ಬೆಂಗಳೂರು: ಅವರು ಅಮ್ಮನ ಪ್ರೀತಿ, ಅಪ್ಪನ ಕಾಠಿಣ್ಯತೆ, ಸ್ನೇಹಿತರ ಸಹಾಯ, ವಿದ್ವಾಂಸರ ಸಾಂಗತ್ಯ ಹಾಗೂ ಹಿರಿಯರ ಮಾರ್ಗದರ್ಶನದ ಒಂದೊಂದೆ ನೆನೆಪುಗಳನ್ನು ಬಿಚ್ಚಿಡುತ್ತ ಹೋದಂತೆ ಸಭಿಕರು ತದೇಕಚಿತ್ತದಿಂದ ಕೇಳುತ್ತಿದ್ದರು.
ಈ ಸನ್ನಿವೇಶ ನಿರ್ಮಾಣ ಆಗಿದ್ದು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘವು ಶನಿವಾರ ಆಯೋಜಿಸಿದ್ದ ‘ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ. ಚಿಂತಕ ಮಲ್ಲೇಪುರಂ ಜಿ.ವೆಂಕಟೇಶ ಅವರು ತಮ್ಮ ಜೀವನ ಹಾದಿಯ ಪಯಣವನ್ನು ತೆರೆದಿಟ್ಟರು.
‘ನನ್ನ ತಾಯಿ ಕರುಣಾಮಯಿ. ಅವರಿಂದ ಮಾನವೀಯ, ಅಂತಕರಣ ಗುಣಗಳು ಬಂದವು. ಅಪ್ಪನ ಕಾಠಿಣ್ಯದಿಂದ ಜೀವನದಲ್ಲಿ ಶಿಸ್ತು
ಮತ್ತು ಸಂಗೀತದಲ್ಲಿ ಆಸಕ್ತಿ ಬೆಳೆಯಿತು. ಪೋಷಕರಿಂದ ಸದ್ಗುಣಗಳನ್ನು ಮೈಗೂಡಿಸಿಕೊಂಡೆನು’ ಎಂದರು.
‘ಪ್ರಾಥಮಿಕ ಶಾಲೆಯಲ್ಲಿದ್ದಾಗ ಚಂದಮಾಮ ಕಥಾ ನಿಯತಕಾಲಿಕೆ ಓದಲು ಆರಂಭಿಸಿದೆ. ಅದರಿಂದ ನನ್ನಲೊಂದು ಕಲ್ಪನಾಲೋಕ ಸೃಷ್ಟಿಯಾಯಿತು. ಪುಸ್ತಕ ಪ್ರೀತಿಯೂ ಬೆಳೆಯಿತು. ಹಾಗಾಗಿ ಎಲ್ಲ ವಿದ್ಯಾರ್ಥಿ ವೇತನಗಳಿಂದ ಪುಸ್ತಕಗಳನ್ನು ಖರೀದಿಸುತ್ತಿದ್ದೆ’ ಎಂದು ನೆನಪು ಹಂಚಿಕೊಂಡರು.
‘ಸಿದ್ದಗಂಗಾ ಮಠಕ್ಕೆ ಕನ್ನಡ ಪಂಡಿತ ಪದವಿ ಅಧ್ಯಯನಕ್ಕೆ ಹೋದಾಗ, ಅಲ್ಲಿ ಓದುತ್ತಿದ್ದ ಕುಂ.ವೀರಭದ್ರಪ್ಪ ಅವರ ಸ್ನೇಹ ದೊರೆಯಿತು. ಕಷ್ಟದ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆಗ ವೀರಭದ್ರಪ್ಪ ಅವರು ಧೈರ್ಯ ತುಂಬಿ ನನ್ನಲ್ಲಿ ಜೀವನ
ಪ್ರೀತಿ ಮರುಕಳಿಸಿದರು’ ಎಂದು ಸ್ಮರಿಸಿದರು.
‘ಜೀವನೋಪಾಯಕ್ಕಾಗಿ ಹೆಬ್ಬಗೋಡಿಯಿಂದ ಬೆಂಗಳೂರಿಗೆ ಬಂದೆ. ಇಲ್ಲಿ ಉಳಿದುಕೊಳ್ಳಲು ಒಂದು ನೆಲೆಯೂ ಇರಲಿಲ್ಲ. ಅಂದಿನ ದಿನಗಳಲ್ಲಿ ಸ್ನೇಹಿತರು ಊಟ–ತಿಂಡಿ ಕೊಡಿಸುತ್ತಿದ್ದರು. ಯಾರದೋ ಜಗಲಿಯಲ್ಲಿ ಮಲಗುತ್ತಿದ್ದೆ. ಹೀಗೆ ಎರಡು–ಮೂರು ವರ್ಷಗಳನ್ನು ಕಳೆದೆ’ ಎಂದು ಹಿಂದಿನ ನೆನಪನ್ನು ಕೆದಕಿದರು.
‘ರಾಮಕೃಷ್ಣ ಆಶ್ರಮದ ವಾಸ್ತವ್ಯ, ಶಂ.ಬಾ.ಜೋಶಿ, ಚಂದ್ರಶೇಖರ ಕಂಬಾರ, ಎಂ.ಪಿ.ಪ್ರಕಾಶ್ ಅವರ ಸಹಾಯ. ರಾಜ್ಯಪಾಲರಾಗಿದ್ದ ಎಚ್.
ಆರ್.ಭಾರದ್ವಾಜ್, ರಾಮ ಜೋಯಿಸ್ ಅವರ ಮಾರ್ಗದರ್ಶನದಿಂದ ಶೈಕ್ಷಣಿಕ ರಂಗದ ಹುದ್ದೆಗಳನ್ನು ಅಲಂಕರಿಸಿದೆ. ಸಾಮಾಜಿಕ ರಂಗದಲ್ಲಿ ಬೆಳೆದೆನು’ ಎಂದು ಸ್ಮರಿಸಿದರು.
‘ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಾನು ಮಾಡಿದ ಭಾಷಣದಿಂದ ಎಚ್.ಆರ್.ಭಾರದ್ವಾಜ್ ಅವರು ಪ್ರಭಾವಿತರಾಗಿದ್ದರು. ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯ ಆಯ್ಕೆ ಅವರ ಮುಂದೆ ಬಂದಾಗ, ನನ್ನನ್ನೇ ಸೂಕ್ತ ವ್ಯಕ್ತಿಯೆಂದು ನೇಮಿಸಿದರು. ರಾಜಭವನಕ್ಕೆ ಕರೆಸಿಕೊಂಡು ಆತಿಥ್ಯ ನೀಡಿದರು’ ಎಂದು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.