ಬೆಂಗಳೂರು: ‘ನನ್ನ ವಿದ್ಯಾರ್ಥಿ ಜೀವನದಲ್ಲಿ ಅನಂತ ಮೂರ್ತಿ ‘ಐಕಾನ್’ ಆಗಿದ್ದರು. ಯಾವ ಮೂರ್ತಿಯನ್ನು ಬೇಕಾದರೂ ಭಂಜಿಸಬಹುದು ಎಂಬ ಆತ್ಮಸ್ಥೈರ್ಯ ತುಂಬಿದ್ದರು’ ಎಂದು ವಿಮರ್ಶಕ ಸಿ.ಎನ್.ರಾಮಚಂದ್ರನ್ ನೆನಪಿಸಿಕೊಂಡರು.
ಸಾಹಿತ್ಯ ಅಕಾಡೆಮಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಯು.ಆರ್.ಅನಂತಮೂರ್ತಿ ಅವರಿಗೆ ನುಡಿಗೌರವ’ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಯಾವ ಪ್ರವೃತ್ತಿಯನ್ನೂ ಅದು ಮಿಡಬಾರದು. ಎಲ್ಲದರಲ್ಲೂ ತೃಪ್ತಿ ಗಳಿಸಬೇಕು ಎಂಬುದು ಅವರ ಮಾತಾ ಗಿತ್ತು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅವರ ಜೊತೆ ಕ್ಯಾಂಟೀನ್ನಲ್ಲಿ ಹರಟುತ್ತಿದ್ದೆವು. ‘ಸ್ವಾಮಿ ವಿವೇಕಾನಂದರು ಹೆಚ್ಚು ಸಿಹಿ ತಿನ್ನುತ್ತಿದ್ದರು. ಏಕೆಂದರೆ, ಎಲ್ಲವನ್ನೂ ಬಿಟ್ಟ ಅವರು ಇನ್ನೊಂದರಲ್ಲಿ ತೃಪ್ತಿ ಪಡೆಯಲು ಬಯಸಿದ್ದರು’ ಎಂದು ಅವರು ವಿಶ್ಲೇಷಿಸುತ್ತಿದ್ದರು. ಅವರ ನಿರ್ಭಿಡೆಯ ಮಾತುಗಳಿಂದ ನಾನು ಹೆಚ್ಚು ಪ್ರಭಾವಿತನಾಗಿದ್ದೆ’ ಎಂದು ತಮ್ಮ ನೆನಪು ಹಂಚಿಕೊಂಡರು.
ಕವಿ ಎಚ್.ಎಸ್.ವೆಂಕಟೇಶಮೂರ್ತಿ, ‘ಅನಂತಮೂರ್ತಿ ಅವರಿಗೆ ರನ್ನ, ಪಂಪರು ಮುಖ್ಯರಾದಂತೆ ಇಂದಿನ ಹೊಸ ಲೇಖಕರೂ ಮುಖ್ಯವಾಗಿದ್ದರು. ಹೊಸ ಲೇಖಕರು ಬರೆದ ಯಾವುದೇ ವಿಷಯದ ಕುರಿತು ಆಸಕ್ತಿ, ಪ್ರೀತಿಯಿತ್ತು’ ಎಂದರು.‘ಅನಂತಮೂರ್ತಿ ಅವರು ಎಂದಿಗೂ ಜನಪ್ರಿಯತೆ ಗಾಗಿ ಮಾತಾಡಲಿಲ್ಲ. ವ್ಯವಸ್ಥೆಯ ಜೊತೆಗಿದ್ದೇ ವಿರೋಧ ಪಕ್ಷದವರಂತೆ ಕಾರ್ಯ ನಿರ್ವಹಿಸಿದರು’ ಎಂದು ಕವಿ ಎಲ್. ಹನುಮಂತಯ್ಯ ಹೇಳಿದರು.
ಸಾಹಿತಿ ಚಂದ್ರಶೇಖರ ಕಂಬಾರ, ‘ಎಲ್ಲರಲ್ಲಿ ಎಲ್ಲಾ ಬಗೆಯ ಸ್ಪಂದನೆ, ಪ್ರತಿಕ್ರಿಯೆಗಳನ್ನು ಹುಟ್ಟಿಸಿದರು. ಹೊಸ ಮನಸ್ಸುಗಳಿಗೆ ಮಾರ್ಗದರ್ಶಕರಾದರು. ಅವರ ನೆನಪು ನಮ್ಮಲ್ಲಿ ಸದಾ ಹಸಿರು’ ಎಂದು ನುಡಿದರು. ವಿಮರ್ಶಕ ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಜಾಗತಿಕ ಸಾಹಿತ್ಯದ ಒಡನಾಟವಿಟ್ಟುಕೊಂಡು ಜಾಗತಿಕ ಸಾಹಿತ್ಯವನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟವರು. ಎಲ್ಲರ ಜತೆಗೆ ಸೃಜನಶೀಲವಾಗಿ ಜಗಳ ಮಾಡುತ್ತಿದ್ದ ಅವರು ಅನೇಕ ಟೀಕೆಗೆ ಗುರಿಯಾಗಬೇಕಾಯಿತು’ ಎಂದು ಹೇಳಿದರು.
ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದ ರಾವ್, ಲೇಖಕ ವಿವೇಕ ಶಾನಭಾಗ, ವಿಮರ್ಶಕಿ ಎಂ.ಎಸ್.ಆಶಾದೇವಿ, ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್ ಅವರು ಅನಂತಮೂರ್ತಿ ಅವರೊಂದಿ ಗಿನ ಒಡನಾಟವನ್ನು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.