ಬೆಂಗಳೂರು: ಬಳ್ಳಾರಿ ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಪರ ವಕೀಲರು ಕೋರ್ಟ್‌ಗೆ ತಕರಾರು ಸಲ್ಲಿಸಿದರು.
ಈ ಕುರಿತಂತೆ ಗಣೇಶ್ ಸಲ್ಲಿಸಿರುವ ಅರ್ಜಿಯನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯ ಶುಕ್ರವಾರ ವಿಚಾರಣೆ ನಡೆಸಿತು.
ಇದೇ ವೇಳೆ, ದೂರುದಾರ ಆನಂದ ಸಿಂಗ್ ಪರ ಖಾಸಗಿ ವಕೀಲರೊಬ್ಬರು ಹಾಜರಾಗಿ, ‘ಈ ಪ್ರಕರಣದಲ್ಲಿ ಫಿರ್ಯಾದುದಾರರ ಪರವಾಗಿ ವಾದ ಮಾಡಲು ನನಗೂ ಅವಕಾಶ ನೀಡಬೇಕು’ ಎಂದು ಕೋರಿ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 302ರ ಅಡಿಯಲ್ಲಿ ಅರ್ಜಿ ಸಲ್ಲಿಸಿದರು.
ಇದಕ್ಕೆ ಅರ್ಜಿದಾರರ ಪರ ವಕೀಲ ಸಿ.ಎಚ್.ಹನುಮಂತರಾಯ ತೀವ್ರ ವಿರೋಧ ವ್ಯಕ್ತಪಡಿಸಿದರು. ‘ಈ ವಕೀಲರಿಗೆ ಕೋರ್ಟ್ ಅನ್ನು ಉದ್ದೇಶಿಸಿ ವಾದ ಮಾಡುವ ಹಕ್ಕು ಇಲ್ಲ. ಅದು ಕೇವಲ ಪ್ರಾಸಿಕ್ಯೂಟರ್‌ಗೆ ಮಾತ್ರವೇ ಇದೆ’ ಎಂದರು.
‘ಈ ವಕೀಲರು ವಾದ ಮಾಡಬಹುದೇ ಇಲ್ಲವೇ ಎಂಬುದು ಮೊದಲು ನಿರ್ಧಾರ ಆಗಬೇಕು. ನಂತರ ಜಾಮೀನು ಅರ್ಜಿ ವಿಚಾರಣೆ ನಡೆಯಲಿ. ಆದ್ದರಿಂದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ನನಗೆ ಕಾಲಾವಕಾಶ ಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ವಿಚಾರಣೆಯನ್ನು ಇದೇ 13ಕ್ಕೆ ಮುಂದೂಡಿದರು.
ಬಿಡದಿ ಈಗಲ್‌ಟನ್ ರೆಸಾರ್ಟ್‌ನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು 2019ರ ಫೆಬ್ರುವರಿ 20ರಂದು ಗಣೇಶ್ ಅವರನ್ನು ಬಂಧಿಸಿದ್ದರು. ನಂತರ ರಾಮನಗರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ 21ರಂದು ಹಾಜರುಪಡಿಸಿದರು. ನ್ಯಾಯಾಲಯ ಅಂದೇ ಅವರನ್ನು ನ್ಯಾಯಾಂಗ ಬಂಧನದ ವಶಕ್ಕೆ ಒಪ್ಪಿಸಿದೆ. ಅಂದಿನಿಂದಲೂ ಗಣೇಶ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.