ಬೆಂಗಳೂರು: ‘ಇದು ನನ್ನ ಅಕ್ಕನ ಕೊಲೆ ಮಾತ್ರವಲ್ಲ. ಒಬ್ಬ ಪತ್ರಕರ್ತೆ, ಹೋರಾಟಗಾರ್ತಿ, ವಿಚಾರವಾದಿ, ಜನಪರ ಚಿಂತಕಿಯ ಹತ್ಯೆ’ ಎಂದು ಗೌರಿ ಲಂಕೇಶ್ ಅವರ ತಮ್ಮ ಇಂದ್ರಜಿತ್ ಲಂಕೇಶ್ ಹೇಳಿದರು.
ವಿಕ್ಟೋರಿಯಾ ಆಸ್ಪತ್ರೆ ಬಳಿ ಮಾತನಾಡಿದ ಅವರು, ‘ಅಕ್ಕನ ಚಲನವಲನಗಳನ್ನು ಗಮನಿಸಿಯೇ ಈ ಹೇಯ ಕೃತ್ಯ ಎಸಗಲಾಗಿದೆ. ದುರಂತ ನಡೆಯಬಾರದಿತ್ತು. ನನ್ನ ನೋವನ್ನು ಪದಗಳಲ್ಲಿ ವ್ಯಕ್ತಪಡಿಸಲು ಆಗುತ್ತಿಲ್ಲ’ ಎಂದು ಬಾವುಕರಾದರು.
‘ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಆರೋಪಿಗಳನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸಬೇಕು. ನಾಳೆ ಬೆಳಿಗ್ಗೆ ಮೃತದೇಹವನ್ನು ಸಾರ್ವಜನಿಕರ ದರ್ಶಕ್ಕೆ ಇಡಲಾಗುತ್ತದೆ. ಸ್ಥಳ ಆಯ್ಕೆ ಬಗ್ಗೆ ಅಮ್ಮ ಹಾಗೂ ಅಕ್ಕನ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾತನಾಡಿ, ‘ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಗಳನ್ನು ಇನ್ನು ಪತ್ತೆ ಮಾಡಿಲ್ಲ. ಗೌರಿ ಲಂಕೇಶ್ ಹತ್ಯೆಯು ಕಲಬುರ್ಗಿ ಹತ್ಯೆಯ ಮುಂದುವರೆದ ಭಾಗವಾಗಿದೆ ಎಂಬ ಸಂಶಯ ಮೂಡಿದೆ. ಇಂದು ದೇಶದಲ್ಲಿ ಯಾರೇ ಇಬ್ಬರು ವ್ಯಕ್ತಿಗಳು ಸೇರಿ ಮುಕ್ತವಾಗಿ ಮಾತನಾಡಲಾಗದ ವಾತಾವರಣ ನಿರ್ಮಾಣವಾಗಿದೆ’ ಎಂದು ಅವರು ಹೇಳಿದರು.
‘ನಾನು ಹಾಗೂ ಗೌರಿ ಅವರು ಆತ್ಮೀಯವಾಗಿದ್ದೆವು. ಅವರು ನನ್ನೊಂದಿಗೆ ಮುಕ್ತವಾಗಿ ಚರ್ಚೆ ಮಾಡುತ್ತಿದ್ದರು. ನನ್ನ ರಾಜಕೀಯ ಸಿದ್ಧಾಂತಗಳನ್ನು ಅವರು ವಿರೋಧಿಸುತ್ತಿದ್ದರು. ಸ್ನೇಹ ಪರವಾಗಿ ಇದ್ದರು’ ಎಂದು ಹೇಳಿದರು.
‘ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎನ್ನುವ ಆಗ್ರಹ ಒಂದು ರೀತಿಯ ರಾಜಕೀಯ ಆಟ. ಈ ಪ್ರಕರಣದ ತನಿಖೆಯನ್ನು ರಾಜ್ಯದ ದಕ್ಷ ಅಧಿಕಾರಿಗಳೇ ನಡೆಸಬೇಕು. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯಂತೆ ಈ ಪ್ರಕರಣವು ಆಗಬಾರದು’ ಎಂದು ಹೇಳಿದರು.
