ADVERTISEMENT

‘ಅನುವಾದಕ್ಕೆ ಭಾಷೆಗಿಂತ ಸಂವೇದನೆ ಮುಖ್ಯ’

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2017, 20:04 IST
Last Updated 24 ಫೆಬ್ರುವರಿ 2017, 20:04 IST
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಳೆದ ಮೂರು ವರ್ಷಗಳಲ್ಲಿ ಪ್ರಕಟಿಸಿದ ಪುಸ್ತಕಗಳ ಮಾಹಿತಿ ಒಳಗೊಂಡ ಕಿರುಹೊತ್ತಗೆಯನ್ನು ರಾಜೇಂದ್ರ ಚೆನ್ನಿ (ಎಡದಿಂದ ಮೂರನೆಯವರು) ಬಿಡುಗಡೆ ಮಾಡಿದರು. ಪ್ರಾಧಿಕಾರದ ರಿಜಿಸ್ಟ್ರಾರ್‌ ಈಶ್ವರ್‌ ಕು. ಮಿರ್ಜಿ, ನಟರಾಜ್‌ ಹುಳಿಯಾರ್‌, ಡಾ.ಕೆ.ವಿ. ನಾರಾಯಣ, ಲೇಖಕಿ ಡಾ.ಎಚ್‌.ಎಸ್‌. ಅನುಪಮಾ ಇದ್ದಾರೆ                              –ಪ್ರಜಾವಾಣಿ ಚಿತ್ರ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಳೆದ ಮೂರು ವರ್ಷಗಳಲ್ಲಿ ಪ್ರಕಟಿಸಿದ ಪುಸ್ತಕಗಳ ಮಾಹಿತಿ ಒಳಗೊಂಡ ಕಿರುಹೊತ್ತಗೆಯನ್ನು ರಾಜೇಂದ್ರ ಚೆನ್ನಿ (ಎಡದಿಂದ ಮೂರನೆಯವರು) ಬಿಡುಗಡೆ ಮಾಡಿದರು. ಪ್ರಾಧಿಕಾರದ ರಿಜಿಸ್ಟ್ರಾರ್‌ ಈಶ್ವರ್‌ ಕು. ಮಿರ್ಜಿ, ನಟರಾಜ್‌ ಹುಳಿಯಾರ್‌, ಡಾ.ಕೆ.ವಿ. ನಾರಾಯಣ, ಲೇಖಕಿ ಡಾ.ಎಚ್‌.ಎಸ್‌. ಅನುಪಮಾ ಇದ್ದಾರೆ –ಪ್ರಜಾವಾಣಿ ಚಿತ್ರ   
ಬೆಂಗಳೂರು: ‘ಅನುವಾದಕ್ಕೆ ಭಾಷೆಗಿಂತ ಸಂವೇದನೆ ಮುಖ್ಯ’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ನಟರಾಜ್‌ ಹುಳಿಯಾರ್‌ ಹೇಳಿದರು.
 
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಪ್ರಾಧಿಕಾರದಿಂದ ಪ್ರಕಟಗೊಂಡಿದ್ದ ಕೃತಿಗಳ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು.
 
‘ಅನುವಾದ ಕಾರ್ಯವು ಯಾಂತ್ರಿಕವಾಗಿ ಇರಬಾರದು. ಆದರೆ, ಈ ಹಿಂದೆ ಪ್ರಾಧಿಕಾರದಿಂದ ಪ್ರಕಟಗೊಂಡಿದ್ದ ಕೃತಿಗಳು ಅಸಂಬದ್ಧ ಭಾಷಾಂತರದಿಂದ ಕೂಡಿದ್ದವು. ಈ ಬಾರಿ ಆಯಾ ಕ್ಷೇತ್ರದಲ್ಲಿ ಪರಿಣತಿ ಹೊಂದಿದವರಿಂದ ಕೃತಿಗಳ ಅನುವಾದ ಮಾಡಿಸಲಾಗಿದೆ’ ಎಂದು ಹೇಳಿದರು.
 
‘ಈ ಕೃತಿಗಳು ಅಧ್ಯಯನಕ್ಕೆ ಯೋಗ್ಯವಾಗಿವೆ. ತೌಲನಿಕ ಸಾಹಿತ್ಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಆಕರ ಗ್ರಂಥಗಳಾಗುತ್ತವೆ’ ಎಂದರು.
 
ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜೇಂದ್ರ ಚೆನ್ನಿ ಮಾತನಾಡಿ, ‘ದಕ್ಷಿಣ ಭಾರತದ ಸೋದರ ಭಾಷೆಗಳ ಸಾಹಿತ್ಯದ ನಡುವೆ ಕೊಡುಕೊಳ್ಳುವಿಕೆ ಇರಬೇಕು. ಕನ್ನಡದ ವೈಚಾರಿಕ ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ಅನುವಾದ ಮಾಡುವಲ್ಲಿ ಪ್ರಾಧಿಕಾರ ಪ್ರಮುಖ ಪಾತ್ರ ವಹಿಸಿದೆ’ ಎಂದರು.
 
ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ವಿ.ನಾರಾಯಣ ಮಾತನಾಡಿ, ‘ಮೂರು ವರ್ಷಗಳ ನನ್ನ ಅಧಿಕಾರಾವಧಿ ಮುಗಿಯಿತು. ಈ ಅವಧಿಯಲ್ಲಿ ಒಟ್ಟು 111 ಪುಸ್ತಕಗಳು ಪ್ರಕಟಗೊಂಡಿವೆ. ಜನಸಾಮಾನ್ಯರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಕೃತಿಗಳನ್ನು ಹೊರತರಲಾಗಿದೆ’ ಎಂದರು.
 
ಇದೇ ವೇಳೆ ಪ್ರಾಧಿಕಾರದ ಪರಿಷ್ಕೃತ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಾಯಿತು. ಅಲ್ಲದೆ, ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಯಿತು. ಈ ಆ್ಯಪ್‌ ಮೂಲಕ ಪ್ರಾಧಿಕಾರದಿಂದ ಪ್ರಕಟಗೊಂಡಿರುವ ಪುಸ್ತಕಗಳನ್ನು ಖರೀದಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.