ಬೆಳಗಾವಿ: ‘ಕಳಸಾ–ಬಂಡೂರಿ ಯೋಜನೆಯಡಿ ರಾಜ್ಯಕ್ಕೆ 13 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದು, ಅಧಿಸೂಚನೆಯೂ ಹೊರಬಿದ್ದಿದೆ. ಆದರೆ, ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಕಾಮಗಾರಿಗೆ ಅನುಮತಿಯಷ್ಟೇ ಸಿಗಬೇಕಿದೆ. ನನ್ನ ಅಧಿಕಾರವಧಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಬೆಳಗಾವಿ ಕ್ಷೇತ್ರದ ಸಂಸದ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಕ್ಕೆ ನೀರು ಹಂಚಿಕೆಗೊಳಿಸಿ, ಮಹದಾಯಿ ನ್ಯಾಯಾಧಿಕರಣ ತೀರ್ಪು ಕೊಟ್ಟಿದೆ. ಹಾಗಾಗಿ ಗೋವಾದವರು ಇಡೀ ಯೋಜನೆಗೇ ಆಕ್ಷೇಪ ವ್ಯಕ್ತಪಡಿಸಿದರೂ ಸಮಸ್ಯೆಯಾಗದು. ಯೋಜನೆ ಅನುಷ್ಠಾನ ವಿಚಾರವಾಗಿ ಅಗತ್ಯಬಿದ್ದರೆ, ಗೋವಾ ಮುಖ್ಯಮಂತ್ರಿ ಜತೆಗೆ ಮಾತುಕತೆ ನಡೆಸುತ್ತೇನೆ. ಅದು ಫಲಪ್ರದವಾಗದಿದ್ದರೆ, ಕಾನೂನು ವ್ಯಾಪ್ತಿಯಲ್ಲೇ ಕೇಂದ್ರದ ಮೇಲೆ ಒತ್ತಡ ತರಲು ಯತ್ನಿಸುತ್ತೇನೆ’ ಎಂದರು.
‘ಧಾರವಾಡ-ಚನ್ನಮ್ಮನ ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಉಂಟಾದ ಸಮಸ್ಯೆ ಬಗೆಹರಿಸಿ, ತ್ವರಿತವಾಗಿ ಕಾಮಗಾರಿ ಆರಂಭಿಸಲು ಕ್ರಮ ವಹಿಸುತ್ತೇನೆ’ ಎಂದು ಭರವಸೆ ನೀಡಿದ ಅವರು, ‘ಬೆಳಗಾವಿ ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಯತ್ನಿಸುತ್ತೇನೆ. ಇಲ್ಲಿಂದ ದೇಶದ ವಿವಿಧ ಮಹಾನಗರಗಳಿಗೆ ವಿಮಾನ ಸೇವೆ ಒದಗಿಸಲು ಪ್ರಯತ್ನಿಸುತ್ತೇನೆ’ ಎಂದು ಆಶ್ವಾಸನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.