ADVERTISEMENT

ಬೆಳಗಾವಿ: ಜಲಮೂಲಗಳ ಒಡಲು ಮಾಲಿನ್ಯದ ಕಡಲು!

ಸಂಕರಕ್ಷಣೆಗೆ ಮುಂದುವರಿದ ನಿರ್ಲಕ್ಷ್ಯ; ನೋಟಿಸ್‌ಗಳಿಗೂ ಕಿಮ್ಮತ್ತಿಲ್ಲ

ಎಂ.ಮಹೇಶ
Published 16 ಮೇ 2022, 7:51 IST
Last Updated 16 ಮೇ 2022, 7:51 IST
ಬೆಳಗಾವಿ ತಾಲ್ಲೂಕಿನ ಮಾರ್ಕಂಡೇಯ ನದಿಯ ಒಡಲು ತ್ಯಾಜ್ಯದಿಂದ ತುಂಬಿ ಹೋಗಿದೆ/ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ ತಾಲ್ಲೂಕಿನ ಮಾರ್ಕಂಡೇಯ ನದಿಯ ಒಡಲು ತ್ಯಾಜ್ಯದಿಂದ ತುಂಬಿ ಹೋಗಿದೆ/ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಜಿಲ್ಲೆಯ ಬಹುತೇಕ ಜಲಮೂಲಗಳ ಒಡಲು ತ್ಯಾಜ್ಯದಿಂದ ತುಂಬಿ ಮಾಲಿನ್ಯದ ಕಡಲಾಗಿ ಹೋಗಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್‌ಗಳಿಗೆ ಕವಡೆ ಕಾಸಿನ ಕಿಮ್ಮತ್ತು ದೊರೆತಿಲ್ಲ. ಪ್ರಕರಣ ದಾಖಲಾಗಿದ್ದರೂ ಸುಧಾರಣೆ ಕಂಡಿಲ್ಲ!

ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಕೊರತೆಯ ಕಾರಣದಿಂದಾಗಿ ಚರಂಡಿ ನೀರು ನದಿಗಳು, ಕೆರೆ, ಕಟ್ಟೆ ಸೇರುತ್ತಿರುವುದರಿಂದ ಜೀವ ಜಲ ಕಲುಷಿತಗೊಳ್ಳುತ್ತಿದೆ. ಸುತ್ತಲಿನ ವಾತಾವರಣದಲ್ಲಿ ದುರ್ಗಂಧವೂ ಹರಡುತ್ತಿದೆ.

ಜಿಲ್ಲೆಯಲ್ಲಿ ಸಪ್ತನದಿಗಳು ಹರಿದಿವೆ. ಜಿಲ್ಲಾ ಪಂಚಾಯ್ತಿ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಸಣ್ಣ ನೀರಾವರಿ, ಬೃಹತ್‌ ನೀರಾವರಿ, ಅರಣ್ಯ ಇಲಾಖೆಗಳಿಗೆ ಸೇರಿದ 972 ಕೆರೆಗಳಿವೆ. ಪ್ರತಿ ವರ್ಷವೂ ಜನ–ಜಾನುವಾರುಗಳ ಜೊತೆಗೆ ಕೃಷಿಗೆ ಪೂರಕವಾಗುವಷ್ಟು ನೀರು ಸಂಗ್ರಹವಾಗುತ್ತಿದೆ. ಆದರೆ, ಸ್ಥಳೀಯ ಸಂಸ್ಥೆಗಳವರು ತೋರುತ್ತಿರುವ ಅಸಡ್ಡೆ ಹಾಗೂ ಜನರು ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯುತ್ತಿರುವುದರಿಂದ ಜಲಮೂಲಗಳು ಮಲಿನಗೊಳ್ಳುತ್ತಿವೆ.

ADVERTISEMENT

ಮಲಪ್ರಭಾ, ಘಟಪ್ರಭಾ, ಕೃಷ್ಣಾ, ದೂಧ್‌ಗಂಗಾ, ವೇದಗಂಗಾ, ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳಲ್ಲಿನ ನೀರು ದಿನೇ ದಿನೆ ಕಲುಷಿತವಾಗುತ್ತಿದೆ. ಜನರು ತ್ಯಾಜ್ಯ ಪದಾರ್ಥ, ಬಟ್ಟೆ–ಬರೆಗಳನ್ನಷ್ಟೇ ಅಲ್ಲ, ವಾಮಾಚಾರಕ್ಕೆ ಬಳಸಿದ ಸಾಮಗ್ರಿಗಳನ್ನೂ ಎಸೆಯುವುದು ಮತ್ತು ಕೆಲವರು ಸಾಕುಪ್ರಾಣಿಗಳನ್ನು ಕಳೆಬರವನ್ನೂ ಬಿಸಾಡುವುದು ಕಂಡುಬರುತ್ತಿದೆ.

