ಬೆಂಗಳೂರು: ಸಿಬಿಎಸ್‌ಸಿ ಮಾದರಿಯಲ್ಲಿ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಎಸ್ಸೆಸ್ಸೆಲ್ಸಿಯ ಹೊಸ ಗಣಿತ ಪಠ್ಯಪುಸ್ತಕದಲ್ಲಿ ತಪ್ಪುಗಳ ಸುರಿಮಳೆಯೇ ಇದೆ. ಪುಸ್ತಕದ ಪ್ರತಿ ಅಧ್ಯಾಯದಲ್ಲೂ ಹಲವು ತಪ್ಪುಗಳು ಕಂಡುಬಂದಿವೆ.
ಪರಿಷ್ಕೃತ ಪಠ್ಯಪುಸ್ತಕವನ್ನು ಮುದ್ರಿಸಿರುವ ಶಿಕ್ಷಣ ಇಲಾಖೆ ಈಗಾಗಲೇ ಶಾಲೆಗಳಿಗೆ ವಿತರಿಸಿದೆ. ಅವುಗಳಲ್ಲಿ ದೊಡ್ಡ ಸಂಖ್ಯೆಯ ತಪ್ಪುಗಳು ಇರುವುದನ್ನು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಗುರುತಿಸಿದ್ದಾರೆ.
‘ಎಸ್ಸೆಸ್ಸೆಲ್ಸಿ ಹೊಸ ಗಣಿತ ಪಠ್ಯಪುಸ್ತಕದಲ್ಲಿ ತಪ್ಪುಗಳು ಇರುವ ಬಗ್ಗೆ ನಮಗೆ ದೂರುಗಳು ಬಂದಿವೆ. ತಪ್ಪುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪಠ್ಯಪುಸ್ತಕ ಸಂಘ ಪರಿಶೀಲನಾ ವರದಿಯನ್ನೂ ನೀಡಿದೆ. ಈ ತಪ್ಪುಗಳಿಗೆ ಸಂಬಂಧಿಸಿದಂತೆ ಹಿರಿಯ ತಜ್ಞರೊಬ್ಬರಿಂದ ಪರಿಶೀಲನೆ ನಡೆಸುವಂತೆ ಪಠ್ಯಪುಸ್ತಕ ರಚನಾ ಸಮಿತಿಗೆ ಸೂಚಿಸಲಾಗಿದೆ. ತಪ್ಪುಗಳಿಗೆ ಸಂಬಂಧಿಸಿದಂತೆ ಎಲ್ಲ ಶಾಲೆಗಳಿಗೂ ತಿದ್ದುಪಡಿಯನ್ನು ಕಳುಹಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮ ಮೊಹಸಿನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪಠ್ಯಪುಸ್ತಕ ರಚನೆ ಮತ್ತು ಮುದ್ರಣ ಕಾರ್ಯದ ಮೇಲ್ವಿಚಾರಣೆಗೆ ನೇಮಿಸಿದ್ದ ಅಧಿಕಾರಿಗಳ ಕಾರ್ಯಕ್ಷಮತೆಯ ಬಗ್ಗೆಯೇ ಈಗ ಅನುಮಾನಗಳು ಎದ್ದಿವೆ. ಇನ್ನೊಂದೆಡೆ ಪ್ರೌಢಶಿಕ್ಷಣ ಮಂಡಳಿಯಲ್ಲಿ ಪಠ್ಯಪುಸ್ತಕ ರಚನೆ ಮತ್ತು ಮುದ್ರಣ ಕಾರ್ಯದ ಮೇಲ್ವಿಚಾರಣೆಗೆ ಅಧಿಕಾರಿಗಳ ಕೊರತೆ ಇರುವುದು ಇದಕ್ಕೆ ಕಾರಣ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
‘ಪರಿಷ್ಕೃತ ಪಠ್ಯ ಪುಸ್ತಕದಲ್ಲಿ 300 ತಪ್ಪುಗಳನ್ನು ಗುರುತಿಸಿದ್ದೇವೆ. ಬಹುತೇಕ ಎಲ್ಲ ಅಧ್ಯಾಯಗಳಲ್ಲೂ ತಪ್ಪುಗಳಿವೆ. ಕೆಲವು ಕಡೆಗಳಲ್ಲಿ ಅನಗತ್ಯವಾಗಿ ಹೆಚ್ಚುವರಿ ಮಾಹಿತಿಗಳನ್ನು ನೀಡಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಡುವಂತಿದೆ’ ಎನ್ನುತ್ತಾರೆ ಬೆಂಗಳೂರು ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಗಣಿತ ಶಿಕ್ಷಕ ಜೆ.ಕೆ.ಗಂಗಾಧರ್.
