ಅನುವಾದ ಒಂದು ರೀತಿಯ ಆಟ
ಪ್ರಜಾವಾಣಿ ವಾರ್ತೆ Published 13 ಫೆಬ್ರುವರಿ 2017, 4:12 IST Last Updated 13 ಫೆಬ್ರುವರಿ 2017, 4:12 IST ಛಂದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕರಾದ ಅರುಣ್, ಪ್ರಜ್ಞಾ ಶಾಸ್ತ್ರಿ, ದಯಾನಂದ, ಅರವಿಂದ ಚೊಕ್ಕಾಡಿ, ಕರ್ಕಿ ಕೃಷ್ಣಮೂರ್ತಿ, ಬರಗೂರು ರಾಮಚಂದ್ರಪ್ಪ, ರಘುನಾಥ ಚ.ಹ., ಛಂದ ಪ್ರಕಾಶನದ ವಸುಧೇಂದ್ರ, ಲೇಖಕಿ ಸಂಯುಕ್ತಾ ಪುಲಿಗಲ್ (ಎಡದಿಂದ) ಇದ್ದರು –ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಎರಡೂ ಭಾಷೆಗಳಲ್ಲಿರುವ ಭಿನ್ನತೆಗಳು ಅನುವಾದಕ್ಕೆ ಪ್ರೇರಣೆ ನೀಡಿವೆ. ಪದಗಳ ಅರ್ಥ ಹುಡುಕುವಿಕೆ, ವಾಕ್ಯ ರಚನೆ ಹೀಗೆ ಒಂದೊಂದೂ ನನಗೆ ಆಟವಾಗಿ ತೋರುತ್ತದೆ’ ಎಂದು ಲೇಖಕಿ ಸಂಯುಕ್ತಾ ಪುಲಿಗಲ್ ಅನಿಸಿಕೆ ಹಂಚಿಕೊಂಡರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಛಂದ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಬರಹಗಾರ ಅರವಿಂದ ಚೊಕ್ಕಾಡಿ ನಡೆಸಿಕೊಟ್ಟ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ನ್ಯಾಂಡೊ ಪರಾಡೊ ಅನುಭವ ಕಥನವನ್ನೇ ಅನುವಾದಕ್ಕೆ ಆಯ್ಕೆ ಮಾಡಿಕೊಂಡಿದ್ದೇಕೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘30 ವರ್ಷಗಳ ಹಿಂದೆ ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ಬರೆಯುವಾಗ ಆತನ ಮನಸ್ಸಿನಲ್ಲಿ ಹುಟ್ಟುವ ಪ್ರಶ್ನೆಗಳು, ಮುಗಿದುಹೋದ ಘಟನೆ ಬಗ್ಗೆ ಬರೆಯುವಾಗ ಅವನು ಅನುಭವಿಸುವ ಯಾತನೆ ನನ್ನನ್ನು ಬಹುವಾಗಿ ಕಾಡಿದವು. ಅದೇ ಮನಸ್ಥಿತಿ ನನ್ನನ್ನು ಅನುವಾದಿಸಲು ಪ್ರೇರೇಪಿಸಿತು’ ಎಂದರು.
ಈ ಬಾರಿಯ ಛಂದ ಪುಸ್ತಕ ಬಹುಮಾನ ಪಡೆದ ಪ್ರಜಾವಾಣಿ ಉಪ ಸಂಪಾದಕ ದಯಾನಂದ ಅವರ ‘ದೇವರು ಕಚ್ಚಿದ ಸೇಬು’ ಕಥಾಸಂಕಲನ ಹಾಗೂ ಲೇಖಕ ಕರ್ಕಿ ಕೃಷ್ಣಮೂರ್ತಿ ಅವರ ‘ಗಾಳಿಗೆ ಮೆತ್ತಿದ ಬಣ್ಣ’ ಪುಸ್ತಕದ ಕುರಿತು ಪ್ರಜಾವಾಣಿ ಮುಖ್ಯ ಉಪಸಂಪಾದಕ ರಘುನಾಥ ಚ.ಹ. ಸಂವಾದ ನಡೆಸಿಕೊಟ್ಟರು.
