ಬೆಳಗಾವಿ: ‘ರಾಜ್ಯದಲ್ಲಿ ಮಹಿಳಾ ನಾಯಕಿಯರು ಹಾಗೂ ಕಾರ್ಯಕರ್ತೆಯರು ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್‌ಗಳನ್ನು ಕೊಟ್ಟಿದ್ದೇವೆ. ಎಲ್ಲ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿ ನಿಮಗೆ ಉತ್ತರ ಕೊಡುತ್ತೇವೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
‘ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಏಕಮಾತ್ರ ಮಹಿಳಾ ಸಂಸದರಾದ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ತಪ್ಪಿಸಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮಹಿಳೆಯರನ್ನು ನಿರ್ಲಕ್ಷ್ಯ ಮಾಡಿಲ್ಲ. ಅವರ ಅನಿಸಿಕೆ ಪಡೆದೇ ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ ಅವರನ್ನು ನಿಲ್ಲಿಸಿದ್ದೇವೆ’ ಎಂದರು.
‘ಜಿಲ್ಲೆಯಲ್ಲಿ ಯಾವುದೇ ಒಡಕು, ಅಡ್ಡಿ, ಆತಂಕ ಇಲ್ಲ. ಬೆಳಗಾವಿಗೆ ನರೇಂದ್ರ ಮೋದಿ ಅವರನ್ನು ಕರೆಯಿಸಿ ಪ್ರಚಾರ ಮಾಡಬೇಕು ಎಂದು ಎಲ್ಲ ಕಾರ್ಯಕರ್ತರು ಕೇಳಿದ್ದಾರೆ. ಈ ಸಂಬಂಧ ಚರ್ಚೆ ಮಾಡುತ್ತೇನೆ. ಯಾವುದೇ ಅಸಮಾಧಾನ ಶಮನ ಮಾಡುವುದು ಈಗ ಅಗತ್ಯವಿಲ್ಲ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯಲ್ಲಿ ತಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ‘ಎರಡೂ ಪಕ್ಷಗಳು ಒಂದಾಗಿದ್ದರಿಂದ ಬಲ ಹೆಚ್ಚಿದೆ. ನಿರ್ಲಕ್ಷ್ಯ ಎಲ್ಲೂ ಮಾಡುವುದಿಲ್ಲ’ ಎಂದರು.
‘ಎಲ್ಲಿ ಹೋದರೂ ಮೋದಿ ಪರ ಅಲೆ ಕೇಳುತ್ತಿದ್ದೇವೆ. ಈಗ ಜಿಲ್ಲೆಯ ಪ್ರಮುಖ ನಾಯಕರ ಜೊತೆಗೆ ಮಾತುಕತೆ ಮಾಡುತ್ತಿದ್ದೇನೆ. ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ. ರಾಜ್ಯದ ಉದ್ದಗಲಕ್ಕೂ ಪ್ರಚಾರ ಆರಂಭಿಸಿದ್ದು, ಜಿಲ್ಲೆಯಲ್ಲೂ ವಿಧಾನಸಭೆವಾರು ಪ್ರಚಾರ ಮಾಡುತ್ತೇವೆ’ ಎಂದರು.
‘ಜಗದೀಶ ಶೆಟ್ಟರ್ ಹೊರಗಿನವರು ಎಂಬ ಭಾವನೆ ಯಾರಲ್ಲೂ ಇಲ್ಲ. ಶೆಟ್ಟರ್ ಅವರಂಥ ದೊಡ್ಡ ನಾಯಕ ಬೇಕು ಎಂಬ ಕಾರಣಕ್ಕೆ ನಾವೇ ಅವರನ್ನು ಮರಳಿ ಪಕ್ಷಕ್ಕೆ ಕರೆದುಕೊಂಡು ಬಂದಿದ್ದೇವೆ. ಅತ್ಯಂತ ಖುಷಿಯಿಂದಲೇ ಅವರು ಬೆಳಗಾವಿ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾರೆ’ ಎಂದರು.
ಸಂಸದೆ ಮಂಗಲಾ ಅಂಗಡಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮೇಯರ್ ಸವಿತಾ ಕಾಂಬಳೆ, ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕರಾದ ಸಂಜಯ ಪಾಟೀಲ, ಮಹಾಂತೇಶ ದೊಡ್ಡಗೌಡರ, ಟಿಕೆಟ್ ಆಕಾಂಕ್ಷಿ ಆಗಿದ್ದ ಮಹಾಂತೇಶ ಕವಟಗಿಮಠ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.