ADVERTISEMENT

ಬೆಳಗಾವಿ ಬಿಜೆಪಿ ನಾಯಕರ ಭಿನ್ನಾಭಿ‍ಪ್ರಾಯ ಶಮನಕ್ಕೆ ಯತ್ನ: ಬಾಲಚಂದ್ರ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 9:24 IST
Last Updated 31 ಮಾರ್ಚ್ 2023, 9:24 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ    

ಬೆಳಗಾವಿ: ‘ವಿಧಾನಸಭೆ ಚುನಾವಣೆಗೆ 40 ದಿನಗಳಷ್ಟೇ ಬಾಕಿ ಉಳಿದಿದ್ದು, ಜಿಲ್ಲೆಯಲ್ಲಿ ಭಿನ್ನಾಭಿಪ್ರಾಯ ಬದಿಗಿರಿಸಿ ಗರಿಷ್ಠ ಸ್ಥಾನ ಗೆಲ್ಲುವ ಸಲುವಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ರಮೇಶ ಜಾರಕಿಹೊಳಿ ಹಾಗೂ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ’ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿ ಮತ್ತು ಅಣ್ಣಾಸಾಹೇಬ ಜೊಲ್ಲೆ ಮಧ್ಯೆ ವಾಕ್ಸಮರ ನಡೆಯುತ್ತಿರುವ ಬಗ್ಗೆ, ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.

‘ಬೆಂಗಳೂರಿನಲ್ಲಿ ಏ‍ಪ್ರಿಲ್‌ 1ರಂದು ಜಿಲ್ಲಾವಾರು ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಲಿದೆ. ಈ ವೇಳೆ, ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ಬದಿಗಿರಿಸುವಂತೆ ಮನವರಿಕೆ ಮಾಡಲಾಗುವುದು. ವೈಯಕ್ತಿಕ ಅನಿಸಿಕೆಗಳು ಚುನಾವಣೆ ಮೇಲೆ ಪರಿಣಾಮ ಬೀರುವುದನ್ನು ನಾವು ಬಯಸುವುದಿಲ್ಲ’ ಎಂದರು.

ADVERTISEMENT

‘ಬಣ ರಾಜಕೀಯ ಮತ್ತು ನಾಯಕರಲ್ಲಿನ ಭಿನ್ನಾಭಿಪ್ರಾಯ ಎಲ್ಲ ಪಕ್ಷಗಳಲ್ಲಿರುತ್ತದೆ. ಇವೆಲ್ಲ ಗೊಂದಲಗಳನ್ನು ವರಿಷ್ಠರು ಸರಿಪಡಿಸುತ್ತಾರೆ. ಯಾರೂ ಯಾರನ್ನು ಸೋಲಿಸಲಾಗದು. ಎಲ್ಲ ಕ್ಷೇತ್ರಗಳಲ್ಲಿ ಅವರವರು ಗಟ್ಟಿಯಾಗಿರುತ್ತಾರೆ. ಸೋಲಿಸುವುದು, ಗೆಲ್ಲಿಸುವುದು ಜನರಿಂದ ಮಾತ್ರ ಸಾಧ್ಯ. ಹೊರಗಿನವರು ಬಂದು ಯಾರನ್ನೂ ಸೋಲಿಸಲು ಆಗುವುದಿಲ್ಲ’ ಎಂದರು.

‘ಕಳೆದ ಬಾರಿ ಜಿಲ್ಲೆಯಲ್ಲಿ 10 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಆಪರೇಷನ್ ಕಮಲದ ಮೂಲಕ ಮೂವರು ಶಾಸಕರು ಬಿಜೆಪಿಗೆ ಬಂದಿದ್ದಾರೆ. ಈ ಚುನಾವಣೆಯಲ್ಲಿ 13 ಸ್ಥಾನಗಳನ್ನೂ ಉಳಿಸಿಕೊಳ್ಳುವ ಯತ್ನ ನಡೆದಿದೆ. ಕಾರ್ಯಕರ್ತರಿಂದ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸುವುದರಿಂದ ಭಿನ್ನಾಭಿಪ್ರಾಯವೂ ಗೊತ್ತಾಗಲಿದೆ. ಇದನ್ನು ಹಾಗೂ ಸಮೀಕ್ಷೆ ಆಧರಿಸಿ, ಪಕ್ಷದ ವರಿಷ್ಠರು ಟಿಕೆಟ್ ಹಂಚಿಕೆ ಮಾಡುತ್ತಾರೆ’ ಎಂದು ತಿಳಿಸಿದರು.

ಶಾಸಕ ಎನ್.ವೈ.ಗೋಪಾಲಕೃಷ್ಣ ಬಿಜೆಪಿಗೆ ರಾಜೀನಾಮೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಬಾಲಚಂದ್ರ, ‘ಕಾಂಗ್ರೆಸ್‌ನಿಂದ ಬಂದಿದ್ದ ಅವರು ವಾಪಸ್ ಹೋಗಿದ್ದಾರೆ. ಗೆಲ್ಲುವ ಪಕ್ಷ ಬಿಜೆಪಿಯನ್ನು ಇನ್ನೂ ಯಾರು ಬಿಟ್ಟು ಹೋಗುವುದಿಲ್ಲ. ಬಿ.ಎಸ್‌.ಯಡಿಯೂರಪ್ಪ ಅವರನ್ನು ಸೈಡ್‌ಲೈನ್‌ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.