ಕೋಟೆ ಕೆರೆಯಲ್ಲು ದುರ್ವಾಸನೆ:ಕುಂದಾನಗರಿ ಮುಕುಟಮಣಿಯಂತಿರುವ ಕೋಟೆ ಕೆರೆ ಈಗ ಅಂದಗೆಟ್ಟಿದೆ. ಶಿವಾಜಿ ನಗರ ನಿವಾಸಿಗಳು ಇಲ್ಲಿಯೇ ಕಸ ಎಸೆಯುತ್ತಿದ್ದಾರೆ. ಕತ್ತಲಾಗುತ್ತಿದ್ದಂತೆ ಕಿಡಿಗೇಡಿಗಳು ಕೆರೆ ಆವರಣದಲ್ಲಿ ಕುಡಿದು ಮದ್ಯದ ಬಾಟಲಿಗಳನ್ನು ಇದೇ ನೀರಲ್ಲಿ ಎಸೆದು ಹೋಗುತ್ತಿದ್ದಾರೆ. ಹಾಗಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯಬೇಕಿದ್ದ ಕೆರೆ ಅವ್ಯವಸ್ಥೆಯಿಂದ ಬಳಲುತ್ತಿದೆ.

ಅನಗೋಳದ ಕಾಳಾ ಕೆರೆಯದ್ದೂ ಇದೇ ಪರಿಸ್ಥಿತಿ. ನಗರದ ವಿವಿಧ ಬಡಾವಣೆಗಳ ಚರಂಡಿ ನೀರು ಈ ಕೆರೆಯ ಒಡಲು ಸೇರುತ್ತಿರುವುದರಿಂದ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಇದು ಕೆರೆಯೋ? ಚರಂಡಿಯೋ? ಎಂದು ಈ ಭಾಗದಲ್ಲಿ ಸಂಚರಿಸುವವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದೆ ಅಲ್ಲಿನ ಪರಿಸ್ಥಿತಿ.

ನಾವು ಪ್ರತಿ ವರ್ಷ ಮಹಾನಗರ ಪಾಲಿಕೆ, ಆಯಾ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್‌ ನೀಡುತ್ತಲೇ ಇದ್ದೇವೆ. ಆದರೆ, ಚರಂಡಿ ನೀರು ಹರಿದು ಹೋಗುವ ಮಾರ್ಗ ಬದಲಿಸುತ್ತಿಲ್ಲ. ಹಾಗಾಗಿ ಕೆರೆಗಳು ಕಲುಷಿತವಾಗುತ್ತಿವೆ. ಆದ್ಯತೆ ಮೇರೆಗೆ ಎಲ್ಲೆಡೆ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ನಿರ್ಮಾಣವಾಗಬೇಕಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ಈ ಬೆಳವಣಿಗೆಗೆಳು ಪರಿಸರ ಪ್ರಿಯರು ಹಾಗೂ ಪ್ರಜ್ಞಾವಂತ ನಾಗರಿಕರ ಕಳವಳಕ್ಕೆ ಕಾರಣವಾಗಿವೆ.

ಜಲ ಮೂಲಗಳ ಸಂರಕ್ಷಣೆ ವಿಷಯವನ್ನು ಜನಪ್ರತಿನಿಧಿಗಳಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ನಗರವೂ ಸೇರಿದಂತೆ ಪ್ರಮುಖ ಕಡೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ (ಎಸ್‌ಟಿಪಿ)ಗಳು ಇಲ್ಲದಿರುವುದು ಕೂಡ ತೊಡಕಾಗಿ ಪರಿಣಮಿಸಿದೆ. ಹೂಳೆತ್ತುವ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಹಳ್ಳಿಗಳಲ್ಲಿನ ಕೆರೆಗಳ ಸ್ಥಿತಿಯೂ ಹೀಗೆಯೇ ಇದೆ.

