ಬೆಂಗಳೂರು: ‘ಎತ್ತಿನಹೊಳೆ ಯೋಜನೆ ಹಿಂದೆ ಗುತ್ತಿಗೆದಾರರೂ ಸೇರಿದಂತೆ ವಿವಿಧ ಮಾಫಿಯಾಗಳು ಇವೆ. ಈ ಯೋಜನೆಯ ಹೆಸರು ಹೇಳಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಕಿಡಿಕಾರಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರ, ಸ್ವರ್ಣವಲ್ಲಿ ಸೇವಾ ಪ್ರತಿಷ್ಠಾನ ಹಾಗೂ ವೃಕ್ಷಲಕ್ಷ ಆಂದೋಲನದ ಆಶ್ರಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬುಧವಾರ ನಡೆದ ಪಶ್ಚಿಮ ಘಟ್ಟದ ಕೆರೆಗಳ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘ಈ ಯೋಜನೆಯಿಂದ 24 ಟಿಎಂಸಿ ನೀರು ಸಿಗಲಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಈ ಯೋಜನೆಯಿಂದ ಸಿಗುವುದು ಕೇವಲ ಏಳು ಟಿಎಂಸಿ ನೀರು ಎಂಬುದು ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಸುಳ್ಳು ಅಂಕಿ ಅಂಶಗಳನ್ನು ನೀಡಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಎತ್ತಿನಹೊಳೆಯನ್ನೇ ಅವಲಂಬಿಸಬೇಕಿಲ್ಲ. ಕೋಲಾರ ಜಿಲ್ಲೆಯಲ್ಲಿ 4,000 ಕೆರೆಗಳು ಇದ್ದವು. ಈ ಕೆರೆಗಳ ಪುನರುಜ್ಜೀವನ ಮಾಡಿದರೆ ಸಾಕು’ ಎಂದು ಕಿವಿಮಾತು ಹೇಳಿದರು. ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಶೇ 67 ಅರಣ್ಯ ಪ್ರದೇಶ ಇತ್ತು. ಈಗ ಅರಣ್ಯ ಪ್ರದೇಶ ಪ್ರಮಾಣ ಶೇ 37ಕ್ಕೆ ಇಳಿದಿದೆ. ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಅರಣ್ಯ ನಾಶ ಮಾಡಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ’ ಎಂದು ಅವರು ಎಚ್ಚರಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರೊ.ಎಂ.ಡಿ. ಸುಭಾಸ್‌ಚಂದ್ರನ್ ಮಾತನಾಡಿ, ‘ಸರ್ಕಾರ ಸ್ಮಾರ್ಟ್ ನಗರಗಳ ಸ್ಥಾಪನೆಗೆ ಮುಂದಾಗಿದೆ. ಇದರ ಬದಲು ಸ್ಮಾರ್ಟ್ ಹಳ್ಳಿಗಳ ನಿರ್ಮಾಣ ಆಗಬೇಕಿದೆ. ಹಳ್ಳಿಗಳ ಯುವಜನ ನಗರಗಳಿಗೆ ವಲಸೆ ಬರುತ್ತಿದ್ದಾರೆ. ಹಳ್ಳಿಗಳು ವೃದ್ಧಾಶ್ರಮಗಳಾಗಿವೆ’ ಎಂದರು. ರಾಜ್ಯ ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ ಆರ್.ಕೆ. ಸಿಂಗ್, ಪರಿಸರವಾದಿ ಅನಂತ ಹೆಗಡೆ ಆಶೀಸರ, ಸ್ವರ್ಣವಲ್ಲಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಹೆಗಡೆ ಉಪಸ್ಥಿತರಿದ್ದರು.
ಘೋರ ನರಕ
ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ಈ ಹಿಂದೆ ಉತ್ತರ ಕನ್ನಡ ಜಿಲ್ಲೆ ಸ್ವರ್ಗ ಆಗಿತ್ತು. ಜಿಲ್ಲೆ ಈಗ ನರಕ ಆಗುತ್ತಿದೆ. ಬೆಂಗಳೂರು ಘೋರ ನರಕ ಆಗಿದೆ’ ಎಂದು ವಿಷಾದಿಸಿದರು. ‘ಈ ಹಿಂದೆ ಪ್ರತಿಯೊಂದು ದೇವಸ್ಥಾನದಲ್ಲಿ ಕೆರೆ ಇತ್ತು. ಇವತ್ತು ದೇವಸ್ಥಾನದ ಕೆರೆಗಳು ಕಲುಷಿತಗೊಂಡಿವೆ. ಕೆರೆಗಳ ಬಗ್ಗೆ ಸರ್ಕಾರ ಹಾಗೂ ಜನರಿಗೆ ನಿರ್ಲಕ್ಷ್ಯ ಭಾವನೆ ಇದೆ. ಹೀಗಾಗಿ ಅನೇಕ ಕೆರೆಗಳು ಕಣ್ಮರೆ ಆಗಿವೆ. ಉಳಿದ ಕೆರೆಗಳು ಕಲುಷಿತ-ಗೊಂಡಿವೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.