲಿಗೆ ನೀರು?

ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ನಿರ್ಮಿಸಿದ ರೇಣುಕಾಸಾಗರ ಜಲಾಶಯದಿಂದ ಬೆಳಗಾವಿ, ಬಾಲಗಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನಾಲ್ಕೂ ಜಿಲ್ಲೆಗಳ 14 ತಾಲ್ಲೂಕುಗಳು ಈ ನೀರು ಅವಲಂಬಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.