ಬೆಳಗಾವಿ: ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ, 36 ಸದಸ್ಯರಿರುವ ಬೆಳಗಾವಿಯ ಚವಾಟ್ ಗಲ್ಲಿಯ ಮುರಳೀಧರ (ರಾಜು) ಜಾಧವ ಅವರ ಅವಿಭಕ್ತ ಕುಟುಂಬ ಗಮನ ಸೆಳೆಯುತ್ತಿದೆ. ಈ ಕುಟುಂಬದವರು 3 ತಲೆಮಾರುಗಳಿಂದ ಒಂದಾಗಿ ಬಾಳುತ್ತಿದ್ದಾರೆ. ಪ್ರಸ್ತುತ ಅವರ ಮನೆಯಲ್ಲಿ 16 ಮಕ್ಕಳು ಸೇರಿ 36 ಸದಸ್ಯರಿದ್ದಾರೆ.
ಮೂರು ಮಹಡಿಗಳ ಮನೆಯಲ್ಲಿ ನೆಲಮಹಡಿಯಲ್ಲಷ್ಟೇ ಅಡುಗೆ ಕೋಣೆಯಿದೆ. ಎಲ್ಲ ಮಹಿಳೆಯರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಸರತಿ ಆಧಾರದಲ್ಲಿ ಅಡುಗೆ ಮಾಡುತ್ತಾರೆ. ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚವನ್ನು ಎಲ್ಲರೂ ಒಟ್ಟಾಗಿ ಭರಿಸುತ್ತಿದ್ದಾರೆ.
ಇಲ್ಲಿನ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಜಾಧವ ಸಹೋದರರು ಮಳಿಗೆ ಹೊಂದಿದ್ದಾರೆ. ಜೊತೆಗೆ ಕಟ್ಟಡ ನಿರ್ಮಾಣ ಗುತ್ತಿಗೆ ಕೆಲಸ ಮಾಡುತ್ತಾರೆ.
‘ಯಾರಿಗೇ ಸಮಸ್ಯೆಯಾದರೂ, ತಕ್ಷಣವೇ ಸೇರಿ ಚರ್ಚಿಸುತ್ತೇವೆ. ಬಹಳಷ್ಟು ಜನರಿರುವುದರಿಂದ ಇಲ್ಲಿಯೇ ಪರಿಹಾರವೂ ಸಿಗುತ್ತದೆ. ಯಾವುದೇ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದರೂ ಅದನ್ನು ತಕ್ಷಣ ಬಗೆಹರಿಸುತ್ತೇವೆ. ಇದೇ ನಮ್ಮ ಕೂಡು ಕುಟುಂಬದ ಯಶಸ್ಸಿನ ಗುಟ್ಟು’ ಎನ್ನುತ್ತಾರೆ ಕುಟುಂಬಸ್ಥರು.
‘ನಮ್ಮ ಮನೆಯಲ್ಲಿ ಪ್ರತಿ ತಿಂಗಳು ಕೆಲವರ ಜನ್ಮದಿನವಿರುತ್ತದೆ. ಏಪ್ರಿಲ್, ಮೇ ತಿಂಗಳಲ್ಲಂತೂ ಸಾಲು–ಸಾಲಾಗಿ ವಿವಾಹ ವಾರ್ಷಿಕೋತ್ಸವಗಳಿವೆ. ಎಲ್ಲ ಕಾರ್ಯಕ್ರಮಗಳಲ್ಲಿ ಸಂಬಂಧಿಕರು, ಸಹೋದರಿಯರು ಸೇರಿ 100 ಜನರಾದರೂ ಪಾಲ್ಗೊಂಡು ಸಂಭ್ರಮಿಸುತ್ತೇವೆ. ಎಲ್ಲರೂ ಒಗ್ಗೂಡಿ ಬದುಕುತ್ತಿರುವ ಬಗ್ಗೆ ಹೆಮ್ಮೆ ಇದೆ’ ಎಂದು ಸಹೋದರರು ಸಂತಸಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.