ADVERTISEMENT

‘ಅರ್ಥವಾಗದ ಕಾವ್ಯ ಬರೆದವರಲ್ಲ ನಿಸಾರ್‌’

‘ಸಾರಸ್ವತ ಸಿರಿ– 81ರ ಹಾದಿಯಲ್ಲಿ ನಿಸಾರ್‌’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 20:08 IST
Last Updated 14 ಜನವರಿ 2017, 20:08 IST
ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಅವರನ್ನು ಅಭಿನಂದಿಸಿದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಹಸ್ತಲಾಘವ ನೀಡಿದರು. ಪ್ರೊ.ಜಿ.ಎಸ್‌.ಸಿದ್ದಲಿಂಗಯ್ಯ, ಡಾ.ಸಿ.ಎನ್‌. ರಾಮಚಂದ್ರನ್‌ ಹಾಗೂ ಸ್ವಪ್ನ ಬುಕ್‌ ಹೌಸ್‌ ವ್ಯವಸ್ಥಾಪಕ ನಿರ್ದೇಶಕ ನಿತಿಷ್‌ ಷಾ ಇದ್ದಾರೆ	– ಪ್ರಜಾವಾಣಿ ಚಿತ್ರ
ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಅವರನ್ನು ಅಭಿನಂದಿಸಿದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಹಸ್ತಲಾಘವ ನೀಡಿದರು. ಪ್ರೊ.ಜಿ.ಎಸ್‌.ಸಿದ್ದಲಿಂಗಯ್ಯ, ಡಾ.ಸಿ.ಎನ್‌. ರಾಮಚಂದ್ರನ್‌ ಹಾಗೂ ಸ್ವಪ್ನ ಬುಕ್‌ ಹೌಸ್‌ ವ್ಯವಸ್ಥಾಪಕ ನಿರ್ದೇಶಕ ನಿತಿಷ್‌ ಷಾ ಇದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕವಿ ನಿಸಾರ್‌ ಅಹಮದ್‌ ಅವರು ಎಂದೂ ಅರ್ಥವಾಗದ ಕಾವ್ಯ ಬರೆದವರಲ್ಲ. ನೇರ ಹಾಗೂ ಅರ್ಥಪೂರ್ಣ ಕಾವ್ಯಗಳ ಮೂಲಕ ಜನರಿಗೆ ಹತ್ತಿರವಾದ ಕವಿ ಅವರು’ ಎಂದು ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅಭಿಪ್ರಾಯಪಟ್ಟರು.

ಸ್ವಪ್ನ ಬುಕ್‌ಹೌಸ್‌ ಶನಿವಾರ ಏರ್ಪಡಿಸಿದ್ದ  ಸಮಾರಂಭದಲ್ಲಿ, ಆರ್‌. ದೊಡ್ಡೇಗೌಡ ಅವರು ಸಂಪಾದಿಸಿರುವ ‘ಸಾರಸ್ವತ ಸಿರಿ– 81ರ ಹಾದಿಯಲ್ಲಿ ನಿಸಾರ್‌’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಎರಡು ಮತಗಳ ನಡುವಿನ ಕೊಂಡಿಯಾಗಿ ಬದುಕಿರುವ ನಿಸಾರ್‌ ಆಧುನಿಕ ಕನ್ನಡದ 10 ಮಂದಿ ಮೇರು ಕವಿಗಳ ಪೈಕಿ ಒಬ್ಬರು’ ಎಂದು ಕೊಂಡಾಡಿದರು.

ADVERTISEMENT

ವಿಮರ್ಶಕ ಡಾ.ಸಿ.ಎನ್‌. ರಾಮಚಂದ್ರನ್‌ ಮಾತನಾಡಿ, ‘ಐದು ಪೀಳಿಗೆಗಳ ಲೇಖಕರು ನಿಸಾರ್‌ ಅವರ  ಕುರಿತು ಬರೆದ ಲೇಖನಗಳು ಕೃತಿಯಲ್ಲಿವೆ. ಒಬ್ಬ ಸಾಹಿತಿಯ ಗದ್ಯ, ಪದ್ಯ, ಕಾವ್ಯ, ತಾತ್ವಿಕ ಚಿಂತನೆಗಳಿಗೆ ಬೇರೆ ಬೇರೆ ಪೀಳಿಗೆಯವರು ಹೇಗೆ ಪ್ರತಿಸ್ಪಂದಿಸುತ್ತಾರೆ ಎಂಬುದಕ್ಕೆ ಈ ಕೃತಿ ನಿದರ್ಶನ’ ಎಂದರು.

