ಬೆಂಗಳೂರು: ‘ಅನುವಾದಕ್ಕೆ ನಿರ್ದಿಷ್ಟ ರೀತಿಯ ಮಾನದಂಡ ಬೇಕು. ಇಲ್ಲದಿದ್ದಲ್ಲಿ ಅನುವಾದದ ಗುಣಮಟ್ಟ ಕಾಪಾಡಲಾಗದು’ ಎಂದು ಅಂಕಣಕಾರ ಪೃಥ್ವಿದತ್ತ ಚಂದ್ರಶೋಭಿ ಅಭಿಪ್ರಾಯಪಟ್ಟರು.
ನಗರದ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಬೆಂಗಳೂರು ಸಾಹಿತ್ಯ ಉತ್ಸವದ #ಬೇಕು ವೇದಿಕೆಯಲ್ಲಿ ‘ಅನುವಾದ–ಕರ್ನಾಟಕ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ನಮ್ಮ ಅನುವಾದಕರಿಗೆ ಯಾವ ರೀತಿಯ ಮಾನದಂಡ ಇಟ್ಟುಕೊಂಡು ಅನುವಾದ ಮಾಡಬೇಕೆಂಬ ಅರಿವು ಇಲ್ಲ. ಹಾಗಾಗಿ, ಪ್ರಪಂಚಕ್ಕೆ ಕನ್ನಡದ ಉತ್ತಮ ಕೃತಿಗಳನ್ನು ಕೊಡಲಾಗುತ್ತಿಲ್ಲ’ ಎಂದು ಅವರು ವಿಷಾದಿಸಿದರು.
‘ಪೆಂಗ್ವಿನ್ ಸೇರಿದಂತೆ ಹಲವು ಪ್ರಕಾಶಕರು ಒಂದು ಭಾಷೆಯ ಕೃತಿಯನ್ನು ಅನುವಾದ ಮಾಡುವಾಗ ಅನೇಕ ರೀತಿಯ ಮಾನದಂಡಗಳನ್ನು ಅನುಸರಿಸುತ್ತಾರೆ. ನಾವೂ ಇಂಥ ಮಾನದಂಡಗಳನ್ನು ಕಂಡುಕೊಳ್ಳಬೇಕಿದೆ’ ಎಂದರು.
‘ಕರ್ನಾಟಕದ ಎ.ಕೆ. ರಾಮಾನುಜನ್ ವಿಶ್ವದರ್ಜೆಯ ಅನುವಾದಕರಾಗಿದ್ದರು. ಆದರೆ, ಅವರ ನಂತರ ಮತ್ತೊಬ್ಬರು ಬರಲಿಲ್ಲ. ಏಕೆ ಬರಲಿಲ್ಲ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ ಎಂದ ಅವರು, ನಮ್ಮ ಸ್ವಕಲ್ಪನೆಗಳನ್ನು ಅಂದರೆ ನಮ್ಮ ಇತಿಹಾಸ, ಸಂಸ್ಕೃತಿಯನ್ನು ಹೊರಗಿನವರೊಂದಿಗೆ ಹಂಚಿಕೊಳ್ಳಬೇಕಿದೆ. ಆದರೆ, ನಮ್ಮಲ್ಲಿ ಸಂವಹನದ ಕೊರತೆ ಇದೆ. ಇದೊಂದು ರೀತಿಯ ಅಂತರಕ್ಕೆ ಕಾರಣವಾಗಿದೆ. ಈ ಅಂತರ ನಿವಾರಣೆಯಾಗದ ಹೊರತು ಸಮಸ್ಯೆ ಪರಿಹಾರವಾಗದು’ ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಸಬಿತಾ ಕೊರಗ ಮಾತನಾಡಿ, ಕೊರಗ ಭಾಷೆ ದಕ್ಷಿಣ ಕನ್ನಡ, ಉಡುಪಿಯಲ್ಲಿ ಬಳಕೆಯಲ್ಲಿರುವ ಭಾಷೆ. ಈ ಸಮುದಾಯದಲ್ಲಿ ನಾಲ್ಕು ರೀತಿಯ ಭಾಷೆಗಳಿದ್ದವು. ಅವುಗಳಲ್ಲಿ ಒಂದು ಭಾಷೆ ಈಗ ವಿನಾಶದ ಅಂಚಿನಲ್ಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.