ADVERTISEMENT

ಅತಿದೊಡ್ಡ ಧ್ಯಾನಸ್ಥ ಗಾಂಧಿ ಪ್ರತಿಮೆ

ಮಹಾತ್ಮನ ಮೊಗದಲ್ಲಿ ಶಾಂತಿ ಅರಳಿಸಿದ್ದು ಕಷ್ಟದ ಕೆಲಸ: ಸುತಾರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2014, 20:01 IST
Last Updated 1 ಅಕ್ಟೋಬರ್ 2014, 20:01 IST

ಬೆಂಗಳೂರು: ‘ಮಹಾತ್ಮನ ಮುಖದಿಂದ ಶಾಂತಿಯ ಭಾವ ಹೊರ­ಹೊಮ್ಮು­ವಂತೆ ಮಾಡುವುದು ಪ್ರತಿಮೆ ನಿರ್ಮಾಣದಲ್ಲಿ ಅತ್ಯಂತ ಕ್ಲಿಷ್ಟ ಕೆಲಸವಾಗಿತ್ತು’ ಎನ್ನುತ್ತಾರೆ ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ಸ್ಥಾಪಿಸಲಾಗಿರುವ ಮಹಾತ್ಮ ಗಾಂಧೀಜಿಯ ಕಂಚಿನ ಪ್ರತಿಮೆ ನಿರ್ಮಿಸಿದ ಶಿಲ್ಪಿ ರಾಮ ಸುತಾರ.

ಮಹಾತ್ಮನ ಜನ್ಮದಿನವಾದ ಅಕ್ಟೋಬರ್‌ 2ರಂದು (ಗುರುವಾರ) ಈ ಪ್ರತಿಮೆಯನ್ನು  ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅನಾವರಣ ಮಾಡ­ಲಿದ್ದಾರೆ.

‘ಸರಿಯಾದ ಮುಖಭಾವ ರೂಪಿಸಲು ಸಾಕಷ್ಟು ಕೆಲಸ ಮಾಡಬೇಕಾಯಿತು. ಗಾಂಧೀಜಿ ಅವರ ಹಲವು ಭಾವಚಿತ್ರಗಳನ್ನು ಅಧ್ಯಯನ ಮಾಡಿ, ಮಣ್ಣಿನ ಅಚ್ಚಿನಲ್ಲಿ ಸುಂದರ ಮುಖಭಾವ ಮೂಡಿಸಲಾಯಿತು’ ಎಂದು 87 ವರ್ಷ ವಯಸ್ಸಿನ ಸುತಾರ ಹೇಳು­ತ್ತಾರೆ. ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊ­ಳ್ಳಲು ಸುತಾರ ಅವರು ಬೆಂಗಳೂರಿಗೆ ಬುಧವಾರ ಬಂದರು.

ಮುಖದ ಪ್ರತಿಯೊಂದು ಇಂಚನ್ನೂ ಸರಿಯಾಗಿ ತಿದ್ದಬೇಕಿತ್ತು ಎಂದು ಅವರು ಹೇಳಿದರು. ಪ್ರತಿಮೆಯನ್ನು ಈಗಾಗಲೇ ಸ್ಥಾಪಿಸಲಾಗಿದ್ದು, ಅದಕ್ಕೆ ಪ್ಲಾಸ್ಟಿಕ್‌ ಹೊದಿಕೆ ಹಾಕಲಾಗಿದೆ. ಮಹಾತ್ಮ ಗಾಂಧೀಜಿಯ ಧ್ಯಾನಸ್ಥ ಸ್ಥಿತಿಯಲ್ಲಿರುವ ಪ್ರಪಂಚದ ಅತಿ ದೊಡ್ಡ ಪ್ರತಿಮೆ ಇದಾಗಲಿದೆ.

ಪ್ರತಿಮೆ ನಿರ್ಮಾಣ ಕಾರ್ಯದ ಮೇಲ್ವಿಚಾರ­ಣೆಯನ್ನು ಸುತಾರ ಅವರು ಖುದ್ದಾಗಿ ಮಾಡಿದ್ದಾರೆ. ಅವರ ಜೊತೆ ಪುತ್ರ ಅನಿಲ್‌ ಸುತಾರ ಮತ್ತು 150 ಕುಶಲ ಕರ್ಮಿಗಳು ಇದ್ದರು. ನೋಯಿಡಾದಲ್ಲಿರುವ ‘ರಾಮ ಸುತಾರ ಆರ್ಟ್ಸ್‌ ಕ್ರಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌’ ಸ್ಟುಡಿಯೋದಲ್ಲಿ ಪ್ರತಿಮೆ ನಿರ್ಮಾಣಕ್ಕೆ ನಾಲ್ಕು ತಿಂಗಳ ಕಾಲಾವಕಾಶ ಬೇಕಾಯಿತು. 19 ಟನ್‌ ಕಂಚು, ಏಳು ಟನ್‌ ಉಕ್ಕು ಬಳಸಲಾಗಿದೆ. ಪ್ರತಿಮೆಗೆ ಒಟ್ಟು ರೂ11 ಕೋಟಿ ಖರ್ಚಾಗಿದೆ.

‘ಸಂಸತ್‌ ಭವನದ ಎದುರು ಇರುವ ಗಾಂಧೀಜಿಯವರ 16 ಅಡಿ ಎತ್ತರ ಪ್ರತಿಮೆಯ ಯಥಾರೂಪ ಇದು’ ಎಂದು ಅನಿಲ್‌ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.