ವಿಧಾನಸಭೆ: ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ನೇಮಕದ ಬಳಿಕ ಮುನಿಸಿಕೊಂಡಿರುವ ಬಸನಗೌಡ ಪಾಟೀಲ ಯತ್ನಾಳ, ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಸದನದಲ್ಲಿ ಹಲವು ಬಾರಿ ತಮ್ಮದೇ ಪಕ್ಷವನ್ನು ಕುಟುಕಿದರು.
ಆರ್. ಅಶೋಕ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ಅಭಿನಂದಿಸಲು ಅವಕಾಶ ನೀಡಿದರು. ಆಡಳಿತ ಮತ್ತು ವಿರೋಧ ಪಕ್ಷಗಳ ಹಲವರು ಅಶೋಕ ಅವರನ್ನು ಅಭಿನಂದಿಸಿ ಮಾತನಾಡಿದರು. ಮಾತನಾಡುವಂತೆ ಯತ್ನಾಳ ಅವರ ಹೆಸರನ್ನು ಸ್ಪೀಕರ್ ಕರೆದರು. ಮಾತನಾಡುವುದಿಲ್ಲ ಎಂದು ಕೈ ಸನ್ನೆ ಮಾಡಿದ ಅವರು, ಸುಮ್ಮನೆ ಕುಳಿತು ತಮ್ಮ ವಿರೋಧವನ್ನು ಹೊರಹಾಕಿದರು.
ಅಭಿನಂದನೆಯ ಬಳಿಕ ಬರ ಪರಿಸ್ಥಿತಿ ಕುರಿತು ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವಂತೆ ಅಶೋಕ ಆಗ್ರಹಿಸಿದರು. ಪ್ರಶ್ನೋತ್ತರ ಮತ್ತು ಶೂನ್ಯವೇಳೆಯ ಬಳಿಕವೇ ಅವಕಾಶ ನೀಡುವುದಾಗಿ ಸಭಾಧ್ಯಕ್ಷರು ಹೇಳಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೂ ಪ್ರಶ್ನೋತ್ತರ ಮತ್ತು ಶೂನ್ಯವೇಳೆಯ ಬಳಿಕವೇ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು.
ಆಗ ಮಧ್ಯ ಪ್ರವೇಶಿಸಿದ ಯತ್ನಾಳ, ‘ಪ್ರಶ್ನೋತ್ತರ ಕಲಾಪ ಪ್ರತಿಯೊಬ್ಬ ಶಾಸಕರ ಹಕ್ಕು. ಅದಕ್ಕೇ ಆದ್ಯತೆ ಸಿಗಲಿ’ ಎನ್ನುವ ಮೂಲಕ ಪಕ್ಷದ ವಿರುದ್ಧದ ನಿಲುವು ಪ್ರದರ್ಶಿಸಿದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಬುಧವಾರದಿಂದ ಎರಡು ದಿನ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಖಾದರ್ ಪ್ರಕಟಿಸಿದರು. ಆಗಲೂ ಎದ್ದುನಿಂತ ಯತ್ನಾಳ, ‘ಸಭಾಧ್ಯಕ್ಷರೇ ಉತ್ತರ ಕರ್ನಾಟಕದ ಕುರಿತ ಚರ್ಚೆಗೆ ಅವಕಾಶ ಕಲ್ಪಿಸುತ್ತಿರುವುದಕ್ಕೆ ಧನ್ಯವಾದ. ರಾಜಕೀಯ ನಾಯಕತ್ವವೂ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಎಲ್ಲ ಅನ್ಯಾಯಗಳ ಬಗ್ಗೆಯೂ ಚರ್ಚೆಯಾಗಲಿ’ ಎಂದರು.
ಶಾಸಕಾಂಗ ಸಭೆಗೆ ಗೈರು: ಕಲಾಪಕ್ಕೆ ಹಾಜರಾಗುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಯತ್ನಾಳ, ‘ಪಕ್ಷದಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಡುವವರೆಗೂ ನಾನು ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸುವುದಿಲ್ಲ’ ಎಂದು ಹೇಳಿದರು.
‘ಅನುಕೂಲಸ್ಥರಿಗೆ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನಗಳನ್ನು ನೀಡಲಾಗಿದೆ. ರಾಜ್ಯದ ಜನರ ದೃಷ್ಟಿಯಲ್ಲಿ ಎರಡೂ ಹುದ್ದೆಗಳಿಗೂ ನಾನು ಅರ್ಹನಿದ್ದೇನೆ, ಸಾಮರ್ಥ್ಯ ಹೊಂದಿದ್ದೇನೆ. ಉತ್ತರ ಕರ್ನಾಟಕ ಭಾಗಕ್ಕೆ ಈ ಹುದ್ದೆಗಳು ಸಿಗಬೇಕು. ಎರಡೂ ಹುದ್ದೆಗಳನ್ನು ಹಳೇ ಮೈಸೂರು ಭಾಗಕ್ಕೆ ನೀಡಲಾಗಿದೆ. ನಾವು ಉತ್ತರ ಕರ್ನಾಟಕದವರು ಗಂಟೆ ಹೊಡೆಯಬೇಕಾ. ನಮಗೆ ನ್ಯಾಯ ಸಿಗುವವರೆಗೆ ಯಾವುದೇ ಹೋರಾಟಕ್ಕೂ ಸಿದ್ಧ’ ಎಂದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಒಪ್ಪಿ ಜನರು ಮತ ಹಾಕಿದ್ದಾರೆ. ದೇಶಕ್ಕೆ ಮೋದಿ ಒಬ್ಬರೇ ಗ್ಯಾರಂಟಿ. ತೆಲಂಗಾಣದಲ್ಲಿ ಕುಟುಂಬ ರಾಜಕಾರಣವನ್ನು ಕಿತ್ತು ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಕುಟುಂಬ ರಾಜಕಾರಣ ಕೊನೆಗೊಳ್ಳಲಿದೆ. ವಂಶ ರಾಜಕಾರಣ ಮುಕ್ತಿ ಮಾಡುವುದೇ ತಮ್ಮ ಗುರಿ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.