ಬೆಂಗಳೂರು: ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ವತಿಯಿಂದ ‘ಚಲೋ ಉಡುಪಿ’ ಸ್ವಾಭಿಮಾನಿ ಸಂಘರ್ಷ ಜಾಥಾವನ್ನು ಅಕ್ಟೋಬರ್ 4ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಬಿ.ಆರ್. ಭಾಸ್ಕರ್ ರಾವ್, ‘ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜಾಥಾಕ್ಕೆ ಚಾಲನೆ ನೀಡಲಾಗುತ್ತದೆ. ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂಬುದು ಜಾಥಾದ ಘೋಷವಾಕ್ಯವಾಗಿದೆ.
ನಗರದಿಂದ ಹೊರಡುವ ಜಾಥಾ ಸಂಜೆ ವೇಳೆಗೆ ನೆಲಮಂಗಲ ತಲುಪಲಿದೆ. 5ರಂದು ಕುಣಿಗಲ್, ಚನ್ನರಾಯಪಟ್ಟಣ, ಹೊಳೆನರಸೀಪುರ, 6 ರಂದು ಹಾಸನ, ಬೇಲೂರು, 7ರಂದು ಚಿಕ್ಕಮಗಳೂರು, ಕೊಪ್ಪವನ್ನು ತಲುಪಲಿದೆ’ ಎಂದರು.
‘ಕೊಪ್ಪ ತಾಲ್ಲೂಕಿನ ಜಯಪುರದಲ್ಲಿ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದೆ. 9 ರಂದು ಉಡುಪಿಯ ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆಯುವ ಸಮಾವೇಶವನ್ನು ಗುಜರಾತ್ ಊನಾ ಹೋರಾಟಗಾರ ಜಿಗ್ನೇಶ್ ಮೆವಾನಿ ಉದ್ಘಾಟಿಸಲಿದ್ದಾರೆ.
ಈ ಜಾಥಾದಲ್ಲಿ 200ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳು ಭಾಗವಹಿಸಲಿವೆ’ ಎಂದು ತಿಳಿಸಿದರು.
‘ಗುಜರಾತಿನ ಊನಾದಲ್ಲಿ ನಡೆದ ಹೋರಾಟದ ಸ್ಫೂರ್ತಿಯಿಂದ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ದೇವರು, ಧರ್ಮ, ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವಂತಹ ಅಮಾನವೀಯ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.
‘ಕರಾವಳಿ ಭಾಗದಲ್ಲಿ ಕೋಮುವಾದ, ಧರ್ಮಾಂಧತೆ ಹೆಚ್ಚಾಗಿದೆ. ಈ ಭಾಗದ ಜನರಿಗೆ ಜಾಗೃತಿ ಮೂಡಿಸುವುದು, ಸಮ ಸಮಾಜ ನಿರ್ಮಾಣ ಜಾಥಾದ ಉದ್ದೇಶ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.