ADVERTISEMENT

ಅಗಲಿದ ಸಾಹಿತ್ಯ ದಿಗ್ಗಜನಿಗೆ ನುಡಿನಮನ

‘ಯು.ಆರ್.ಅನಂತಮೂರ್ತಿ ಸಿದ್ಧಾಂತಗಳ ಬಗ್ಗೆ ಸದಾ ಚರ್ಚೆ ನಡೆಯಬೇಕು’

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2014, 20:14 IST
Last Updated 24 ಆಗಸ್ಟ್ 2014, 20:14 IST
ನಗರದ ರಾಮಕೃಷ್ಣ ಆಶ್ರಮ ವೃತ್ತದ ಬಳಿ ಭಾನುವಾರ ರಾತ್ರಿ ನಿವಾರಣ ಸೇವಾ ಸಂಸ್ಥೆ ಆಯೋಜಿಸಿದ್ದ ಡಾ.ಯು.ಆರ್. ಅನಂತಮೂರ್ತಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಣತೆ ಹಚ್ಚುವ ಮೂಲಕ ಚಾಲನೆ ನೀಡಿದರು. ಮೇಯರ್ ಬಿ.ಎಸ್.ಸತ್ಯನಾರಾಯಣ, ಪಾಲಿಕೆ ಸದಸ್ಯ ಕೆ.ಚಂದ್ರಶೇಖರ್ ಮತ್ತಿತರರು ಇದ್ದಾರೆ.
ನಗರದ ರಾಮಕೃಷ್ಣ ಆಶ್ರಮ ವೃತ್ತದ ಬಳಿ ಭಾನುವಾರ ರಾತ್ರಿ ನಿವಾರಣ ಸೇವಾ ಸಂಸ್ಥೆ ಆಯೋಜಿಸಿದ್ದ ಡಾ.ಯು.ಆರ್. ಅನಂತಮೂರ್ತಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಣತೆ ಹಚ್ಚುವ ಮೂಲಕ ಚಾಲನೆ ನೀಡಿದರು. ಮೇಯರ್ ಬಿ.ಎಸ್.ಸತ್ಯನಾರಾಯಣ, ಪಾಲಿಕೆ ಸದಸ್ಯ ಕೆ.ಚಂದ್ರಶೇಖರ್ ಮತ್ತಿತರರು ಇದ್ದಾರೆ.   

ಬೆಂಗಳೂರು: ‘ನಮ್ಮ ಆಲೋಚನಾ ಕ್ರಮ, ಚಿಂತನೆಗಳು, ಹೋರಾಟದ ರೀತಿಯನ್ನು ತಿದ್ದಿದವರು ಯು.ಆರ್‌. ಅನಂತಮೂರ್ತಿ. ಗಾಂಧೀಜಿ, ಲೋಹಿಯಾ ಅವರನ್ನು ಹೇಗೆ ಗ್ರಹಿಸಬೇಕು ಎಂದು ಹೇಳಿಕೊಟ್ಟವರು. ಅವರ ಲೇಖನಗಳನ್ನು ಓದಿದರೆ ಜಗತ್ತನ್ನೇ ಸುತ್ತಾಡಿ ಬಂದಂತಾಗುತ್ತದೆ’

–ಹೀಗೆಂದು ಗುಣಗಾನ ಮಾಡಿದ್ದು ಚಿಂತಕ ಶೂದ್ರ ಶ್ರೀನಿವಾಸ್‌. ಸ್ವಾತಂತ್ರ್ಯ ಉದ್ಯಾನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಭಾರತಯಾತ್ರಾ ಕೇಂದ್ರ ಭಾನುವಾರ ಸಂಜೆ ಆಯೋಜಿಸಿದ್ದ ‘ಡಾ.ಯು.ಆರ್‌. ಅನಂತಮೂರ್ತಿ ಅವರಿಗೆ ಗೌರವ ಶ್ರದ್ಧಾಂಜಲಿ’ ಸಭೆಯಲ್ಲಿ ಮಾತನಾಡಿದರು.

