ADVERTISEMENT

ಏಳು ಜನರ ಜೈಲು ಶಿಕ್ಷೆ ಕಾಯಂ

ಮೈಸೂರು ಮಹಾರಾಜರ ಸ್ಥಿರಾಸ್ತಿಗೆ ಐ.ಟಿ ಅಧಿಕಾರಿಗಳಿಂದಲೇ ಪಂಗನಾಮ

​ಪ್ರಜಾವಾಣಿ ವಾರ್ತೆ
Published 3 ಮೇ 2019, 19:57 IST
Last Updated 3 ಮೇ 2019, 19:57 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮೈಸೂರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ತೆರಿಗೆ ಪಾವತಿಸಲು ವಿಫಲರಾಗಿದ್ದಾರೆ’ ಎಂಬ ಕಾರಣಕ್ಕೆ ಅವರ ಒಡೆತನದಲ್ಲಿದ್ದ 10 ಎಕರೆ ಜಮೀನನ್ನು ನಕಲಿ ಹರಾಜಿನಲ್ಲಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನ ಅಪರಾಧಿಗಳಿಗೆ (ಇವರಲ್ಲಿ ಏಳು ಜನರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು) ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆ ಮತ್ತು ದಂಡವನ್ನು ಹೈಕೋರ್ಟ್‌ ಕಾಯಂಗೊಳಿಸಿದೆ.

ಈ ಕುರಿತಂತೆ ಶಿಕ್ಷೆಗೊಳಾಗಿದ್ದ ಏಳು ಜನ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿ ಮೇಲಿನ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎನ್‌.ಕೆ.ಸುಧೀಂದ್ರ ರಾವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.

ಅಪರಾಧಿಗಳು: ಮುಂಬೈನ್ ಜಗದೀಪ್‌ ಆರ್‌.ತಡಾನಿ, ಸಿ.ಸುಬ್ಬರಾಯನ್‌, ಬಿ.ಎನ್‌.ರಾಜಣ್ಣ, ಎಸ್‌.ನರಸಿಂಹಮೂರ್ತಿ, ಆರ್‌.ಎಸ್‌.ಸೇತುರಾಮನ್‌, ಬಿ.ಸಿ.ಅಶ್ವತ್ಥ ಮತ್ತು ಎಂ.ಡಿ.ಭೀಮಾ ನಾಯ್ಡು.

ADVERTISEMENT

ಅಪರಾಧಿಗಳಲ್ಲಿ ಈಗಾಗಲೇ ಶಿವಣ್ಣ, ಕೆ.ರಾಮಣ್ಣ ಮತ್ತು ನರಸಿಂಹ ಮೂರ್ತಿ ಮೃತಪಟ್ಟಿದ್ದಾರೆ. ತೆರಿಗೆ ವಸೂಲಿಗಾರರಾಗಿ ಬೆಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರಸಿಂಹ ಮೂರ್ತಿ ಅವರನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.

ಪ್ರಕರಣವೇನು?: ‘ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ₹ 7,51,05,327 ಮೊತ್ತದ ಆದಾಯ ತೆರಿಗೆ ಪಾವತಿಸಲು ವಿಫಲರಾಗಿದ್ದಾರೆ’ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಒಡೆಯರ್‌ ಅವರಿಗೆ ನೋಟಿಸ್‌ ನೀಡಿದ್ದರು. ನಂತರದಲ್ಲಿ ಈ ಮೊತ್ತದ ವಸೂಲಾತಿಗಾಗಿ ಮೈಸೂರಿನ ಪ್ರಾಣಿ ಸಂಗ್ರಹಾಲಯಕ್ಕೆ ಸಮೀಪದಲ್ಲಿದ್ದ ಇವರ ಜಮೀನನ್ನು ನಕಲಿ ಹರಾಜಿನಲ್ಲಿ ಮಾರಾಟ ಮಾಡಿದ್ದಾರೆ’ ಎಂದು ಆರೋಪಿಸಲಾಗಿತ್ತು.

‘ಈ ಹರಾಜು ಪ್ರಕ್ರಿಯೆಯನ್ನು 1995ರ ಅಕ್ಟೋಬರ್‌ 30ರಂದು ಮೈಸೂರಿನ ಕೃಷ್ಣಾ ಕಾಂಟಿನೆಂಟಲ್‌ ಹೋಟೆಲ್‌ನಲ್ಲಿ ನಡೆಸಲಾಯಿತು ಮತ್ತು ಎಕರೆಗೆ ₹ 2 ಲಕ್ಷದಂತೆ 10 ಎಕರೆಯನ್ನು ಮುಂಬೈನ್ ಜಗದೀಪ್‌ ಆರ್‌.ತಡಾನಿ ಅವರಿಗೆ ಹರಾಜಿನಲ್ಲಿ ನೀಡಲಾಗಿತ್ತು’ ಎಂದು ಸಿಬಿಐ ಪ್ರಕರಣ ದಾಖಲಿಸಿತ್ತು.

‘ಈ ಪ್ರಕ್ರಿಯೆಯಲ್ಲಿ ನಾಲ್ಕು ಜನ ಬಿಡ್ಡರ್‌ ಭಾಗವಹಿಸಿದ್ದರು. ತಡಾನಿ ಅತಿ ಹೆಚ್ಚಿನ ಮೊತ್ತಕ್ಕೆ ಬಿಡ್ ಕೂಗಿದ್ದರು’ ಎಂದು ದಾಖಲೆಗಳಲ್ಲಿ ಕಾಣಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯ 2010ರ ಆಗಸ್ಟ್ 30ರಂದು ಎಲ್ಲ ಅಪರಾಧಿಗಳಿಗೆ ಆರು ತಿಂಗಳಿನಿಂದ ಮೂರು ವರ್ಷಗಳ ಅವಧಿಯವರೆಗೆ ಜೈಲು ಶಿಕ್ಷೆ ಮತ್ತು ₹ 20 ಸಾವಿರದಿಂದ ಗರಿಷ್ಠ ₹ 50 ಸಾವಿರದವರೆಗೆ ದಂಡ ವಿಧಿಸಿತ್ತು. ಏಳು ಜನ ಅಪರಾಧಿಗಳು ಈ ಆದೇಶವನ್ನು ಪ್ರಶ್ನಿಸಿ 2010ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.