ADVERTISEMENT

ಮನೆ, ಮನಸ್ಸಿನ ಬಾಗಿಲಿಗೆ ಬೀಗ: ನಾನಾ ಪಾಟೇಕರ್ ವಿಷಾದ

ಹಿರಿಯ ಚಲನಚಿತ್ರ ಕಲಾವಿದ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 12:36 IST
Last Updated 4 ಫೆಬ್ರುವರಿ 2020, 12:36 IST
ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಮಂಗಳವಾರ ನಡೆದ ಕಲಾ ಮಹರ್ಷಿ ಕೆ.ಬಿ. ಕುಲಕರ್ಣಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ಕಲಾವಿದ ನಾನಾ ಪಾಟೇಕರ್‌ ಮಾತನಾಡಿದರು
ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಮಂಗಳವಾರ ನಡೆದ ಕಲಾ ಮಹರ್ಷಿ ಕೆ.ಬಿ. ಕುಲಕರ್ಣಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ಕಲಾವಿದ ನಾನಾ ಪಾಟೇಕರ್‌ ಮಾತನಾಡಿದರು   

ಬೆಳಗಾವಿ: ‘ಈಗ ನಾವು ಮನೆ ಬಾಗಿಲುಗಳೊಂದಿಗೆ ಮನಸ್ಸಿಗೂ ಬೀಗ ಹಾಕಿ ಬೇರ್ಪಟ್ಟಿದ್ದೇವೆ. ಸುತ್ತಲೂ ಗೋಡೆಗಳನ್ನು ಕಟ್ಟಿಕೊಂಡು ನಾವ್ಯಾರೋ, ನೀವ್ಯಾರೋ ಎನ್ನುವ ಮನಸ್ಥಿತಿಗೆ ಬಂದಿದ್ದೇವೆ’ ಎಂದು ಹಿರಿಯ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ ನಾನಾ ಪಾಟೇಕರ್ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಮಂಗಳವಾರ ನಡೆದ ಕಲಾ ಮಹರ್ಷಿ ಕೆ.ಬಿ. ಕುಲಕರ್ಣಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಇತ್ತೀಚಿನ ರಾಜಕೀಯ ಪರಿಸ್ಥಿತಿ ನಮ್ಮನ್ನು ಶಾಂತಗೊಳಿಸುತ್ತಿಲ್ಲ. ರಾಜಕಾರಣಿಗಳು ಕೊಟ್ಟಿದ್ದನ್ನು ನಾವು ಸ್ವೀಕರಿಸುತ್ತಿದ್ದೇವೆ. ಜನಪ್ರತಿನಿಧಿಗಳು ಮೊದಲು ತಾವು ಮತದಾರರು ಬಳಿಕ ಶಾಸಕ, ಸಂಸದರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಭಾರತೀಯರಿಗೆ ತಮ್ಮದೇ ಆದ ಜವಾಬ್ದಾರಿ ಇರುತ್ತದೆ. ಆದರೆ ದೇಶದ ಜನರು ಬದಲಾಗುತ್ತಿದ್ದಾರೆ. ಪ್ರೀತಿ, ವಾತ್ಸಲ್ಯ, ಸಂಬಂಧಗಳು ಮರೆಯಾಗಿವೆ. ತಪ್ಪು ವಿಷಯಗಳನ್ನು ಕಂಡರೂ ನಾವು ದನಿ ಎತ್ತುವ ಕೆಲಸ ಮಾಡುತ್ತಿಲ್ಲ’ ಎಂದು ಹೇಳಿದರು.