‘ಯುಆರ್‌ಎ ಅವರ ಸಾಹಿತ್ಯ ಲೋಕವನ್ನು ಇಂಗ್ಲಿಷ್‌ಗೆ ಅನುವಾದ ಮಾಡಿ ಜಗತ್ತಿಗೆ ಪರಿಚಯಿಸಿದ್ದರೆ ಯಾವಾಗಲೋ ನೊಬೆಲ್‌ ಗೌರವ ಒಲಿಯುತಿತ್ತು. ರವೀಂದ್ರನಾಥ್‌ ಟ್ಯಾಗೋರ್‌ ನಂತರ ಅತಿ ದೊಡ್ಡ ಚಿಂತಕ ಎಂದರೆ ಅನಂತಮೂರ್ತಿ. ಬರೆದು ಯೋಚಿಸಿ ತಮ್ಮನ್ನು ಚಳವಳಿಯಲ್ಲಿ ತೊಡಗಿಸಿಕೊಂಡ ಜೀವವದು. ತಮ್ಮ ನೋವನ್ನು ಮರೆಯಲು ಇತ್ತೀಚಿನ ದಿನಗಳಲ್ಲಿ ಅವರು ತುಂಬಾ ಓದುತ್ತಿದ್ದರು. ವಾಗ್ವಾದದಲ್ಲಿ ತೊಡಗುತ್ತಿದ್ದರು’ ಎಂದರು.

ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್‌ ಮಾತನಾಡಿ, ‘ಅನಂತಮೂರ್ತಿ ಅವರದ್ದು ಸಂವೇದನಾಶೀಲ ಮನಸ್ಸು. ‘ಇದು ಮನುಷ್ಯರ ದೇಶ, ಪ್ರಜಾಪ್ರಭುತ್ವ ನಮ್ಮ ಧರ್ಮ’ ಎಂಬುದನ್ನು ನಂಬಿದವರು. ಅವರ ಸಿದ್ಧಾಂತಗಳ ಬಗ್ಗೆ ಸದಾ ಚರ್ಚೆ ನಡೆಯಬೇಕು. ಅವರ ಕೊಡುಗೆಗಳನ್ನು ಜೀವಂತವಾಗಿ ಉಳಿಸಿಕೊಳ್ಳಬೇಕು’ ಎಂದರು.

ಸಾಹಿತಿ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ‘ಬಹುತ್ವವನ್ನು ಗೌರವಿಸುವ ಸಂವೇದನಾಶೀಲ ಲೇಖಕ ಯುಆರ್‌ಎ. ಸಣ್ಣ ಘಟನೆಗಳಿಗೂ ಪ್ರತಿಕ್ರಿಯಿಸಿ ವಾಗ್ವಾದದಲ್ಲಿ ತೊಡಗಿದವರು. ಆದರೆ, ಸಾಹಿತ್ಯ ಲೋಕ ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲಿಲ್ಲ. ಅವರನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ದೈಹಿಕ ಸಮಸ್ಯೆ ಅವರನ್ನು ಕುಗ್ಗಿಸಲಿಲ್ಲ. ಬದಲಾಗಿ ಅವರು ಮಾನಸಿಕವಾಗಿ ಜರ್ಜರಿತರಾದರು’ ಎಂದು ವ್ಯಾಖ್ಯಾನಿಸಿದರು.

ಅನಂತಮೂರ್ತಿ ಹಾದಿಯಲ್ಲಿ ನಡೆಯಿರಿ...
‘ಬ್ರಾಹ್ಮಣರ ಮನೆಯಲ್ಲಿ ಅಚಾನಕ್‌ ಆಗಿ ಹುಟ್ಟಿದ ಅನಂತಮೂರ್ತಿ ಅವರಂಥ 90ರಷ್ಟು ಬ್ರಾಹ್ಮಣರು ಇರುವುದರಿಂದಲೇ ಅಲ್ಪಸಂಖ್ಯಾತರು, ದಲಿತರು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ. ಅವರ ದಾರಿಯಲ್ಲಿ ನಡೆಯಲು ಉಳಿದ ಬ್ರಾಹ್ಮಣರು ಪ್ರಯತ್ನಿಸಬೇಕು’
ಲೇಖಕ ಬೋಳುವಾರು ಮಹಮ್ಮದ್‌ ಕುಂಞಿ