ಮಲಪ್ರಭಾ ನದಿಗೆ ತ್ಯಾಜ್ಯ
ಖಾನಾಪುರ/ಎಂ.ಕೆ. ಹುಬ್ಬಳ್ಳಿ/ ಬೈಲಹೊಂಗಲ:
ತಾಲ್ಲೂಕಿನಲ್ಲಿ ಹುಟ್ಟಿ ಹರಿಯುತ್ತಿರುವ ಮಲಪ್ರಭಾ ನೀರಿನಲ್ಲಿ ಪಟ್ಟಣದ ಚರಂಡಿಗಳ ನೀರು, ಕೊಳಚೆ ಮತ್ತು ತ್ಯಾಜ್ಯವನ್ನೂ ಸೇರಿಸಲಾಗುತ್ತಿದೆ.

ನದಿ ತೀರದಲ್ಲಿ ಹೆಣಗಳನ್ನು ಸುಡುವುದು, ಉಸುಕು (ಮರಳು) ತೆಗೆಯುವುದು, ಚರಂಡಿ ನೀರನ್ನು ಸೇರಿಸುವುದು, ಜಾನುವಾರುಗಳ ಮೈ ತೊಳೆಯುವುದು, ಬಟ್ಟೆ-ಬರೆಗಳನ್ನು ತೊಳೆಯುವುದು, ಪೂಜೆ ನಂತರದ ಹೂವು ಹಾಗೂ ಇತರ ತ್ಯಾಜ್ಯಗಳನ್ನು ನದಿಗೆ ಹಾಕುವುದು, ಪ್ಲಾಸ್ಟಿಕ್ ಬಾಟಲಿಗಳನ್ನು, ಕಸಕಡ್ಡಿಗಳನ್ನು, ಸತ್ತ ಪ್ರಾಣಿಗಳ ಕಳೇಬರಗಳನ್ನು ನದಿಯಲ್ಲಿ ಎಸೆಯುವುದು ಸೇರಿದಂತೆ ನದಿಯ ನೀರಿನ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸಗಳು ನಡೆಯುತ್ತಿವೆ. ಪರಿಣಾಮ ಮಲಪ್ರಭಾ ನದಿ ದಿನದಿಂದ ದಿನಕ್ಕೆ ಮಲಿನವಾಗುತ್ತಿದೆ.

ನದಿಯಲ್ಲಿ ಮತ್ತು ನದಿ ತೀರದಲ್ಲಿ ಸತ್ತವರ, ದೇವತೆಗಳ ಭಾವಚಿತ್ರಗಳು, ಗಾಜುಗಳು, ಮದ್ಯದ ಬಾಟಲಿಗಳು, ಹಳೆ ಬಟ್ಟೆಗಳನ್ನು, ಹಾಸಿಗೆಗಳು, ಮೃತ ವ್ಯಕ್ತಿ ಬಳಸುತ್ತಿದ್ದ ವಸ್ತುಗಳು, ಮೃತರ ಅಸ್ತಿ, ಬೂದಿ, ಬಾಳೆ ಗಿಡಗಳು, ಹೂಮಾಲೆಗಳು ಮತ್ತು ಮುಖ್ಯವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯಲಾಗುತ್ತದೆ.

ಎಂ.ಕೆ. ಹುಬ್ಬಳ್ಳಿ ಬಳಿಯೂ ಮಲಪ್ರಭಾ ನದಿಯ ಒಡಲಿಗೆ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಸೇರುತ್ತಿದೆ. ಅದರಲ್ಲೂ ಶರಣೆ ಗಂಗಾಬಿಕಾ ಐಕ್ಯಸ್ಥಳದ ಬಳಿ ಧಾರ್ಮಿಕ ಕಾರ್ಯ ಹಾಗೂ ಪೂಜಾ ಕೈಂಕರ್ಯಗಳ ನಂತರ ನದಿಗೆ ದೊಡ್ಡ ಪ್ರಮಾಣದಲ್ಲಿ ಕಸ ಹಾಕಲಾಗುತ್ತಿದೆ. ಇದರಿಂದ ನದಿಯ ನೀರು ಮಲಿನಗೊಂಡಿದೆ.

