ಬೆಂಗಳೂರು: ನಗರದ ಮೂರು ಕಡೆ ಬುಧವಾರ ರಾತ್ರಿ ಸಂಭವಿಸಿದ ಅಪಘಾತಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಬ್ಬರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಮಡಿವಾಳ ಸಮೀಪದ ರೂಪೇನ್ ಅಗ್ರಹಾರದ ಬಳಿ ಬೈಕ್‌ಗೆ ಟಿಪ್ಪರ್ ಲಾರಿ ಗುದ್ದಿದ್ದರಿಂದ, ಸವಾರ ಕಾರ್ತಿಕ್ (28) ಸ್ಥಳದಲ್ಲೇ ಅಸುನೀಗಿದ್ದಾರೆ.
ಅವಿನ್ಯೂ ರಸ್ತೆಯ ನಿವಾಸಿ ಕಾರ್ತಿಕ್, ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಬುಧವಾರ ರಾತ್ರಿ 11 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ
ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಮಡಿವಾಳ ಸಂಚಾರ ಪೊಲೀಸರು ತಿಳಿಸಿದರು.
ಇನ್ನೊಂದು ಪ್ರಕರಣದಲ್ಲಿ, ಎಚ್‌ಎಎಲ್ ಬಳಿಯ ಕಾರ್ತಿಕ್ ನಗರದಲ್ಲಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದ್ದರಿಂದ, ಪೂನಂಥಾವೂ (32) ಎಂಬುವರು ಮೃತಪಟ್ಟಿದ್ದಾರೆ.
ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಅವರು, ಕೆ.ಆರ್. ಪುರದಲ್ಲಿ ವಾಸವಿದ್ದರು. ರಾತ್ರಿ 12 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ಯುಟರ್ನ್ ತೆಗೆದುಕೊಳ್ಳುವಾಗ ಲಾರಿ ಡಿಕ್ಕಿ ಹೊಡೆದಿತ್ತು ಎಂದು ಎಚ್‌ಎಎಲ್ ಸಂಚಾರ ಪೊಲೀಸರು ತಿಳಿಸಿದರು.
ಮತ್ತೊಂದು ಪ್ರಕರಣದಲ್ಲಿ, ಬಳ್ಳಾರಿ ರಸ್ತೆಯ ಭುವನಹಳ್ಳಿ ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಮಣಿ (38) ಎಂಬುವರು ಮೃತಪಟ್ಟಿದ್ದಾರೆ.
ಬಾಗೇಪಲ್ಲಿಯ ಅವರು, ಟೊಮ್ಯಾಟೊ ವ್ಯಾಪಾರ ಮಾಡುತ್ತಿದ್ದರು. ಅವರು ಕಾರಿನಲ್ಲಿ ಊರಿಗೆ ಹೊರಟಿದ್ದರು. ಅದೇ ವೇಳೆ ಕಾರು ಹಾಗೂ ಕಂಟೇನರ್ ನಡುವೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ ಎಂದು ದೇವನಹಳ್ಳಿ ಸಂಚಾರ ಪೊಲೀಸರು ತಿಳಿಸಿದರು.
ಗಂಭೀರವಾಗಿ ಗಾಯಗೊಂಡಿದ್ದ ಮಣಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದ್ದಾರೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.