‘ಎರಡು ಭಿನ್ನ ಸಂಸ್ಕೃತಿಗಳ ನಡುವಿನ  ಬದುಕು ಎಷ್ಟು ಸಂಕೀರ್ಣವಾಗಿರುತ್ತದೆ ಎಂಬ ಅನುಭವವನ್ನು  ನಿಸಾರ್‌  ಸೊಗಸಾಗಿ ಕಟ್ಟಿಕೊಡುತ್ತಾರೆ.    ಧ್ವನಿಪೂರ್ಣ ವಿಡಂಬನೆಗಳ ಮೂಲಕ ಅವರು ಹೆಚ್ಚು ಆಪ್ತವಾಗುತ್ತಾರೆ’ ಎಂದರು.

‘ನಿಸಾರ್‌ ಅವರು ಚುಟುಕವನ್ನು ಮಿಂಚಿಕೆ ಎಂದು ಕರೆದರು. ಅವರ ಚುಟುಕಗಳೂ ತಾತ್ವಿಕ ಚಿಂತನೆಗೆ ಹಚ್ಚುತ್ತವೆ.

ಚುಟುಕ ಚಿಲ್ಲರೆ
ಕವನ ನೋಟು
ಕವನ ನೌಕೆ
ಚುಟುಕ ಬೋಟು

ಎಂಬ ನಾಲ್ಕೇ ಸಾಲುಗಳಲ್ಲಿ  ಕವನ ಹಾಗೂ ಚುಟುಕಗಳ ನಡುವಿನ ವ್ಯತ್ಯಾಸವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಈ ಪ್ರಕಾರದಲ್ಲೂ ಅವರು ಎಷ್ಟು ಗಟ್ಟಿಗರು ಎಂಬುದಕ್ಕೆ ಇದು ಉದಾಹರಣೆ’ ಎಂದು ಹೇಳಿದರು.

ಕವಿ ಪ್ರೊ.ಜಿ.ಎಸ್‌.ಸಿದ್ದಲಿಂಗಯ್ಯ ಮಾತನಾಡಿ, ‘ಎಲ್ಲ ಧರ್ಮಗ್ರಂಥಗಳಿಗೂ ಒಂದು ಮಿತಿ ಇದೆ. ಬದುಕು ಅನನ್ಯ, ಅದಮ್ಯ ಹಾಗೂ ಅದ್ಭುತ. ನಿಸಾರ್‌ ಅವರ ಕವನಗಳು ಬದುಕಿನ ಆಳ ಹಾಗೂ ಧರ್ಮದ ಮಿತಿಗಳ ಬಗ್ಗೆ ಚಿಂತನೆಗೆ ಒರೆ ಹಚ್ಚುತ್ತವೆ’ ಎಂದರು.

ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌  ಮಾತನಾಡಿ, ‘ನಾನು ಕನ್ನಡದ ಕಿಂಚಿತ್‌ ಸೇವೆ ಮಾಡಿದ್ದೇನೆ. ಅದು ಬಹಳ ದೊಡ್ಡದೇನಲ್ಲ. ಆದರೆ, ಕನ್ನಡಿಗರು ನನ್ನ ಮೇಲೆ ಇಟ್ಟಿರುವ ಪ್ರೀತಿ ದೊಡ್ಡದು’ ಎಂದರು.

*

ನಿಸಾರ್‌ ಅಹಮದ್‌ ಅವರು 100 ವರ್ಷ ಸುಖವಾಗಿ ಬಾಳಲಿ. ಅವರ ನೂರನೇ ವರ್ಷಾಚರಣೆ  ಸಮಾರಂಭದಲ್ಲೂ ಅವರನ್ನು ಹರಸಲು ನಾನು ಬರುತ್ತೇನೆ
- ಪ್ರೊ.ಜಿ.ವೆಂಕಟಸುಬ್ಬಯ್ಯ, ನಿಘಂಟು ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.