ಬೆಳಗಾವಿ: ‘ಖಾನಾಪುರ ತಾಲ್ಲೂಕಿನ ಹಲಸಿ ಬಳಿ ವ್ಯಕ್ತಿಯೊಬ್ಬರು ಆಕಸ್ಮಿಕ ಗುಂಡಿನ ದಾಳಿಯಿಂದ ಮೃತಪಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಐವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಕಸ್ಮಿಕ ಗುಂಡಿನ ದಾಳಿಗೆ ಕಾರಣವಾದ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಹೊಂದಿರುವ ಪ್ರಕರಣವೂ ಕೊಲೆಗೆ ಸಮಾನವಾಗಿದೆ. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಮತ್ತು ಆರೋಪಿಗಳು ನವಿಲುಗಳ ಬೇಟೆಯಾಡಿದ ಕಾರಣ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರವೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದರು.
‘ನವೆಂಬರ್ 11ರಂದು ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಹಲಸಿಯ ಅಲ್ತಾಫ್ ಮಕಾನದಾರ(30) ಮೃತಪಟ್ಟಿದ್ದಾರೆ. ಆರೋಪಿಗಳಾದ ಮಕ್ತುಮಸಾಬ್ ತಹಶೀಲ್ದಾರ, ಉಸ್ಮಾನಸಾಬ್ ತಹಶೀಲ್ದಾರ ಮತ್ತು ಅವರ ನೆರೆಹೊರೆಯವರು ಅಲ್ತಾಫ್ ಮೃತದೇಹವನ್ನು ಮನೆಗೆ ತಂದಿದ್ದರು. ಮಕ್ತುಮಸಾಬ್ ಮತ್ತು ಉಸ್ಮಾನಸಾಬ್ ಈ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಅಲ್ತಾಫ್ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು’ ಎಂದು ಹೇಳಿದರು.
‘ಮಲ್ಲಿಕ್ ಶಾಹಿವಾಲೆ, ಅರ್ಬಾಝ್ ಕಿತ್ತೂರು ಮತ್ತು ನಾವು ಹಳ್ಳದಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಗುಂಡು ಹಾರಿಸಿ ಅಲ್ತಾಫ್ ಕೊಲೆ ಮಾಡಿದ್ದಾರೆ ಎಂದು ಉಸ್ಮಾನಸಾಬ್ ಮತ್ತು ಮಕ್ತುಮಸಾಬ್ ವಿಚಾರಣೆ ವೇಳೆ ತಿಳಿಸಿದ್ದರು. ಆದರೆ, ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಪರಿಶೀಲಿಸಿದಾಗ, ಒಂದು ಮಾಂಸದ ಚೀಲ ಸಿಕ್ಕಿತ್ತು. ಆಗ, ಕೋಳಿ ಮಾಂಸ ಇಲ್ಲಿಗೆ ತಂದು ಬೇಯಿಸಿ ತಿನ್ನಲು ಯೋಜಿಸಿದ್ದೆವು ಎಂದಿದ್ದರು. ಆದರೆ, ಅದು ಕೋಳಿ ಮಾಂಸದ ರೀತಿ ಇರಲಿಲ್ಲ. ಆರೋಪಿಗಳ ಹೇಳಿಕೆ ಮತ್ತು ವಾಸ್ತವ ಸ್ಥಿತಿಗೆ ವ್ಯತ್ಯಾಸ ಕಂಡುಬಂದು, ತೀವ್ರವಾಗಿ ವಿಚಾರಣೆ ನಡೆಸಿದಾಗ ಸತ್ಯಾಂಶ ತಿಳಿದುಬಂದಿದೆ’ ಎಂದರು.
‘ಆರಂಭದಲ್ಲಿ ಮಕ್ತುಮಸಾಬ್, ಉಸ್ಮಾನಸಾಬ್ ಮತ್ತು ಮಲ್ಲಿಕ್ ವಶಕ್ಕೆ ಪಡೆದಿದ್ದೆವು. ಪರಾರಿಯಾಗಿದ್ದ ಅರ್ಬಾಝ್‌ನನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದ್ದೇವೆ. ಕಾಡಿನಲ್ಲಿ ಪ್ರಾಣಿ–ಪಕ್ಷಿಗಳ ಬೇಟೆಯಾಡಲು ಕಾಯುತ್ತಿದ್ದಾಗ, ಪೊದೆಗಳಲ್ಲಿ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರ ಹೊರತೆಗೆಯುವಾಗ ಆಕಸ್ಮಿಕವಾಗಿ ಗುಂಡು ಹಾರಿತು. ನಂತರ ಆ ಶಸ್ತ್ರಾಸ್ತ್ರವನ್ನು ಹಳ್ಳದಲ್ಲಿ ಎಸೆದೆವು ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ’ ಎಂದು ಗುಳೇದ ಹೇಳಿದರು.
‘ಕೃತ್ಯಕ್ಕೆ ಬಳಸಿದ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವಂಥದ್ದು ಎಂದು ಆರೋಪಿಗಳು ಹೇಳಿದ್ದರು. ಆದರೆ, ತನಿಖೆ ವೇಳೆ ಅದು ಪರವಾನಗಿ ಹೊಂದದ ಶಸ್ತ್ರಾಸ್ತ್ರ ಎಂದು ತಿಳಿದುಬಂದಿದೆ. ಮಾರುತಿ ಸುತಾರ ಎಂಬುವರಿಗೆ ಸೇರಿದ ಈ ಶಸ್ತ್ರಾಸ್ತ್ರ ಬಳಸಿ, ಹಲವು ಬಾರಿ ಕಾಡುಪ್ರಾಣಿ, ಪಕ್ಷಿಗಳ ಬೇಟೆಯಾಡಿರುವುದು ಗಮನಕ್ಕೆ ಬಂದಿದೆ. ಈ ಹಿಂದೆಯೂ ವನ್ಯಪ್ರಾಣಿಗಳ ಮೇಲೆ ದಾಳಿ ಮಾಡಿದ ಬಗ್ಗೆ ಉಸ್ಮಾನಸಾಬ್ ಮತ್ತು ಮಕ್ತುಮಸಾಬ್ ಮೇಲೆ ಆರೋಪಗಳಿವೆ’ ಎಂದು ತಿಳಿಸಿದರು.
‘ಮಾರುತಿ ಸುತಾರ ಅನಧಿಕೃತವಾಗಿ ಶಸ್ತ್ರಾಸ್ತ್ರ ತಯಾರಿಸುತ್ತಿರುವುದು ಎಂಬ ಮಾಹಿತಿ ಸಿಕ್ಕಿದೆ. ಶಸ್ತ್ರಾಸ್ತ್ರಕ್ಕೆ ಬೇಕಿರುವ ಪರಿಕರಗಳು ಅವರ ಮನೆಯಲ್ಲಿ ಸಿಕ್ಕಿವೆ. ಅವರನ್ನೂ ವಶಕ್ಕೆ ಪಡೆದಿದ್ದು, ಶಸ್ತ್ರಾಸ್ತ್ರಕ್ಕೆ ಬೇಕಾದ ಪರಿಕರಗಳನ್ನು ಎಲ್ಲಿಂದ ತರುತ್ತಿದ್ದರು ಎಂಬ ವಿಚಾರಣೆ ನಡೆದಿದೆ’ ಎಂದರು.
ನಂದಗಡ ಪೊಲೀಸರು ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.