ADVERTISEMENT

ಎಂಟೂವರೆ ತಿಂಗಳಲ್ಲಿ 521 ಬಲಿ!

ರಸ್ತೆ ದುರಸ್ತಿ ವಿಚಾರದಲ್ಲಿ ಬಿಡಿಎ– ಬಿಬಿಎಂಪಿ ಜಟಾಪಟಿ, ನಿರ್ಲಕ್ಷ್ಯ ಧೋರಣೆ: ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2015, 19:39 IST
Last Updated 19 ಸೆಪ್ಟೆಂಬರ್ 2015, 19:39 IST

ಬೆಂಗಳೂರು: ವೇಗದ ಚಾಲನೆ, ಅವೈಜ್ಞಾನಿಕ ರಸ್ತೆಗಳು, ಉಬ್ಬು–ಗುಂಡಿಗಳು ಸೇರಿದಂತೆ ವಿವಿಧ ಕಾರಣಗಳಿಂದ ನಗರದಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ವರ್ಷದ ಎಂಟೂವರೆ ತಿಂಗಳಲ್ಲೇ 521 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.

ರಸ್ತೆಗಳ ನಿರ್ವಹಣೆಯಲ್ಲಿ ಬಿಬಿಎಂಪಿ ಹಾಗೂ ಬಿಡಿಎ ಅನುಸರಿಸುತ್ತಿರುವ ನಿರ್ಲಕ್ಷ್ಯ ಧೋರಣೆ ಪೊಲೀಸರನ್ನು ಚಿಂತೆಗೆ ದೂಡಿದೆ.

36 ಪತ್ರ ಬರೆದಿದ್ದೇವೆ:  ‘ರಸ್ತೆ ಮೇಲಿನ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಗೆ ಈ ವರ್ಷ 36 ಪತ್ರಗಳನ್ನು ಬರೆದಿದ್ದೇವೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ರಸ್ತೆಗಳ ಸುಧಾರಣೆ ಆಗಿಲ್ಲ. ಇದರಿಂದ ಸಹಜವಾಗಿಯೇ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ.ಸಲೀಂ ಹೇಳಿದ್ದಾರೆ.

‘ರಸ್ತೆ ಗುಂಡಿಗೆ ಜನ ಬಲಿಯಾದಾಗ ಘಟನೆಯ ಹೊಣೆಯನ್ನು ಹೊರಲು ಯಾರೊಬ್ಬರೂ ಸಿದ್ಧರಿರುವುದಿಲ್ಲ. ಗುರುವಾರ ರಾತ್ರಿ ದೇವರಬೀನಹಳ್ಳಿಯಲ್ಲಿ ಅಪಘಾತ ಸಂಭವಿಸಿ ಸ್ತುತಿ ಪಾಂಡೆ ಮೃತಪಟ್ಟಿದ್ದಾರೆ. ಈಗ ಆ ರಸ್ತೆಯ ನಿರ್ವಹಣೆಯನ್ನು ಬಿಬಿಎಂಪಿಗೆ ಕೊಟ್ಟಿದ್ದೇವೆ ಎಂದು ಬಿಡಿಎ ಹೇಳುತ್ತಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳು ತಮಗೂ ಆ ರಸ್ತೆಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ’ ಎಂದು ಸಲೀಂ ಬೇಸರ ವ್ಯಕ್ತಪಡಿಸಿದರು.

‘ಅವಸರ, ರಸ್ತೆ ಉಬ್ಬುಗಳು, ಗುಂಡಿಗಳು, ವಿಳಂಬ ಕಾಮಗಾರಿಗಳು, ತಿರುವುಗಳು, ಮುಂಜಾನೆಯ ಮಂಜು, ಪಾನಮತ್ತ ಚಾಲನೆ ಹೀಗೆ ನಾನಾ ಕಾರಣಗಳಿಂದ ಈ ವರ್ಷ 3,400 ಅಪಘಾತಗಳು ಸಂಭವಿಸಿವೆ. ಬಿಬಿಎಂಪಿ, ಬಿಡಿಎ, ಜಲಮಂಡಳಿ ಪೊಲೀಸರು ಹಾಗೂ ವಾಹನ ಸವಾರರು ಜಾಗೃತೆಯಿಂದ ವರ್ತಿಸಿದರೆ ಸಾವಿನ   ಪ್ರಮಾಣವನ್ನು ತಗ್ಗಿಸಬಹುದು’ ಎಂಬುದು ಸಂಚಾರ ಪೊಲೀಸರ ವಿಶ್ಲೇಷಣೆ.

