ಖಾನಾಪುರ: ಕರ್ನಾಟಕ–ಮಹಾರಾಷ್ಟ್ರ ಮತ್ತು ಗೋವಾ ಗಡಿಯ ಪಶ್ಚಿಮ ಘಟ್ಟದ ಅರಣ್ಯಪ್ರದೇಶ, ಖಾನಾಪುರ ತಾಲ್ಲೂಕಿನಲ್ಲಿ ಮಳೆಗಾಲದ ವೈಭವ ಮರುಕಳಿಸಿದೆ. ಮುಗಿಲು ಚುಂಬಿಸುವ ಮೋಡಗಳು ಮತ್ತು ಇಬ್ಬನಿಯಿಂದ ತುಂಬಿದ ಪ್ರಕೃತಿಯ ವೈಭವದಿಂದಾಗಿ ಪಶ್ಚಿಮ ಘಟ್ಟಗಳು ನವವಧುವಿನಂತೆ ಕಂಗೊಳಿಸುತ್ತಿವೆ.
ದಟ್ಟ ಅರಣ್ಯವನ್ನು ಸುತ್ತುವರಿದ ಬೆಟ್ಟಗಳನ್ನು ಚುಂಬಿಸಲು ಮೋಡಗಳು ಹಾತೊರೆಯುವ ನೋಟ ಎಲ್ಲೆಡೆ ಕಾಣಿಸುತ್ತಿದೆ. ತುಂತುರು ಮಳೆಯಿಂದ ನಿರ್ಮಾಣಗೊಂಡ ಇಬ್ಬನಿಯಿಂದ ಬೆಟ್ಟಗುಡ್ಡಗಳು ನಯನ ಮನೋಹರವಾಗಿ ಗೋಚರಿಸತೊಡಗಿವೆ. ಆಗಾಗ ಬೀಸುವ ಜೋರಾದ ತಣ್ಣನೆಯ ಗಾಳಿ, ನಿರಂತರ ತುಂತುರು, ಕಣ್ಣು ಹಾಯಿಸಿದಲ್ಲೆಲ್ಲ ಗೋಚರಿಸುವ ಅಚ್ಚ ಹಸಿರಿನ ಬೆಟ್ಟಗಳು ತಾಲ್ಲೂಕಿನ ಚಿತ್ರಣವನ್ನೇ ಬದಲಿಸಿವೆ.
ಕೆಲವು ದಿನಗಳ ಹಿಂದೆ ಬಿರುಬಿಸಿಲಿನ ಝಳದಿಂದ ಬಸವಳಿದಿದ್ದ ಇಳೆ ಈಗ ಉಲ್ಲಾಸದ ವಾತಾವರಣಕ್ಕೆ ತಿರುಗಿದೆ. ಪ್ರಕೃತಿ ಮಾತೆಯಲ್ಲಿ ಉಂಟಾದ ಈ ಬದಲಾವಣೆಯಿಂದಾಗಿ ತಾಲ್ಲೂಕಿನ ಅರಣ್ಯದ ನಿಸರ್ಗದತ್ತವಾದ ಸೌಂದರ್ಯ ಇಮ್ಮಡಿಯಾಗಿದೆ. ಮುಂಗಾರು ಮಳೆಗೆ ತಾಲ್ಲೂಕಿನ ಕಣಕುಂಬಿ, ಚಿಗುಳೆ, ಮಾನ, ಸಡಾ, ಚಿಕಲೆ, ಅಮಟೆ, ಪಾರವಾಡ ಮತ್ತು ಸುತ್ತಲಿನ ಕಾಡಿನಲ್ಲಿ ಇಬ್ಬನಿ ಮತ್ತು ಮಂಜು ಆವರಿಸಿ ಹೃನ್ಮನಗಳಿಗೆ ಮುದ ನೀಡುತ್ತಿದೆ.
ವನಸಿರಿಯ ವೈಭವ ಮತ್ತು ಕಾನನದ ಚಳಿಗೆ ಮೈಯೊಡ್ಡುವುದು ನಿಸರ್ಗ ಪ್ರಿಯರ ಪಾಲಿಗೆ ಹಬ್ಬದ ವಾತಾವರಣದಂತೆ ಭಾಸವಾಗುತ್ತಿದೆ. ಗೋವಾ ರಾಜಧಾನಿ ಪಣಜಿಯಿಂದ ಚೋರ್ಲಾ ಮತ್ತು ಅನಮೋಡ ಮಾರ್ಗವಾಗಿ ಬೆಳಗಾವಿಯತ್ತ ಸಾಗುವ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ರಸ್ತುತ ಕಾಣಿಸುತ್ತಿರುವ ಗಗನವನ್ನು ಚುಂಬಿಸುವ ಮೋಡಗಳ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವಾದಂತಾಗಿದೆ. ವರ್ಷದ ಕೆಲವೇ ತಿಂಗಳುಗಳ ಕಾಲ ಕಾಣಸಿಗುವ ಈ ನೈಸರ್ಗಿಕ ಸೃಷ್ಟಿ ವಿಸ್ಮಯವಾಗಿದೆ.
ಪ್ರವಾಸಿಗರ ದಂಡು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.