ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ₹2 ಕೋಟಿ ಅವ್ಯವಹಾರ ಆರೋಪ- ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 15:47 IST
Last Updated 26 ಡಿಸೆಂಬರ್ 2023, 15:47 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ₹2 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರದ ತನಿಖೆಗೆ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಜಿಲ್ಲಾ ನಿವೃತ್ತ ನ್ಯಾಯಾಧೀಶರು ಹಾಗೂ ಇಲಾಖೆಯ ಕಾನೂನು ಸಲಹೆಗಾರರಾದ ಎಚ್‌.ಜಿ.ನಾಗರತ್ನ ಅವರನ್ನು ತನಿಖಾಧಿಕಾರಿ ಆಗಿ ನೇಮಕ ಮಾಡಲಾಗಿದೆ.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಹಿಂದಿನ ಉಪನಿರ್ದೇಶಕ ಆರ್‌.ನಾಗರಾಜ ₹2 ಕೋಟಿಗೂ ಅಧಿಕ ಮೊತ್ತದ ಸುಳ್ಳು ಬಿಲ್‌ ತೆಗೆದು ಅವ್ಯವಹಾರ ನಡೆಸಿದ್ದಾರೆ’ ಎಂದು ಇನ್ನೊಬ್ಬ ಉಪನಿರ್ದೇಶಕ ಎ.ಎಂ. ಬಸವರಾಜ್‌ ರಾಜ್ಯ ಸರ್ಕಾರಕ್ಕೆ ದೂರು ಬರೆದಿದ್ದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಯಲ್ಲಿ ಡಿ.23ರಂದು ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತನಿಖೆಗೆ ಆದೇಶ ಹೊರಡಿಸಿದ್ದಾರೆ.

‘ಡಿ.20ರಂದು ನಾನು ಬೆಳಗಾವಿ ಗ್ರಾಮೀಣ, ರಾಮದುರ್ಗ, ಬೈಲಹೊಂಗಲ ಹಾಗೂ ಸವದತ್ತಿ ಎಂಎಸ್‌ಪಿಸಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇದಕ್ಕೂ ಮುನ್ನ ಉಪನಿರ್ದೇಶಕರಾಗಿದ್ದ ಆರ್‌.ನಾಗರಾಜ್‌ ಹಾಗೂ ವಿಷಯ ನಿರ್ವಾಹಕ ವಿಕ್ರಮ್‌ ಎನ್ನುವವರು ಸೇರಿಕೊಂಡು ಇದೇ ವರ್ಷದ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಅವ್ಯವಹಾರ ಎಸಗಿದ್ದು ಗೊತ್ತಾಗಿದೆ. ಬೆಂಗಳೂರಿನ ರಾಜಾಜಿನಗರದ ಜಗಾದಿ ಎಂಟರ್‌ಪ್ರೈಸಿಸ್‌ ಹೆಸರಿನಲ್ಲಿ ಪೂರಕ ಪೌಷ್ಟಿಕ ಆಹಾರ ಪಡೆದಿದ್ದಾಗಿ ಸುಳ್ಳು ಬಿಲ್‌ ಸೃಷ್ಟಿಸಿದ್ದಾರೆ’ ಎಂದು ಬಸವರಾಜ ಅವರು ದೂರಿನಲ್ಲಿ ತಿಳಿಸಿದ್ದರು.

‘1,550 ಕೆಜಿ ಶೇಂಗಾ ಬೀಜ ₹1.86 ಲಕ್ಷ, 900 ಕೆಜಿ ಹುರಿಗಡಲೆ ₹89 ಸಾವಿರ, 2150 ಕೆಜಿ ಹೆಸರುಕಾಳು ₹2.36 ಲಕ್ಷ, 540 ಕೆಜಿ ತೊಗರಿಬೇಳೆ ₹65 ಸಾವಿರ, 390 ಕೆಜಿ ಹೆಸರುಬೇಳೆ ₹ 45 ಸಾವಿರ, ಉಪ್ಪು, ಬೆಲ್ಲ ಸೇರಿ ₹1.08 ಲಕ್ಷ ಹೀಗೆ ವಿವಿಧ ಸಾಮಗ್ರಿಗಳು ಸೇರಿ ಒಟ್ಟು ₹4.57 ಲಕ್ಷ ಬಿಲ್‌ ತೆಗೆಯಲಾಗಿದೆ. ಇದೇ ರೀತಿ ಬೆಳಗಾವಿ ಗ್ರಾಮೀಣದಲ್ಲಿ ಒಟ್ಟು ₹7.45 ಲಕ್ಷ, ರಾಮದುರ್ಗದಲ್ಲಿ ₹5.53 ಲಕ್ಷದ ಬಿಲ್‌ ತೆಗೆಯಲಾಗಿದೆ. ಈ ಎಲ್ಲ ಬಿಲ್‌ಗಳನ್ನು ನಾನು ಪರಿಶೀಲಿಸಿದ ಬಳಿಕ ಇವು ನಕಲಿ ಎಂದು ಕಂಡುಬಂದಿದೆ’ ಎಂದೂ ಬರೆದಿದ್ದರು.

‘ನಾಗರಾಜ್‌ ಹಾಗೂ ವಿಕ್ರಮ್‌ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಇವರ ಮೇಲೆ ಉನ್ನತಮಟ್ಟದ ತನಿಖೆ ನಡೆಸಬೇಕು’ ಎಂದೂ ಬಸವರಾಜ್‌ ಅವರು ಇಲಾಖೆಯ ಕಾರ್ಯದರ್ಶಿ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದರು.

ಅಮಾನತು

ಬಸವರಾಜ್‌ ಅವರು ವರ್ಷದ ಹಿಂದೆ ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾಗಿದ್ದರು. ಅವರ ವರ್ಗಾವಣೆ ನಂತರ ಆ ಸ್ಥಾನಕ್ಕೆ ನಾಗರಾಜ್ ಅವರನ್ನು ನಿಯೋಜಿಸಲಾಗಿತ್ತು. ಆದರೆ, ಕೆಎಟಿ ಮೂಲಕ ಆದೇಶ ತಂದ ಬಸವರಾಜ ಮತ್ತೆ ತಮ್ಮ ಕುರ್ಚಿ ಮೇಲೆ ಬಂದು ಕುಳಿತರು. ಇಬ್ಬರ ಮಧ್ಯೆ ಕುರ್ಚಿಗಾಗಿ ಸಮರ ನಡೆದೇ ಇದೆ.

ಅಧಿಕಾರ ದುರುಪಯೋಗ, ಕಚೇರಿಯ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ ದೂರಿನ ಮೇರೆಗೆ ಬಸವರಾಜ್ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.