ಮೇಯರ್ ಪತ್ರ: ನಗರದ ರಸ್ತೆಗಳು, ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ ಅವರು ಶನಿವಾರ ಬಿಡಿಎ ಆಯುಕ್ತ ಟಿ.ಶ್ಯಾಮ್‌ ಭಟ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಸತತ ಮಳೆಯಿಂದ ರಸ್ತೆ ಮೇಲೆ ಗುಂಡಿಗಳು ಬೀಳುವುದು ಸಹಜ. ದೇವರಬೀಸನಹಳ್ಳಿಯ ಘಟನೆ ಕೂಡ ಬೈಕ್‌ ಸವಾರನ ನಿರ್ಲಕ್ಷ್ಯದಿಂದ ಆಗಿರುವುದು. ಗೆಳೆಯನ ಮನೆಗೆ ಹೋಗುವ ಆತುರದಲ್ಲಿ ಅವರು ಸಂಚಾರ ನಿಯಮ ಉಲ್ಲಂಘಿಸಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿ, ಶನಿವಾರ ಬೆಳಿಗ್ಗೆಯೇ ಆ ಗುಂಡಿಯನ್ನು ಮುಚ್ಚಿಸಲಾಗಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದುವರಿದ ಪರಿಪಾಠ: ‘ಅಪಘಾತ ಸಂಭವಿಸಿದಾಗ ವಾಹನ ಸವಾರನನ್ನು ಮಾತ್ರ ಆರೋಪಿಯನ್ನಾಗಿ ಮಾಡುವ ಪೊಲೀಸರು, ವೈಜ್ಞಾನಿಕ ಕಾರಣಗಳ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಪರಿಪಾಠವನ್ನೇ ಆರಂಭಿಸಿಲ್ಲ. ಅಂದರೆ, ರಸ್ತೆ ನಿರ್ವಹಣೆ ಮಾಡದ ಗುತ್ತಿಗೆದಾರ–ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸುತ್ತಿಲ್ಲ’ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

5,200 ಗುಂಡಿ ಮುಚ್ಚಿದ್ದೇವೆ: ‘ಕಳೆದ ಎರಡು ತಿಂಗಳ ಅವಧಿಯಲ್ಲಿ ಹಾಳಾಗಿದ್ದ 55 ಸಾವಿರ ಚದರ ಮೀಟರ್‌ ರಸ್ತೆಯಲ್ಲಿ, 40 ಸಾವಿರ ಚದರ ಮೀಟರ್‌ ರಸ್ತೆಯನ್ನು ದುರಸ್ತಿ ಮಾಡಲಾಗಿದೆ. ರಸ್ತೆ ಮಧ್ಯೆ ಬಿದ್ದಿದ್ದ 5,800 ಗುಂಡಿಗಳನ್ನು ಗುರುತಿಸಿ ಅವುಗಳಲ್ಲಿ 5,200 ಗುಂಡಿಗಳನ್ನು ಮುಚ್ಚಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಮಹಿಳೆಯ ಪತಿ ವಿರುದ್ಧ ಪ್ರಕರಣ
‘ದೇವರಬೀಸನಹಳ್ಳಿ ಸಂಭವಿಸಿದ ಅಪಘಾತ ಪ್ರಕರಣ ಸಂಬಂಧ ಮೃತರ ಪತಿ ಓಂ ಪ್ರಕಾಶ್‌ ತ್ರಿಪಾಠಿ ಅವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ (ಐಪಿಸಿ 304ಎ) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಸಲೀಂ ತಿಳಿಸಿದರು.

