ಚಿಕ್ಕೋಡಿ(ಬೆಳಗಾವಿ ಜಿಲ್ಲೆ): ‘ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದಿಂದ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಭಾವನೆ ಮೂಡುತ್ತಿದೆ. ಇಂಥ ಘಟನೆ ನಡೆಯುತ್ತಲೇ ಇದ್ದರೂ, ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಆರೋಪಿಸಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಹೊಣೆಗಾರಿಕೆಯಾಗಿದೆ. ಹೀಗಿರುವಾಗ, ಇದೊಂದು ಆಕಸ್ಮಿಕ ಘಟನೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು, ಜನರಿಗೆ ಕುಡಿಯುವ ನೀರು ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ರೈತರ ಬದುಕಿಗೆ ಗ್ಯಾರಂಟಿ ಇಲ್ಲ. ಹೆಣ್ಣು ಮಕ್ಕಳ ರಕ್ಷಣೆಗೂ ಗ್ಯಾರಂಟಿ ಇಲ್ಲ’ ಎಂದು ಆಪಾದಿಸಿದರು.
ಪ್ರತಿಭಟನೆ ಇಂದು: ‘ನೇಹಾ ಕೊಲೆ ಪ್ರಕರಣ ಖಂಡಿಸಿ ಏ.22ರಂದು ಬೆಳಿಗ್ಗೆ 10ಕ್ಕೆ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಗಾಂಧಿ ಕಟ್ಟೆಯಿಂದ ಬಸವ ವೃತ್ತದವರೆಗೆ ಮೆರವಣಿಗೆ ನಡೆಯಲಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ’ ಎಂದು ಹೇಳಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ಚಂದ್ರಶೇಖರ ಕವಟಗಿ, ಸತೀಶ ಅಪ್ಪಾಜಿಗೋಳ, ಶಾಂಭವಿ ಅಶ್ವತ್ಥಪುರ, ಅಪ್ಪಾಸಾಹೇಬ ಚೌಗಲಾ, ಅಮೃತ ಕುಲಕರ್ಣಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.