ಬೆಂಗಳೂರು: ‘ಸಮಾಜವಾದ, ಸಮತಾವಾದ, ಸಂಗೀತ, ಸಂಪ್ರದಾಯಗಳ ಬಗ್ಗೆ ಸಮಾನವಾದ ತಿಳಿವಳಿಕೆ ಹೊಂದಿದ್ದ ಸು.ರಂ. ಎಕ್ಕುಂಡಿ ಅವರ ಕವಿತೆಗಳಲ್ಲಿ ಧಾತು- ಮಾತುಗಳ ಸಮ್ಮಿಲನವನ್ನು ಯಥೇಚ್ಛವಾಗಿ ಕಾಣಬಹುದು’ ಎಂದು ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅಭಿಪ್ರಾಯಪಟ್ಟರು.
‘ಹೊಂಬಾಳೆ ಪ್ರತಿಭಾರಂಗ ಸಂಸ್ಥೆ’ ವತಿಯಿಂದ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಯೋಗದಲ್ಲಿ ‘ಕವಿದನಿ’ ಸರಣಿ ಪ್ರಯುಕ್ತ ನಗರದಲ್ಲಿ ಹಮ್ಮಿಕೊಂಡಿದ್ದ ‘ಕವಿ ಸು.ರಂ. ಎಕ್ಕುಂಡಿ ಅವರ ಕವಿತೆಗಳ ಓದು–ಗಮಕ– ಗಾಯನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾರ್ಕ್ಸ್‌ವಾದ ಮೂಲಕ ಲೋಕಯಾತ್ರೆ ಹಾಗೂ ಮಧ್ವರ ಮೂಲಕ ಅಧ್ಯಾತ್ಮ ಯಾತ್ರೆಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಸಿದವರು ಎಕ್ಕುಂಡಿ. ಗಾಂಧಿ, ಶಂಕರ, ಆನಂದತೀರ್ಥರು ಜತೆಯಲ್ಲೇ ಇದ್ದಾರೆ. ಕವಿತೆಗಳಲ್ಲಿ ಅವರೆಲ್ಲರೂ ಇರುತ್ತಾರೆ ಎಂದು ಎಕ್ಕುಂಡಿ ಯಾವಾಗಲೂ ಹೇಳುತ್ತಿದ್ದರು’ ಎಂದು ಮಲ್ಲೇಪುರಂ ನೆನೆದರು. ಇದೇ ವೇಳೆ ಅವರು, ಎಕ್ಕುಂಡಿ ಅವರ ‘ಶಬರಿ’ ಮತ್ತು ‘ಪೊರಕೆ’ ಕವನ ಓದಿದರು.
ಎಕ್ಕುಂಡಿ ಅವರ ಮಗ ರಂಗನಾಥ್ ಮಾತನಾಡಿ, ‘ತಂದೆಯು ಮೆದುಳಿನೊಂದಿಗೆ ಹೃದಯವನ್ನು ಬೆರೆಸಿ ಕಾವ್ಯ ರಚಿಸಿದ್ದಾರೆ. ಅದರಿಂದಲೇ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದರು’ ಎಂದರು. ‘ಪ್ರಶ್ನೆ’ ಮತ್ತು ‘ಶರಣು’ ಕವನ ವಾಚಿಸಿದರು.
ಗಮಕಿ ಎಚ್. ಉಷಾ ಎಕ್ಕುಂಡಿ, ‘ಅವಧೂತ’ ಮತ್ತು ‘ವಸ್ತ್ರಾಪಹರಣ’ದ ಕೆಲ ಪದ್ಯಗಳನ್ನು ಗಮಕ ರೂಪದಲ್ಲಿ ಪ್ರಸ್ತುತಪಡಿಸಿದರು. ಎಕ್ಕುಂಡಿ ಅವರ ಹಿರಿಯ ಮಗಳು ಭಾರತಿ, ‘ತಂಬೂರಿ ಶ್ರುತಿ ಮಾಡಿ ಬಂದಾನೋ’ ಗೀತೆ ಹಾಡಿದರು. ಹಿರಿಯ ಗಾಯಕ ಗರ್ತಿಕೆರೆ ರಾಘಣ್ಣ, ‘ಅಮ್ಮ ನಿಮ್ಮ ಮನೆಗಳಲ್ಲಿ ಕಂಡಿರೇನು ಕಂದನಾ’, ‘ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ’, ‘ಎಂದು ನೀಡುವಿ ನಿನ್ನ ದರುಶನವ ಎನಗೆ’ ಕವಿತೆಗಳನ್ನು ಹಾಡಿದರು. ಎಸ್.ಮಧುಸೂದನ್ ಹಾಗೂ ಎಲ್.ಎನ್. ವಸಂತಕುಮಾರ್ ವಾದ್ಯ ಸಹಕಾರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.