ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗಕ್ಕೆ ಆಯ್ಕೆ ಮಾಡಲಾಗಿದ್ದ ಮೂವರು ಉಪನ್ಯಾಸಕರ ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದ್ದು, ಮೂರು ತಿಂಗಳ ಒಳಗಾಗಿ ಹೊಸ ಆಯ್ಕೆ ನಡೆಸುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದೆ. ಸಾಮಾನ್ಯ ವಿಭಾಗದಲ್ಲಿ ಸುದೇಷ್ಣಾ ಮುಖರ್ಜಿ, ಎಸ್ಸಿ ವಿಭಾಗದಲ್ಲಿ ಡಾ.ಸಿ.ಡಿ.ವೆಂಕಟೇಶ್ ಮತ್ತು ಎಸ್ಟಿ ವಿಭಾಗದಲ್ಲಿ ಡಾ.ಎಂ.ಸಿದ್ದಪ್ಪ ಅನೂರ್ಜಿತಗೊಂಡ ಉಪನ್ಯಾಸಕರಾಗಿದ್ದಾರೆ. ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಡಾ.ಪ್ರಕಾಶ್ ಭೀಮರಾಯ ಹುಗ್ಗಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ ಪೀಠವು ಈ ಆದೇಶ ನೀಡಿದೆ.
ಬೆಂಗಳೂರು ವಿಶ್ವವಿದ್ಯಾಲಯವು 2006ರ ಅಕ್ಟೋಬರ್ 14ರಂದು ಮಹಿಳಾ ಅಧ್ಯಯನ ವಿಭಾಗದಲ್ಲಿ ಮೂವರು ಉಪನ್ಯಾಸಕರ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನಿಸಿತ್ತು. ಎಸ್ಸಿ, ಎಸ್ಟಿ ಮತ್ತು ಸಾಮಾನ್ಯ ವಿಭಾಗದಲ್ಲಿ ತಲಾ ಒಂದೊಂದು ಹುದ್ದೆ ಖಾಲಿ ಇದ್ದವು. ‘ಮಹಿಳಾ ಅಧ್ಯಯನ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಶೇಕಡ 55 ಅಂಕ ಹಾಗೂ ಕಡ್ಡಾಯವಾಗಿ ಎನ್ಇಟಿ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಆದರೆ, ಆಯ್ಕೆ ಸಮಿತಿಯು ಈ ನಿಯಮ ಉಲ್ಲಂಘಿಸಿ ಎಸ್ಸಿ ಮೀಸಲು ವಿಭಾಗದಲ್ಲಿ ಸಮಾಜಶಾಸ್ತ ಅಧ್ಯಯನ ಮಾಡಿದವರನ್ನು, ಎಸ್ಟಿ ವಿಭಾಗದಲ್ಲಿ ಕನ್ನಡ ಮತ್ತು ಸಾಮಾನ್ಯ ವಿಭಾಗದಲ್ಲಿ ಸಮಾಜ ಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮಾಡಿದವರನ್ನು ಆಯ್ಕೆ ಮಾಡಿದೆ. ಇದು ಕಾನೂನು ಬಾಹಿರ. ಈ ಆಯ್ಕೆ ರದ್ದುಗೊಳಿಸಬೇಕು’ ಎಂದು ಅರ್ಜಿ ದಾರರು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.