ಮೂಡಲಗಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ವಡೇರಹಟ್ಟಿ ಗ್ರಾಮದಲ್ಲಿ 2023ರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಮೃತ ವ್ಯಕ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹3 ಲಕ್ಷ ದಂಡ ವಿಧಿಸಿ, 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ತೀರ್ಪು ನೀಡಿದೆ.
ಘಟನೆ ಹಿನ್ನೆಲೆ: ಗ್ರಾಮದ ಶಂಕರ ಜಗಮುತ್ತಿ ಅವರ ಪತ್ನಿ ಸಿದ್ದವ್ವ, ಭೈರನಟ್ಟಿಯ ಶ್ರೀಧರ ತಳವಾರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಸಂಚು ರೂಪಿಸಿ 2023ರ ಆಗಸ್ಟ್ 17ರಂದು ಬೆಳಿಗ್ಗೆ 6ಕ್ಕೆ ಸಿದ್ದವ್ವ ಹಾಗೂ ಶಂಕರ ಬನಶಿದ್ಧೇಶ್ವರ ದೇವಸ್ಥಾನ ಬಂದಿದ್ದಾಗ ಶ್ರೀಧರ ತಲವಾರಿನಿಂದ ಶಂಕರನ ಕುತ್ತಿಗೆ ಮತ್ತು ತಲೆಗೆ ಹೊಡೆದು ಕೊಲೆ ಮಾಡಿದ್ದ. ಈ ಬಗ್ಗೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿ, ಇಬ್ಬರನ್ನೂ ಬಂಧಿಸಲಾಗಿತ್ತು.
ಸಿಪಿಐ ಶ್ರೀಶೈಲ್ ಬ್ಯಾಕೂಡ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಅವರು ಸಾಕ್ಷಾಧಾರ ಪರಿಗಣಿಸಿ ತೀರ್ಪು ಪ್ರಕಟಿಸಿದರು. ₹3 ಲಕ್ಷ ದಂಡದ ಪೈಕಿ ₹2.50 ಲಕ್ಷವನ್ನು ಮೃತನ ಕುಟುಂಬದವರಿಗೆ ಪರಿಹಾರವಾಗಿ ನೀಡಲು ಸೂಚಿಸಿದರು. ಸರ್ಕಾರಿ ವಕೀಲ ಸುನೀಲ ಹಂಜಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.