ನಗರ ಬದುಕಿನ ಧಾವಂತಗಳ ಬಗ್ಗೆ ಚಿತ್ರಿತವಾಗಿರುವ ಈ ಎರಡು ಕೃತಿಗಳಲ್ಲಿನ ವೈಶಿಷ್ಟ್ಯ, ಕಥೆಗಾರರಾದ ಬಗೆ ಹಾಗೂ ಕೃತಿಯ ಶಿಲ್ಪ, ಭಾಷೆಯ ಕುರಿತು ಸಂವಾದದಲ್ಲಿ ಚರ್ಚಿಸಲಾಯಿತು.
ಐದು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಲೇಖಕರಲ್ಲಿ ಸದಾ ಚಳವಳಿ ಮನಸ್ಥಿತಿ ಜಾಗೃತವಾಗಿರಬೇಕು. ಇಲ್ಲದಿದ್ದರೆ ಹೇಳಿದ್ದನ್ನೇ ಹೇಳುತ್ತಾ ಅವರು ಜಡವಾಗುತ್ತಾರೆ. ಚಳವಳಿ ಮನಸ್ಥಿತಿ ಎನ್ನುವುದು ಒಂದು ರೀತಿಯ ಚಲನಶೀಲತೆ. ಆ ಚಲನಶೀಲತೆ ಇದ್ದರೆ ಮಾತ್ರ ಸೃಜನಶೀಲತೆ ಜೀವಂತವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪಂಪನಿಂದಲೇ ಚಳವಳಿ ಮನಸ್ಥಿತಿ ಕಾಣುತ್ತದೆ. ಮಹಾಭಾರತ ಕಾವ್ಯದಲ್ಲಿ ರಾಜ ಅರಿಕೇಸರಿಯನ್ನು ನಾಯಕನನ್ನಾಗಿಸಿರುವ ಪಂಪ ಕೊನೆಯಲ್ಲಿ ‘ನೆನೆವಡೆ ಕರ್ಣನಂ ನೆನೆ’ ಎಂದು ಪ್ರತಿನಾಯಕನನ್ನು ಸೃಷ್ಟಿಸಿದ್ದಾನೆ. ಇದು ಪಂಪನಲ್ಲಿರುವ ಚಳವಳಿ ಮನಸ್ಥಿತಿ’ ಎಂದು ಹೇಳಿದರು.
ಮಿಮಿ ಬ್ರೇಡ್ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಲೇಖಕಿ ಪ್ರಜ್ಞಾ ಶಾಸ್ತ್ರಿ ಅವರ ‘ಚಂದಿರ ಬೇಕೆಂದವನು’ ಮತ್ತು ಯಾನ್ ರಫ್ ಅವರ ಓ ಹರ್ನ್ ಆತ್ಮಕಥೆಯನ್ನು ಕನ್ನಡಕ್ಕೆ ತಂದ ಲೇಖಕ ಅರುಣ್ ಅವರ ‘ಅರೆ ಶತಮಾನದ ಮೌನ’ ಕೃತಿಗಳು ಲೋಕಾರ್ಪಣೆಗೊಂಡವು.
**
ಚಳವಳಿ ಮನಸ್ಥಿತಿಯೇ ಸೃಜನಶೀಲತೆ ಜೀವಾಳ. ಸಾಹಿತಿಗಳು ಚಳವಳಿಗಳಲ್ಲಿ ಭಾಗವಹಿಸಬಾರದು ಎಂದು ಹೇಳುವ ಕೆಲ ಹುಸಿ ಸಂಸ್ಕೃತಿಕರಿಗೆ ಇದೇ ನನ್ನ ಪ್ರತಿಕ್ರಿಯೆ
-ಬರಗೂರು ರಾಮಚಂದ್ರಪ್ಪ, ಸಾಹಿತಿ