ಬೆಂಗಳೂರು: ‘ಡಿಎಸ್ ಮ್ಯಾಕ್ಸ್’ ಕಟ್ಟಡ ನಿರ್ಮಾಣ ಸಂಸ್ಥೆ ವತಿಯಿಂದ ಭಾನುವಾರ ನಗರದಲ್ಲಿ, ಸಾಹಿತಿಗಳಾದ ಕೆ.ಎಸ್.ನಿಸಾರ್ ಅಹಮದ್ ಮತ್ತು ಚಂದ್ರಶೇಖರ್ ಪಾಟೀಲ ಅವರಿಗೆ ‘ಡಿ.ಎಸ್.ಮ್ಯಾಕ್ಸ್ ಸಾಹಿತ್ಯ ಪುರಸ್ಕಾರ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಈ ಪ್ರಶಸ್ತಿ ತಲಾ 15 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
ಕವಿಗಳಾದ ಬಿ.ಆರ್.ಲಕ್ಷ್ಮಣರಾವ್, ಪೂರ್ಣಿಮಾ ಸುರೇಶ್, ಚಂದ್ರಶೇಖರ್ ತಾಳ್ಯ, ವಿಮರ್ಶಕ ರಾಜೇಂದ್ರ ಚೆನ್ನಿ, ಲೇಖಕಿ ಡಾ.ಆಶಾ ಬೆನಕಪ್ಪ, ಪರಿಸರ ತಜ್ಞ ಟಿ.ಎಸ್.ವಿವೇಕಾನಂದ ಅವರಿಗೆ ‘ಡಿ.ಎಸ್.ಮ್ಯಾಕ್ಸ್ ಸಾಹಿತ್ಯ ಶ್ರೀ’ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ತಲಾ 10 ಸಾವಿರ ನಗದು ಮತ್ತು ಸ್ಮರಣಿಕೆ ಹೊಂದಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ.ಎಸ್.ನಿಸಾರ್ ಅಹಮದ್ ಅವರು, ‘ಇಂಗ್ಲಿಷ್ ಎಂಬ ಜಾಗತಿಕ ಸುನಾಮಿ ಎಲ್ಲ ಪ್ರಾದೇಶಿಕ ಭಾಷೆಗಳ ಮೇಲೆ ಆಕ್ರಮಣ ಮಾಡುತ್ತಿದೆ. ಆದರೆ, ಸಾವಿರಾರು ವರ್ಷಗಳ ಪರಂಪರೆ ಇರುವ ನಮ್ಮ ಕನ್ನಡ ಇದರ ಅಬ್ಬರಕ್ಕೆ ಬಗ್ಗಬಾರದು. ಸೂರ್ಯ ಚಂದ್ರ ಇರುವವರೆಗೆ ಕನ್ನಡದ ಡಿಂಡಿಮ ಭೂಮಿಯ ಮೇಲೆ ಮೊಳಗಬೇಕು’ ಎಂದು ಅಭಿಮಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.