ADVERTISEMENT

ಅಲ್ಪಸಂಖ್ಯಾತರ ಆಯೋಗಕ್ಕೆ ಹೆಚ್ಚಿನ ಅಧಿಕಾರ:ಬಲ್ಕಿಶ್‌ ಬಾನು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2015, 19:29 IST
Last Updated 14 ಡಿಸೆಂಬರ್ 2015, 19:29 IST

ಬೆಂಗಳೂರು: ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ದೊರೆಯುವ ಸಾಧ್ಯತೆ ಇದೆ ಎಂದು ಆಯೋಗದ ಅಧ್ಯಕ್ಷೆ ಬಲ್ಕಿಶ್‌ ಬಾನು ಹೇಳಿದರು. ಸೋಮವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸುವವರ ವಿರುದ್ಧ ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕಾರ ಮಾತ್ರ ಆಯೋಗಕ್ಕೆ ಇದೆ.

ಅಂಥವರಿಗೆ ನೋಟಿಸ್‌, ಸಮನ್ಸ್‌ ನೀಡುವ ಅಧಿಕಾರವನ್ನು ಆಯೋಗಕ್ಕೆ ಕೊಡಲು ಕಾನೂನು ಇಲಾಖೆ ಒಪ್ಪಿದೆ. ಮುಂದಿನ ತೀರ್ಮಾನ ಸಚಿವ ಸಂಪುಟದಲ್ಲಿ ಆಗಬೇಕಿದೆ’ ಎಂದು ಹೇಳಿದರು. ಇಂಥ ಅಧಿಕಾರ ರಾಜ್ಯದ ಮಹಿಳಾ ಆಯೋಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗಗಳಿಗೆ ಈಗಾಗಲೇ ಇದೆ. ಆದರೆ ಅಲ್ಪಸಂಖ್ಯಾತರ ಆಯೋಗಕ್ಕೆ ಇಲ್ಲ ಎಂದರು.

ಅಲ್ಪಸಂಖ್ಯಾತರ ಹಕ್ಕುಗಳ ದಿನ: ಅಲ್ಪಸಂಖ್ಯಾತರ ಆಯೋಗವು ಡಿಸೆಂಬರ್ 18ರಂದು ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ದಿನ ಆಚರಿಸಲಿದೆ. ವಿಧಾನಸೌಧದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.