ಬೈಲಹೊಂಗಲ ಪಟ್ಟಣದಿಂದ 6 ಕಿ.ಮೀ. ದೂರದಲ್ಲಿರುವ ನಯಾನಗರ ಗ್ರಾಮದ ಬಳಿ ಮಲಪ್ರಭಾ ನದಿಯು ಕಲುಷಿತಗೊಂಡಿದೆ. ಪ್ಲಾಸ್ಟಿಕ್, ಕಸಕಡ್ಡಿ ಮೊದಲಾದ ವಸ್ತುಗಳ ರಾಶಿ ನದಿಯಲ್ಲಿ ಕಂಡುಬರುತ್ತಿದೆ. ಸೇತುವೆಯಲ್ಲಿ ಪ್ರಯಾಣಿಸುವವರು ಕೂಡ ತ್ಯಾಜ್ಯ ಎಸೆಯುವುದು ಕಂಡುಬರುತ್ತಿದೆ. ಪುರಸಭೆ, ತಾ.ಪಂ., ಗ್ರಾ.ಪಂ.ನವರು ನದಿ ದಡ ಕಲುಷಿತವಾಗದಂತೆ ಮುಂಜಾಗೃತಾ ಕ್ರಮ ವಹಿಸಬೇಕು ಎನ್ನುವುದು ನಾಗರಿಕರ ಆಗ್ರಹವಾಗಿದೆ.

ಕೃಷ್ಣೆಯೂ ಕಲುಷಿತ
ಚಿಕ್ಕೋಡಿ
: ತಾಲ್ಲೂಕಿನಲ್ಲಿ ಕೃಷ್ಣಾ ಸೇರಿದಂತೆ ಪಂಚನದಿಗಳು ಹರಿಯುತ್ತವೆ. ಆಸ್ತಿಕರು ಪವಿತ್ರ ಕೃಷ್ಣೆಯಲ್ಲಿ ಪುಣ್ಯಸ್ನಾನ ಮಾಡುವುದು ವಾಡಿಕೆ. ಇದರಿಂದ ಕೃಷ್ಣೆ ಕಲುಷಿತಗೊಳ್ಳುತ್ತಿದ್ದಾಳೆ. ನದಿ ದಂಡೆಯ ಗ್ರಾಮಗಳ ಚರಂಡಿ ನೀರು ನೇರವಾಗಿ ನದಿ ಸೇರುತ್ತಿರುವುದರಿಂದ ಮಾಲಿನ್ಯ ಉಂಟಾಗುತ್ತಿದೆ.

ತಾಲ್ಲೂಕಿನ ಮಾಂಜರಿ, ಚಂದೂರ, ಯಡೂರ, ಇಂಗಳಿ ಮೊದಲಾದ ಗ್ರಾಮಗಳ ಚರಂಡಿ ನೀರು ನದಿಗೆ ಸೇರ್ಪಡೆಯಾಗುತ್ತಿದೆ. ಅಲ್ಲದೇ ನದಿ ಪೂಜೆಗೆಂದು ಬರುವ ಭಕ್ತಾದಿಗಳೂ ಅಲ್ಲಿಯೇ ಪ್ಲಾಸ್ಟಿಕ್, ತೆಂಗಿನ ಕಾಯಿ ಚಿಪ್ಪು, ಹೂವು ಹಾರ ಮೊದಲಾದ ತ್ಯಾಜ್ಯಗಳನ್ನು ಬಿಸಾಡುವುದರಿಂದ ನದಿಯ ಒಡಲು ಕಲುಷಿತಗೊಂಡಿದೆ. ದೂಧ್‌ಗಂಗಾ, ವೇದಗಂಗಾ, ಪಂಚಗಂಗಾ ನದಿಗಳ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ.

ಸದ್ಯ ಬೇಸಿಗೆಯಲ್ಲಿ ನದಿ ನೀರು ಕಡಿಮೆಯಾಗಿದ್ದು, ಮಾಲಿನ್ಯದ ಪ್ರಮಾಣ ಹೆಚ್ಚಿನ ರೀತಿಯಲ್ಲಿ ಕಂಡುಬರುತ್ತಿದೆ. ತಾಲ್ಲೂಕಿನ ಹಲವು ಗ್ರಾಮಗಳ ಚರಂಡಿ ನೀರು ಸಹ ಹಳ್ಳಗಳಿಗೆ ಸೇರಿಕೊಳ್ಳುತ್ತಿದೆ. ಅಲ್ಲಿನ ನೀರು, ಜಾನುವಾರುಗಳ ಸೇವನೆಗೂ ಯೋಗ್ಯವಾಗಿಲ್ಲ. ಜಲಮೂಲಗಳು ಮಲಿನ ಆಗುತ್ತಿರುವುದರಿಂದ ಅಂತಹ ನೀರು ಸೇವಿಸುವ ಜನ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ.