***
ಆಘಾತ, ದಿಗ್ಭ್ರಮೆ
ಗೌರಿ ಲಂಕೇಶ್ ಹತ್ಯೆ ಅತ್ಯಂತ ವಿಷಾದಕರ, ದುರದೃಷ್ಟಕರ ಮತ್ತು ಎಚ್ಚರಿಕೆ ಗಂಟೆ. ನಮಗ ನ್ಯಾಯ ಬೇಕು
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
***
ಇಂದು ಆಕೆಯ ಜೀವವನ್ನು ತೆಗೆದ ಧರ್ಮಾಂದತೆ, ದ್ವೇಷ, ಅಸಹಿಷ್ಣುತೆ ಮತ್ತು ಹಿಂಸಾಚಾರವನ್ನು ಭಾರತದಲ್ಲಿ ಪೋಷಿಸಿದವರು ಯಾರು? ಅವರಿಗೆ ಆಕೆ ಅದೇಕೆ ಅಷ್ಟು ಬೆದರಿಕೆಯಾಗಿದ್ದಳು?
ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ
***
ತಂದೆಯ ಕೆಲಸವನ್ನು ಗೌರಿ ಧೈರ್ಯದಿಂದ ಮುನ್ನಡೆಸುತ್ತಿದ್ದಳು. ನಕ್ಸಲರನ್ನು ಬಿಡಿಸುವ ವಿಚಾರದಲ್ಲಿ ನಾನೂ ಆಕೆಯೊಂದಿಗೆ ಕೈಜೋಡಿಸಿದ್ದೆ. ಈ ಹತ್ಯೆಯ ಹಿಂದೆ ರಾಜಕೀಯ ಲೇಪ ಇದ್ದರೆ ನಿಜಕ್ಕೂ ಆತಂಕಕಾರಿ ವಿಷಯ. ಸರ್ಕಾರ ಕೂಡಲೇ ಹಂತಕರನ್ನು ಪತ್ತೆ ಹಚ್ಚಬೇಕು
–ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ
***
ಗೌರಿ ಲಂಕೇಶ್ ಹತ್ಯೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಇದೊಂದು ಪೈಶಾಚಿಕ, ವಿಕೃತ ಮನಸ್ಸಿನವರ ಘೋರ ಕೃತ್ಯ. ಮಹಿಳೆಯರ ಸಾಮರ್ಥ್ಯಕ್ಕೆ ಅವರು ಮಾದರಿಯಾಗಿದ್ದರು. ಕೊಲೆಗಡುಕರು ಯಾರೇ ಆಗಿದ್ದರೂ ಅವರಿಗೆ ಅತ್ಯುಗ್ರ ಶಿಕ್ಷೆ ಆಗಬೇಕು.
– ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಸಚಿವೆ
***
ಗೌರಿ ಲಂಕೇಶ್ ಹತ್ಯೆ ಹೇಡಿತನದ ಕೃತ್ಯ. ಸರ್ಕಾರ ತಕ್ಷಣವೇ ಕೊಲೆಗಡುಕರನ್ನು ಬಂಧಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
–ಎಂ. ಸಿದ್ದರಾಜು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ
***
ಸ್ವತಂತ್ರ ಪತ್ರಿಕೋದ್ಯಮ ಸಮೂಹಕ್ಕೆ ಅತ್ಯಂತ ದೊಡ್ಡ ನಷ್ಟ. ಮಾನವೀಯ ಕಳಕಳಿಯ, ಸ್ನೇಹಮಯಿ ಪತ್ರಕರ್ತೆಯೊಬ್ಬರನ್ನು ಕಳೆದುಕೊಂಡಿದ್ದೇವೆ. ದುಷ್ಕರ್ಮಿಗಳನ್ನು ಆದಷ್ಟು ಬೇಗ ಪತ್ತೆಹಚ್ಚಬೇಕು.
ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ
***
ಸಂಘಪರಿವಾರದ ಜೊತೆ ಗೌರಿ ಲಂಕೇಶ್ ತಾತ್ವಿಕ ವಿರೋಧ ಕಟ್ಟಿಕೊಂಡಿದ್ದರು. ಇದನ್ನು ಹೊರತುಪಡಿಸಿದರೆ ಅವರಿಗೆ ಬೇರೆ ಯಾರೂ ವಿರೋಧಿಗಳು ಇರಲಿಲ್ಲ. ಇದನ್ನು ನಾನು ಅವರ ಹತ್ತಿರದವರಲ್ಲಿ ಒಬ್ಬನಾಗಿ ಹೇಳುತ್ತಿದ್ದೇನೆ.
ನೂರ್ ಶ್ರೀಧರ, ಹೋರಾಟಗಾರ
***
ಇದು ವೈಚಾರಿಕತೆಗೆ ಬಿದ್ದ ದೊಡ್ಡ ಪೆಟ್ಟು. ಬಲಪಂಥೀಯರ ವಿರುದ್ಧ ಹೋರಾಟ ಮಾಡುವವರಿಗೆಲ್ಲ ಇದೇ ಗತಿ ಎಂಬುದನ್ನು ಕ್ರಿಯೆಯಲ್ಲಿ ತೋರಿಸಿದ್ದಾರೆ. ಕೊಲೆ ಬೆದರಿಕೆ ಬಗ್ಗೆ ಹಲವಾರು ಬಾರಿ ಹೇಳಿಕೊಂಡಿದ್ದರು. ಅದಕ್ಕೆ ಹೆದರುವುದಿಲ್ಲ, ಅನ್ಯಾಯದ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ ಎಂದೇ ಹೇಳುತ್ತಿದ್ದರು.
– ಬಿ.ಟಿ. ಲಲಿತಾ ನಾಯಕ್, ಸಾಹಿತಿ
***
ಕೋಮುವಾದಿಗಳು ಹಾಗೂ ಶೋಷಣೆಯ ವಿರುದ್ಧ ಬರವಣಿಗೆ ಮತ್ತು ಮಾತಿನ ಮೂಲಕವೇ ಗಟ್ಟಿಯಾಗಿ ಪ್ರತಿಭಟಿಸುತ್ತಿದ್ದ ಗೌರಿ ಲಂಕೇಶ ಹತ್ಯೆ ಅಮಾನುಷ. ಜನಪರ ಕಾಳಜಿಯ ಗೌರಿ ಅವರ ಹತ್ಯೆ ಆಘಾತ ತಂದಿದೆ, ಏನು ಹೇಳಬೇಕೋ ಗೊತ್ತಾಗುತ್ತಿಲ್ಲ
–ಸದಾಶಿವ ಶೆಣೈ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ
***
ಭಿನ್ನ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವ ಪ್ರಜಾಪ್ರಭುತ್ವದ ಮೂಲ ಬೇರು ಸಾಯುತ್ತಿದೆ ಎಂಬುದು ವಿಚಾರವಾದಿಗಳ ಸಾಲು ಸಾಲು ಹತ್ಯೆಗಳಿಂದ ಗೊತ್ತಾಗುತ್ತಿದೆ. ಹಿಂಸೆಯ ಮೂಲಕ ಧರ್ಮ ರಕ್ಷಣೆ ಮಾಡುತ್ತೇವೆ ಎಂದು ಹೊರಟಿರುವುದು ಅಪಾಯಕಾರಿ ನಡೆ.
–ಕೆ.ವೈ. ನಾರಾಯಣಸ್ವಾಮಿ, ನಾಟಕಕಾರ
***
ಒಬ್ಬ ಹೋರಾಟಗಾರ್ತಿಯನ್ನು ಕಳೆದುಕೊಂಡಿದ್ದೇವೆ. ಪೊಳ್ಳು ಭರವಸೆಗಳನ್ನು ನೀಡುವ ಯಾವ ಸರ್ಕಾರವನ್ನು ನಂಬುವ ಸ್ಥಿತಿಯಲ್ಲಿ ಈಗ ನಾವಿಲ್ಲ. ನಮ್ಮ ಹೋರಾಟದ ಸ್ವರೂಪಗಳು ಹೇಗಿರಬೇಕು ಎಂಬುದನ್ನು ಆಲೋಚಿಸುವ ಕಾಲ ಈಗ ಬಂದಿದೆ.
–ಪ್ರೊ.ರಾಜೇಂದ್ರ ಚೆನ್ನಿ, ವಿಮರ್ಶಕ
***
ಇದು ಪತ್ರಕರ್ತೆ ಅಥವಾ ಹೋರಾಟಗಾರ್ತಿಯ ಹತ್ಯೆ ಮಾತ್ರ ಅಲ್ಲ. ಸಾಮಾನ್ಯ ನಾಗರಿಕರನ್ನೂ ಹತ್ಯೆ ಮಾಡಿದಂತೆ ಆಗಿದೆ. ಸರ್ಕಾರಗಳ ಮೈಮರೆತಿರುವುದೇ ಇದಕ್ಕೆ ಕಾರಣ. ಗೌರಿ ಲಂಕೇಶ್ ಹತ್ಯೆ ಖಂಡಿಸಿ ರಾಜ್ಯದಾದ್ಯಂತ ಪತ್ರಕರ್ತರ ಸಂಘ ಪ್ರತಿಭಟನೆ ನಡೆಸಲಿದೆ.
