ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಮಹದೇವಪುರ ಕ್ಷೇತ್ರ ಘಟಕದ ವತಿಯಿಂದ ವರ್ತೂರು ಸಮೀಪದ ಮಂಜುನಾಥ್ ಬಡಾವಣೆಯಲ್ಲಿ ತೆರೆದಿರುವ ಕನ್ನಡ ಕಲಿಕಾ ಕೇಂದ್ರಕ್ಕೆ ಚಾಲನೆ ನೀಡಲಾಯಿತು.
ಪರಿಷತ್ತಿನ ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಾಯಣ್ಣ ಮಾತನಾಡಿ, ‘ನಗರದಲ್ಲಿ ಅನ್ಯಭಾಷಿಕರು ಹೆಚ್ಚಾಗಿದ್ದಾರೆ. ಅವರಿಗೆ ಕನ್ನಡ ಭಾಷೆಯನ್ನು ಕಲಿಸುವ ಉದ್ದೇಶದಿಂದ ನಗರದಾದ್ಯಂತ ಕಲಿಕಾ ಕೇಂದ್ರಗಳು ತೆರೆಯಲಾಗುತ್ತಿದೆ. ಇದಕ್ಕೆ ಅನ್ಯ ಭಾಷಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದರು.
‘ಮಹದೇವಪುರ ಕ್ಷೇತ್ರದಲ್ಲಿ ಐ.ಟಿ., ಬಿ.ಟಿ. ಕಂಪೆನಿಗಳು ಹೆಚ್ಚಾಗಿವೆ. ಇಲ್ಲಿನ ಉದ್ಯೋಗಿಗಳು ಕಲಿಕಾ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಂಡು ಕನ್ನಡ ಭಾಷೆ ಕಲಿಯಬೇಕು’ ಎಂದು ಮನವಿ ಮಾಡಿದರು.
ಮಹದೇವಪುರ ಕ್ಷೇತ್ರ ಘಟಕದ ಅಧ್ಯಕ್ಷ ಡಾ.ವೆ. ಅಜಿತ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ವಾರ್ಡ್‌ನಲ್ಲಿ ಕಲಿಕಾ ಕೇಂದ್ರಗಳನ್ನು ತೆರೆಯುತ್ತೇವೆ’ ಎಂದರು.