‘ರಸ್ತೆ ನಿರ್ವಹಣೆಯಲ್ಲಿ ಯಾರ ಲೋಪ ಇದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸಂಬಂಧಪಟ್ಟ ಎಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧವೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ತನಿಖಾಧಿಕಾರಿಗಳ ವರದಿಗಾಗಿ ಕಾಯುತ್ತಿದ್ದೇನೆ’ ಎಂದರು.
 

ರಸ್ತೆ ಗುಂಡಿಗೆ ಬಲಿಯಾದ ಘಟನೆ..
2015 ಆ. 23: ತುಮಕೂರು ರಸ್ತೆಯ ಎಸ್‌ಆರ್‌ಎಸ್‌ ಜಂಕ್ಷನ್‌ನಲ್ಲಿ ಗುಂಡಿ ತಪ್ಪಿಸುವ ಯತ್ನದಲ್ಲಿ ಸ್ಕೂಟರ್‌ನಿಂದ ಬಿದ್ದು ತಾಯಿ ಸುನಿತಾ ಹಾಗೂ ಅವರ ಒಂಬತ್ತು ವರ್ಷದ ಮಗ ಲಿಖಿತ್‌ಗೌಡ ಸಾವು.

ADVERTISEMENT

ಜುಲೈ 23: ಎಸ್‌.ಜೆ.ಪಾರ್ಕ್‌ ರಸ್ತೆಯಲ್ಲಿ ಗುಂಡಿ ಎದುರಾಗಿದ್ದರಿಂದ ಬೈಕನ್ನು ಬಲಕ್ಕೆ ತೆಗೆದುಕೊಂಡಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಅನಂತಪುರದ ಲಕ್ಷ್ಮಿದೇವಿ ಮೃತಪಟ್ಟಿದ್ದರು. ಅವರ ಪತಿ ಗಾಯಗೊಂಡಿದ್ದರು.

ಏ.27: ಹಲಸೂರುಗೇಟ್ ಠಾಣಾ ವ್ಯಾಪ್ತಿಯ ಒಟಿಸಿ ರಸ್ತೆಯಲ್ಲಿ 13 ವರ್ಷದ ಶಮಾ ಅಂಜುಮ್ ಮತ್ತು ಆಕೆಯ ಒಂದು ವರ್ಷದ ಸೋದರಿ ಆಯಮ್ ಸಾವು. ತಾಯಿ ಜತೆ ಸ್ಕೂಟರ್‌ನಲ್ಲಿ ಹಿಂದೆ ಕುಳಿತು ಹೋಗುತ್ತಿದ್ದಾಗ ಎದುರಾದ ಗುಂಡಿ ಇವರನ್ನು ಬಲಿ ಪಡೆದಿತ್ತು.

2014 ಡಿ.5: ಹೂಡಿ ಮುಖ್ಯರಸ್ತೆಯಲ್ಲಿ ಧನುಶ್ರೀ ಎಂಬ ಎರಡೂವರೆ ವರ್ಷದ ಮಗು ಮೃತಪಟ್ಟಿತ್ತು. ಚಿಕ್ಕಪ್ಪನ ಜತೆ ಬೈಕ್‌ನಲ್ಲಿ ಹೋಗುತ್ತಿದ್ದ ಮಗು, ಬೈಕ್‌ನ ಚಕ್ರ ಗುಂಡಿಗೆ ಇಳಿಯುತ್ತಿದ್ದಂತೆಯೇ ಹಾರಿ ರಸ್ತೆಗೆ ಬಿದ್ದಿತ್ತು. ಆಗ ತಲೆ ಮೇಲೆ ಲಾರಿ ಹರಿದಿತ್ತು.

ರಸ್ತೆ ಗುಂಡಿಗಳ ಚಿತ್ರ ಕಳುಹಿಸಿ
ವೇಗದ ಚಾಲನೆ, ಅವೈಜ್ಞಾನಿಕ ರಸ್ತೆಗಳು, ಉಬ್ಬು–ಗುಂಡಿಗಳು ಸೇರಿದಂತೆ ವಿವಿಧ ಕಾರಣಗಳಿಂದ ನಗರದಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ವರ್ಷದ ಎಂಟೂವರೆ ತಿಂಗಳಲ್ಲೇ 521 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.