‘ಚರಂಡಿ ನೀರು, ತ್ಯಾಜ್ಯಗಳಿಂದ ಮಾಲಿನ್ಯ ಉಂಟಾಗದಂತೆ ಕ್ರಮ ಕೈಗೊಳ್ಳಲು ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗುತ್ತಿದೆ. ನೋಟಿಸ್ ಕೊಡಲಾಗುತ್ತಿದೆ. ಗ್ರಾಮಮಟ್ಟದಲ್ಲಿಯೇ ಚರಂಡಿ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಕೃಷಿ ಉಪಯೋಗಕ್ಕೆ ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

ನಿರ್ಲಕ್ಷ್ಯದ ಪರಿಣಾಮ
ಮೂಡಲಗಿ:
ಪಟ್ಟಣದ ಮಧ್ಯದಲ್ಲಿ ಹರಿಯುವ ಹಳ್ಳವು ಪಟ್ಟಣದ ಕಸ, ತ್ಯಾಜ್ಯವನ್ನು ಹಾಕುವ ಸ್ಥಳವಾಗಿದೆ. ಬಸ್‌ ನಿಲ್ದಾಣ ಬಳಿಯಲ್ಲಿ ಸೇತುವೆ ಕೆಳಗೆ ಇಣುಕಿ ನೋಡಿದರೆ ಸಾಕು ಕಸ, ತ್ಯಾಜ್ಯದ ರಾಶಿ ತುಂಬಿಕೊಂಡಿದೆ. ಅಂಗಡಿ, ಹೋಟೆಲ್‌, ಬಾರ್‌ ಸೇರಿದಂತೆ ಅಂಗಡಿಕಾರರು ಹಳ್ಳಕ್ಕೆ ಕಸ ಸುರಿಯುತ್ತಿದ್ದಾರೆ.

ಇದೇ ಪರಿಸ್ಥಿತಿಯು ಮಾರುಕಟ್ಟೆ ಮತ್ತು ಸ್ಮಶಾನ ಬಳಿಯ ಸೇತುವೆ ಸಮೀಪದ ಹಳ್ಳದಲ್ಲೂ ಕಂಡುಬರುತ್ತಿದೆ. ಹಳ್ಳದ ನೀರು ತ್ಯಾಜ್ಯದೊಂದಿಗೆ ಹರಿದು ಕಮಲದಿನ್ನಿ ಬಳಿ ಘಟಪ್ರಭಾ ನದಿ ಸೇರುತ್ತಿದೆ. ಪುರಸಭೆಯವರು ಸಾರ್ವಜನಿಕರಿಗೆ ಕಟ್ಟೆಚ್ಚರಿಕೆ ನೀಡಬೇಕು ಮತ್ತು ಸಾರ್ವಜನಿಕರು ಸಹ ಕಾಳಜಿ ವಹಸಬೇಕು ಎನ್ನುವುದು ಪರಿಸರಪ್ರಿಯರ ಆಶಯವಾಗಿದೆ.

ಕ್ರಮ ಕೈಗೊಳ್ಳಬೇಕು
ಹತ್ತಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ ಬೆಳಗಾವಿ ಕೋಟೆ ಕೆರೆ ಚಿತ್ರಣವೇ ಬದಲಾಗುತ್ತಿಲ್ಲ. ಕೆರೆಯಂಗಳದಲ್ಲಿ ಸ್ವಚ್ಛತೆ ಕಾಪಾಡಲು ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು.
-ಸುವರ್ಣಾ ಪಾಟೀಲ, ಸ್ಥಳೀಯರು