ರೇಖಾಗಣಿತದ ಮೊದಲ ಅಧ್ಯಾಯದಲ್ಲಿ 10.1ನೇ ಅಭ್ಯಾಸ ವಿಷಯದಲ್ಲಿ ಮೂರು ಸಮಸ್ಯೆಗಳನ್ನು ನೀಡಲಾಗಿದೆ. ಆದರೆ, ಅವುಗಳನ್ನು ಪರಿಹರಿಸಲು ಸಾಧ್ಯವೇ ಇಲ್ಲ. ಒಂದು ಭಾಗದಲ್ಲಿ ‘XY’ ಮೌಲ್ಯ ಕಂಡು ಹಿಡಿಯಲು ಸೂಚಿಸಲಾಗಿದೆ. ಆದರೆ, ಇಲ್ಲಿ X ಮೌಲ್ಯ ಕಂಡು ಹಿಡಿಯುವುದು ಅಸಾಧ್ಯವಾಗಿದೆ. ಇನ್ನೊಂದು ಭಾಗದಲ್ಲಿ 6 ಸೆಂ.ಮೀ. ಎತ್ತರದ ಏಣಿಯೊಂದಕ್ಕೆ ಸಂಬಂಧಿಸಿದ ಸಮಸ್ಯೆ ನೀಡಲಾಗಿದೆ. ಆದರೆ, ವಾಸ್ತವವಾಗಿ ಆ ಎತ್ತರ ಸಮಸ್ಯೆಗೆ ಸರಿ ಹೊಂದುವಂತೆ ಇಲ್ಲ ಎಂದು ಅವರು ಪಟ್ಟಿ ಮಾಡುತ್ತಾರೆ.
ರೇಖಾ ಗಣಿತಕ್ಕೆ ಸಂಬಂಧಿಸಿದ ಅಧ್ಯಾಯಗಳಲ್ಲಿ ಹೆಚ್ಚು ತಪ್ಪುಗಳಿವೆ. ಮೊದಲನೇ ಅಧ್ಯಾಯದಲ್ಲೇ ಹಲವು ತಪ್ಪುಗಳಿವೆ ಎಂದು ಖಾಸಗಿ ಶಾಲೆಯೊಂದರ ಗಣಿತ ಶಿಕ್ಷಕಿ ಮಾಲತಿ ತಿಳಿಸಿದರು.
ಗಣಿತ ಪಠ್ಯಪುಸ್ತಕದಲ್ಲಿ ನೀಡಿರುವ ವಿಷಯಗಳಲ್ಲಿ ಗೊಂದಲ ಇರುವ ಬಗ್ಗೆಯೂ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಕೆಲವು ಸಮಸ್ಯೆಗಳು ಒಂಬತ್ತನೇ ತರಗತಿಯ ಪಠ್ಯಪುಸ್ತಕದಲ್ಲಿರುವ ವಿಷಯಗಳನ್ನು ಹೋಲುತ್ತವೆ. ಆದರೆ, ಅವುಗಳನ್ನು ಸ್ಪಷ್ಟವಾಗಿ ಅರಿತುಕೊಳ್ಳಲು ಸಾಧ್ಯವೇ ಆಗುವುದಿಲ್ಲ ಎಂದು ಅವರು ಬೊಟ್ಟು ಮಾಡುತ್ತಾರೆ.
‘ಪಠ್ಯಪುಸ್ತಕದಲ್ಲಿ ಲೋಪ ಇರುವ ಬಗ್ಗೆ ನಮಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಇತರೆ ವಿಷಯಗಳ ಪಠ್ಯ ಪುಸ್ತಕಗಳ ಬಗ್ಗೆಯೂ ಅಧ್ಯಯನ ಮಾಡಲಾಗುವುದು. ನಂತರ ಅಗತ್ಯವಿರುವ ಬದಲಾವಣೆಗಳ ಕುರಿತು ವರದಿ ನೀಡಲಾಗುವುದು’ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ನರಸಿಂಹ ಜಿ.ರಾವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.