‘ನಾವು ಬದುಕಲು ಆರಂಭಿಸಿದ ಕ್ಷಣದಿಂದ ಹೊಸ ಜೀವನ ತೆರೆದುಕೊಳ್ಳುತ್ತದೆ. ಮನುಷ್ಯರ ನಡುವಿನ ಸಂಬಂಧ ಕಡಿಮೆ ಆಗಿದೆ. ಮೊದಲು ಎಲ್ಲರೂ ಗುಂಪುಗೂಡಿ ಹರಟೆ ಹೊಡೆಯುವ ಕಾಲವಿತ್ತು. ಆದರೆ, ಈಗ ಅವುಗಳನ್ನು ಮರೆತುಬಿಟ್ಟಿದ್ದೇವೆ. ಅವಶ್ಯ ಇದ್ದಾಗ ಮಾತ್ರ ಮನದ ಮಾತುಗಳು ಹೊರಬರುತ್ತಿವೆ. ಇಲ್ಲದಿದ್ದರೆ ಸಂಬಂಧಗಳು ಇದ್ದೂ ಇಲ್ಲದಂತಾಗಿವೆ’ ಎಂದು ವಿಶ್ಲೇಷಿಸಿದರು.

‘ಜೀವನದಲ್ಲಿ ಅವಮಾನ ಕಲಿಸುವಂತಹ ಪಾಠಗಳನ್ನು ಬೇರಾರೂ ಕಲಿಸಲು ಸಾಧ್ಯವಿಲ್ಲ. ಅದರಿಂದ ಸಿಗುವ ಶಿಕ್ಷಣವೂ ಎಲ್ಲಿಯೂ ಸಿಗುವುದಿಲ್ಲ. ನಮ್ಮ ಜೀವನದಲ್ಲಿ ಗುರುಗಳು ಕಲಿಸಿದ ಒಳ್ಳೆಯ ಪಾಠಗಳನ್ನು ಪಸರಿಸುವ ಕೆಲಸವಾಗಬೇಕು’ ಎಂದು ತಿಳಿಸಿದರು.

‘ಮಣ್ಣು, ನೀರು, ಗಾಳಿ, ನದಿ, ಪ್ರಕೃತಿಯನ್ನು ಇಂದು ನಾವು ಮರೆಯುತ್ತಿದ್ದೇವೆ. ನಾನು ಫೋನ್‌ ಬಳಕೆಗಿಂತ ಪತ್ರ ಬರೆಯುವುದನ್ನು ಹೆಚ್ಚು ಇಷ್ಟ ಪಡುತ್ತೇನೆ. ಈಗಿನ ಸೌಲಭ್ಯಗಳು ನಮ್ಮನ್ನು ಗುಲಾಮರನ್ನಾಗಿ ಮಾಡುತ್ತಿವೆ’ ಎಂದರು.

‘ವಾಟರ್ ಕಲರ್‌ನಲ್ಲಿ ಮೂಡಿ ಬರುವ ಕಲಾಕೃತಿಗಳು ರಂಗಭೂಮಿಯ ಅಭಿನಯದಂತೆ. ವಾಟರ್ ಕಲರ್ ಒಮ್ಮೆ ಬಳಸಿದರೆ ಅದನ್ನು ತಿದ್ದಲು ಬರುವುದಿಲ್ಲ. ನಾಟಕದಲ್ಲೂ ಹಾಗೆಯೇ, ರೀಟೇಕ್‌ ಇರುವುದಿಲ್ಲ. ಆಯಿಲ್ ಪೇಂಟ್‌ನ ಕಲಾಕೃತಿಗಳು ಸಿನಿಮಾ ನಟನೆಯಂತೆ. ರೀಟೇಕ್‌ಗೆ ಅಲ್ಲಿ ಅವಕಾಶವಿರುತ್ತದೆ. ಮತ್ತೊಮ್ಮೆ ಅಭಿಯನ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ನೋಡಿದರೆ ನನಗೆ ಹಿಂದಿಯ ‘ವೆಲ್‌ಕಮ್’ ಚಿತ್ರದಲ್ಲಿನ ನನ್ನ ಅಭಿನಯ ನನಗೆ ಹೆಚ್ಚು ಇಷ್ಟವಾಗಲಿಲ್ಲ’ ಎಂದರು.

ಚಿತ್ರ ಕಲಾವಿದ ರವಿ ಪರಾಂಜಪೆ, ದಿಲೀಪ ಚಟ್ನಿಸ್, ದತ್ತಾ ಪಾಡೇಕರ, ಪ್ರಭಾತಾಯಿ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.