ನಿರ್ದೇಶಕ ಟಿ.ಎನ್‌.ಸೀತಾರಾಂ ಅವರು, ‘ಯುಆರ್‌ಎ ಯಾವುದೇ ವಸ್ತುವನ್ನು ಭಿನ್ನವಾಗಿ ನೋಡುತ್ತಾ, ಹೊಸ ರೀತಿಯಲ್ಲಿ ಯೋಚಿಸುತ್ತಿದ್ದರು. ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಿರಲಿಲ್ಲ. ಆದರೆ, ಅವರನ್ನು ಸಮಾಜ ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಅವರನ್ನು ಸರಿಯಾಗಿ ಓದದೇ ಇದ್ದದ್ದೇ ಈ ಎಡವಟ್ಟಿಗೆ ಕಾರಣ ಇರಬಹುದು’ ಎಂದು ಅಭಿಪ್ರಾಯಪಟ್ಟರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ಮಾತನಾಡಿ, ‘ಸಾಮಾಜಿಕ ವಿಚಾರಗಳಿಗೆ ನೈತಿಕ ಬೆಂಬಲ ನೀಡುತ್ತಿದ್ದರು. ತಳ ಸಮುದಾಯದವರ ದನಿಗೆ ಬಲ ನೀಡಿದರು. ಜಾತ್ಯತೀತ ನಿಲುವುಗಳನ್ನು ಅರಗಿಸಿಕೊಂಡಿದ್ದರು’ ಎಂದು ಗುಣಗಾನ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಬಿ.ಎಲ್‌.ಶಂಕರ್‌, ‘ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕಾರಣರಾದವರು ಅನಂತಮೂರ್ತಿ. ಆದರೆ, ಅವರ ವಿಚಾರಗಳನ್ನು ಗ್ರಹಿಸುವುದರಲ್ಲಿಯೇ ಕೆಲವರು ತಪ್ಪು ಮಾಡಿದ್ದಾರೆ. ಅವರ ವಿಚಾರಧಾರೆಗಳ ಬಗ್ಗೆ ಸದಾ ಚರ್ಚೆ, ವಾಗ್ವಾದ ನಡೆಯಬೇಕು’ ಎಂದರು. ಕೊನೆಯಲ್ಲಿ ಗಾಯಕಿ ಪುಷ್ಪಾ ಅವರು ಎಂ.ಎನ್‌.ವ್ಯಾಸರಾವ್‌ ರಚಿಸಿರುವ ‘ನೀನಿಲ್ಲದೆ ನನಗೇನಾಗಿದೆ ಮನಸ್ಸೆಲ್ಲಾ ನಿನ್ನಲ್ಲೇ ನೆಲೆಯಾಗಿದೆ, ಕನಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೆ’ ಭಾವಗೀತೆ ಪ್ರಸ್ತುತಪಡಿಸಿದಾಗ ಸಭಾಂಗಣದಲ್ಲಿ ಭಾವುಕತೆ ನೆಲೆಸಿತ್ತು.