– ಎನ್. ರಾಜು, ಅಧ್ಯಕ್ಷ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
***
ನ್ಯಾಯಪರತೆ, ಸಹೋದರತೆ, ಸಾಮಾಜಿಕ ನ್ಯಾಯದ ಪರವಾಗಿದ್ದ ಹೋರಾಟಗಾರ್ತಿ ಗೌರಿ ಹತ್ಯೆ ತೀವ್ರ ದುಃಖವುಂಟು ಮಾಡಿದೆ. ಇವರಿಗೆ ಸಂಘ ಪರಿವಾರ ಬಿಟ್ಟು ಬೇರೆ ಯಾರೂ ವಿರೋಧಿಗಳು ಇರಲಿಲ್ಲ.ಇವರ ಬರಹ ಮತ್ತು ಹೋರಾಟಗಳು ಸಂಘ ಪರಿವಾರಕ್ಕೆ ನುಂಗಲಾರದ ತುತ್ತಾಗಿತ್ತು. ಹತ್ಯೆಯಿಂದ ಅವರ ಅಭಿಪ್ರಾಯಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ತಕ್ಷಣವೇ ಕೊಲೆಗಡುಕರನ್ನು ಬಂಧಿಸಬೇಕು. ಮುಂದಿನ ಪೀಳಿಗೆ ಜನರಿಗೆ ಶಾಂತಿ, ನ್ಯಾಯ ಮತ್ತು ಸಾಮಾಜಿಕ ನ್ಯಾಯದ ಪರವಾದ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ.
- ಸಿರಿಮನೆ ನಾಗರಾಜ್, ಹೋರಾಟಗಾರ
***
ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಗ್ಗೊಲೆ. ವಿಚಾರವಾದವನ್ನು ಸಹಿಸದ ದುಷ್ಕರ್ಮಿಗಳು ಮಾಡಿರುವ ಹೇಯ ಕೃತ್ಯ. ಗೌರಿ ಅವರು ಕನ್ನಡದ ದಿಟ್ಟ, ಧೀಮಂತ ಮಹಿಳೆ, ಕನ್ನಡದ ವಾರಪತ್ರಿಕೆಗೆ ಸುದೀರ್ಘ ಕಾಲ ಸಂಪಾದಕಿಯಾಗಿದ್ದವರು. ತಾವು ನಂಬಿದ್ದ ವಿಚಾರಗಳ ಬಗ್ಗೆ ಅಪಾರ ಬದ್ಧತೆ ಹೊಂದಿದ್ದ ಅಪರೂಪದ ಹೋರಾಟಗಾರ್ತಿ, ಬರಹಗಾರ್ತಿ. ಬಸವಣ್ಣನ ಪರಂಪರೆಯನ್ನು ನಿಜವಾದ ಅರ್ಥದಲ್ಲಿ ಮುಂದುವರಿಸಿದವರು. ಶರಣರ ನಾಡು, ಕುವೆಂಪು ನಾಡು, ಸೂಫಿಗಳ ನಾಡು, ಅಕ್ಕಮಹಾದೇವಿಯ ನಾಡು ಎಂದೆಲ್ಲ ಕರೆಸಿಕೊಳ್ಳುವ ಕರ್ನಾಟಕದಲ್ಲಿ ಇಂತಹ ಕೃತ್ಯದ ಮೂಲಕ, ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಆಶಯಗಳನ್ನು ಕೊಂದು ಹಾಕಲಾಗಿದೆ. ವಿಚಾರವಾದಿಗಳು, ಪ್ರಗತಿಪರ ಹೋರಾಟಗಾರರ ದನಿ ಕುಗ್ಗಿಸುವ ಬೀಭತ್ಸ ಹತ್ಯೆ ಇದು.
ಕಲಬುರ್ಗಿ ಅವರ ಹತ್ಯೆ ಮಾಡಿದವರು ಇನ್ನೂ ಸಿಕ್ಕಿಲ್ಲ, ಗೌರಿಯವರನ್ನು ಕೊಂದವರೂ ಸಿಗುವುದಿಲ್ಲ. ದೇಶದಲ್ಲಿ ಹಿಟ್ಲರ್ ಆಡಳಿತ ಬಂದಿದೆ. ಫ್ಯಾಸಿಸಂ ಕಾರ್ಮೋಡ ಈ ರೀತಿ ನಮ್ಮನ್ನೆಲ್ಲ ಆವರಿಸಿದೆ. ನಮಗೆಲ್ಲರಿಗೂ ಜೀವಬೆದರಿಕೆ ಇದೆ. ಮೊದಲೇ ಆರೋಗ್ಯ ಸರಿ ಇರದಿದ್ದ ಕೃಶ ಕಾಯದ ಗೌರಿ ಅವರ ಮೇಲೆ, ವಿಚಾರವಾದವನ್ನು ಒಪ್ಪದ ಮೂಲಭೂತವಾದಿಗಳು ಇಂತಹ ಪೈಶಾಚಿಕ ಕೃತ್ಯ ಎಸಗಿರುವುದನ್ನು ನಂಬಲೇ ಸಾಧ್ಯವಾಗುತ್ತಿಲ್ಲ.
ಕೆ.ಎಲ್.ಅಶೋಕ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.