ಕ್ರಿಮಿನಲ್ ಪ್ರಕರಣ ದಾಖಲು
ಕಲುಷಿತ ನೀರು ಬಳ್ಳಾರಿ ನಾಲೆ ಸೇರುತ್ತಿರುವುದರಿಂದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ 2015ರಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು. ಅದರ ವಿಚಾರಣೆ ನಡೆಯುತ್ತಿದೆ. ಜಿಲ್ಲೆಯ ಬಹುತೇಕ ನದಿಗಳು, ಕೆರೆಗಳಿಗೆ ಚರಂಡಿ ನೀರು ಸೇರುತ್ತಿದ್ದು, ಅದನ್ನು ತಡೆಗಟ್ಟಲು ಆಯಾ ಸ್ಥಳೀಯ ಸಂಸ್ಥೆಗಳಿಗೆ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಿಸುವಂತೆ ಸೂಚಿಸಲಾಗಿದೆ. ಕೆಲವೆಡೆ ಈಗಾಗಲೇ ನಿರ್ಮಾಣವಾಗಿದ್ದರೆ, ಇನ್ನೂ ಕೆಲವು ಕಡೆ ಪ್ರಗತಿಯಲ್ಲಿವೆ.
-ಐ.ಎಚ್‌. ಜಗದೀಶ, ಪ್ರಾದೇಶಿಕ ಅಧಿಕಾರಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಳಗಾವಿ

ವಿಷ ಉಣಿಸುವುದು ಎಷ್ಟು ಸರಿ?
ನಮ್ಮೆಲ್ಲರ ದಾಹ ನೀಗಿಸುವ ಮಲಪ್ರಭಾ ನದಿಗೆ ವಿಷ ಉಣಿಸಲಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ನದಿಯನ್ನು ತಾಯಿಗೆ ಹೋಲಿಸಲಾಗುತ್ತದೆ. ಆದರೆ, ಅದರಲ್ಲಿ ತ್ಯಾಜ್ಯವನ್ನು ಸೇರಿಸಲಾಗುತ್ತಿದೆ. ಆದರೂ ನದಿ ನಮ್ಮೆಲ್ಲರ ದಾಹ ನೀಗಿಸುವ ಕೆಲಸ ಮಾಡುತ್ತದೆ. ಇನ್ನಾದರೂ ನದಿಯ ಸಂರಕ್ಷಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
-ಮಲ್ಲೇಶಪ್ಪ ಬೆನಕಟ್ಟಿ, ನಿವೃತ್ತ ಅರಣ್ಯಾಧಿಕಾರಿ, ಖಾನಾಪುರ

ಒಳಚರಂಡಿ ಇಲ್ಲದಿದ್ದರಿಂದ ತೊಂದರೆ
ಖಾನಾಪುರ ಪಟ್ಟಣದಲ್ಲಿ ಒಳಚರಂಡಿ ಯೋಜನೆ ಮಂಜೂರಾಗಿಲ್ಲ. ಹೀಗಾಗಿ ಚರಂಡಿ ನೀರು ಹರಿದುಹೋಗಿ ಮಲಪ್ರಭಾ ನದಿಗೆ ಸೇರುತ್ತಿದೆ. ಒಳಚರಂಡಿ ಯೋಜನೆ ಮಂಜೂರು ಮಾಡುವಂತೆ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
-ಬಿ.ಎಂ. ಮಾನೆ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯ್ತಿ, ಖಾನಾಪುರ

ದಂಡ ಹಾಕಲಾಗುವುದು
ಮೂಡಲಗಿಯಲ್ಲಿ ಎಲ್ಲ ಅಂಗಡಿಕಾರರಿಗೆ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕದಂತೆ ನಿಯಮಿತವಾಗಿ ಸೂಚನೆ ನೀಡಲಾಗುತ್ತಿದ್ದರೂ ಕೆಲವರು ಕಸವನ್ನು ಹಳ್ಳಕ್ಕೆ ಎಸೆಯುತ್ತಿದ್ದಾರೆ. ಅಂಥವರಿಗೆ ಮುಂದಿನ ಹಂತದಲ್ಲಿ ದಂಡ ವಿಧಿಸಲಾಗುವುದು.
-ಚಿದಾನಂದ ಮುಗಳಖೋಡ, ಹಿರಿಯ ಆರೋಗ್ಯ ಇನ್‌ಸ್ಪೆಕ್ಟರ್‌, ಪುರಸಭೆ, ಮೂಡಲಗಿ

(ಪ್ರಜಾವಾಣಿ ತಂಡ: ಇಮಾಮ್‌ಹುಸೇನ್‌ ಗೂಡುನವರ, ಪ್ರಸನ್ನ ಕುಲಕರ್ಣಿ, ಬಾಲಶೇಖರ ಬಂದಿ, ಶಿವಾನಂದ ವಿಭೂತಿಮಠ, ರವಿ ಎಂ. ಹುಲಕುಂದ, ಸುಧಾಕರ ತಳವಾರ, ಬಸವರಾಜ ಶಿರಸಂಗಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.