‘ಅನಂತ’ ನೆನಪಿನಲ್ಲಿ ಬೆಳಗಿದ ದೀಪ
ನಗರದ ರಾಮಕೃಷ್ಣ ಆಶ್ರಮ ವೃತ್ತದ ಬಳಿ ಭಾನುವಾರ ರಾತ್ರಿ ನಿವಾರಣ ಸೇವಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೀಪ ಹಚ್ಚುವ ಮೂಲಕ ಡಾ.ಯು.ಆರ್.ಅನಂತಮೂರ್ತಿ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ‘ದೇಶದಲ್ಲಿ ಅನೇಕ ಸಾಹಿತಿಗಳು ಇದ್ದಾರೆ. ಆದರೆ, ಅವರು ಅನಂತಮೂರ್ತಿ ಅವರಷ್ಟು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ನಾಡು ಕಂಡ ಶ್ರೇಷ್ಠ ಚಿಂತಕರಾಗಿದ್ದ ಮೂರ್ತಿ ಅವರ ಅಗಲಿಕೆ ದುಃಖದ ಸಂಗತಿ’ ಎಂದು ಅಭಿಪ್ರಾಯಪಟ್ಟರು. ಮೇಯರ್ ಬಿ.ಎಸ್. ಸತ್ಯನಾರಾಯಣ ಮಾತನಾಡಿ, ‘ಅನಂತಮೂರ್ತಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಆಘಾತವಾಗಿದೆ. ಇಂತಹ ದಿಗ್ಗಜರು ಸಾಹಿತ್ಯ ಸಮೃದ್ಧಿಗಾಗಿ ಮತ್ತೆ ಹುಟ್ಟಿ ಬರಲಿ’ ಎಂದು ಹೇಳಿದರು. ಪಾಲಿಕೆ ಸದಸ್ಯ ಕೆ.ಚಂದ್ರಶೇಖರ್ ಸೇರಿದಂತೆ ನೂರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಸಂಸ್ಕೃತಿಯ ವಿಕಸನಕ್ಕೆ ಏಟು ಬಿದ್ದಿದೆ’
ಹೆಣ್ಣೂರುಬಾಣಸವಾಡಿ ವರದಿ: ‘ಯು.ಆರ್. ಅನಂತಮೂರ್ತಿ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕಲ್ಲದೆ, ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಭಾರತೀಯ ಸಂಸ್ಕೃತಿಯ ವಿಕಸನಕ್ಕೂ ಏಟು ಬಿದ್ದಿದೆ’ ಎಂದು ವಿಚಾರವಾದಿ ಪ್ರೊ. ಜಿ.ಕೆ.ಗೋವಿಂದರಾವ್ ಹೇಳಿದರು.

ರಾಜ್ಯ ದಲಿತ ಸಂಘರ್ಷ ಸಮಿತಿಯು ಭಾನುವಾರ ಬೆಂಗಳೂರು ಪೂರ್ವ ತಾಲ್ಲೂಕಿನ ಕ್ಯಾಲಸನಹಳ್ಳಿಯಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಮತ್ತು ಸಕ್ರಿಯ ಕಾರ್ಯಕರ್ತರ ಅಧ್ಯಯನ ಶಿಬಿರದಲ್ಲಿ ಅಂಬೇಡ್ಕರ್‌ ಅವರ ವಿಚಾರಧಾರೆಗಳು ಪ್ರಸ್ತುತ ಸನ್ನಿವೇಶಕ್ಕೆ ಅತ್ಯವಶ್ಯಕ ಎಂಬ ವಿಷಯ ಕುರಿತು ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಅನಂತಮೂರ್ತಿ ಅವರ ನಡೆ, ನುಡಿ, ಮಾರ್ಗದರ್ಶನ ನಮಗೆ ಆದರ್ಶಪ್ರಾಯ’ ಎಂದು ಅವರು ಹೇಳಿದರು.
‘2,500 ವರ್ಷಗಳ ನಂತರವೂ ನಾವು ಬುದ್ಧನ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದೇವೆ. ಮಾನವ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಆತನ ವಿಚಾರಗಳು ಸದಾ ಕಾಲ ಉಳಿಯುತ್ತವೆ. ಅನಂತಮೂರ್ತಿ ಅವರ ವಿಚಾರಗಳು ಶಾಶ್ವತವಾಗಿ ಉಳಿಯುತ್ತವೆ’ ಎಂದು ಗೋವಿಂದರಾವ್ ತಿಳಿಸಿದರು.

ಪ್ರಗತಿಪರ ಚಿಂತಕ ರುದ್ರಪ್ಪ ಹನಗವಾಡಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ರಂಗಕರ್ಮಿ ವೇಣು, ಡಾ.ಲೋಹಿಯಾ ಸಮತಾ ಸಂಘಟನೆಯ ಅಧ್ಯಕ್ಷ ಅಲಿಬಾಬಾ, ಸಮಾಜವಾದಿ ಚಿಂತಕ ಜಿ.ವಿ.ಸುಂದರ್, ಮುಖಂಡರಾದ ಕ್ಯಾಲಸನಹಳ್ಳಿ ಶ್ರೀನಿವಾಸ್, ಉಮಾಶಂಕರ್ ಪುನುಗುಮಾರನಹಳ್ಳಿ, ಗೊಲ್ಲಹಳ್ಳಿ ತಿಮ್ಮಯ್ಯ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT