ಹುಕ್ಕೇರಿ: ತಾಲ್ಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.14ರ ತಡ ರಾತ್ರಿ ಜರುಗಿದೆ.
ಲಗಮವ್ವ ಶಿವಾನಂದ ಬಾಗಿ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಲಗಮವ್ವ ತನ್ನ ಕುಟುಂಬದ ನಿರ್ವಹಣೆಗಾಗಿ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ರೂ.30 ಸಾವಿರ ಸಾಲ ಮಾಡಿದ್ದಳು. ಜತೆಗೆ ಅವಳ ಗಂಡ ಶಿವಾನಂದ ಹೆಸರಿನಲ್ಲಿ ಸ್ಥಳೀಯ ಲಕ್ಷ್ಮೀ ಮಾತಾ ಸೊಸೈಟಿಯಲ್ಲಿ ರೂ.5 ಲಕ್ಷ, ಹಾಗು ಬೆಣಿವಾಡ ಗ್ರಾಮದ ಬಸವೇಶ್ವರ ಸೊಸೈಟಿಯಲ್ಲಿ ರೂ. 1 ಲಕ್ಷ ಸಾಲ ಇತ್ತು.
ಪಡೆದ ಸಾಲವನ್ನು ತೀರಿಸುವ ವಿಚಾರದಲ್ಲಿ ಗಂಡನ ಜತೆ ಮನಸ್ಥಾಪ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಾನಸಿಕತೆಯಿಂದ ಜು.14 ರಾತ್ರಿ ತನ್ನ ಮನೆಯಲ್ಲಿ ಯಾವುದೊ ವಿಷಕಾರಿ ಔಷಧ ಸೇವಿಸಿದ್ದಳು. ಅದನ್ನು ನೋಡಿದ ಅವಳ ಗಂಡ ಶಿವಾನಂದ ಅವಳ ತಾಯಿ ಸಾವಕ್ಕನಿಗೆ ಮಾಹಿತಿ ನೀಡಿದ್ದಾನೆ.
ತಕ್ಷಣ ಲಗಮವ್ವನನ್ನು ಹುಕ್ಕೇರಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಪ್ರಥಮ ಚಿಕಿತ್ಸೆ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಘಟಪ್ರಭಾ ಜೆ.ಜಿ.ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿನ ವೈದ್ಯರು ಸ್ಥಳೀಯ ಕೆಎಚ್ಐ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದರಂತೆ. ಅಲ್ಲಿ ಉಪಚಾರ ಪಡೆಯುವಾಗ ಜು.15 ರಂದು ಸಂಜೆ 5 ಗಂಟೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.
ಅವಳ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ಮೃತಳ ತಾಯಿ ಸಾವಕ್ಕ ಪೊಲೀಸರಿಗೆ ತಿಳಿಸಿದ್ದಾಳೆ. ಹುಕ್ಕೇರಿ ಎಎಸ್ಐ ಕೆ.ಎನ್.ಪಿಂಜಾರ ಪ್ರಕರಣ ದಾಖಲಿಸಿ ತನಿಖೆ ದುವರೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.