ಬೆಂಗಳೂರು: ‘ರಾಜ್ಯದಲ್ಲಿ ಎಲ್ಲರೂ ಕನ್ನಡ ಕಲಿಯಲೇಬೇಕಾದ ಸನ್ನಿವೇಶ ನಿರ್ಮಿಸಲು ಕನ್ನಡದ ಸಂಘಟನೆಗಳು ಶ್ರಮಿಸಿದಾಗ ಮಾತ್ರ ಎಲ್ಲೆಡೆ ಕನ್ನಡದ ವಾತಾವರಣ ಕಾಣಲು ಸಾಧ್ಯ. ಅದಕ್ಕೆ ಅಗತ್ಯವಾದ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಉದಯಭಾನು ಕಲಾ ಸಂಘದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ‘ಬೆಂಗಳೂರು ದರ್ಶನ’ದ ಪರಿಷ್ಕೃತ, ವಿಸ್ತೃತ ಮೂರು ಸಂಪುಟಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ನೆರೆಯ ತಮಿಳುನಾಡು, ಕೇರಳದಂತಹ ರಾಜ್ಯಗಳಲ್ಲಿ ಸ್ಥಳೀಯ ಮಾತೃಭಾಷೆ ಕಲಿಯದೇ ಬದುಕಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಿಸಿದ್ದಾರೆ. ದುರದೃಷ್ಟವಶಾತ್ ನಮ್ಮಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಆದ್ದರಿಂದ, ಜನರಲ್ಲಿ ಕನ್ನಡದ ಭಾವನೆ, ಬದ್ಧತೆ ಬೆಳೆಸುವ ಕೆಲಸ ಹೆಚ್ಚೆಚ್ಚು ನಡೆಯಬೇಕು’ ಎಂದು ಪ್ರತಿಪಾದಿಸಿದರು.
‘ಯಾವ ಭಾಷೆ ಕೂಡ ನೂರಕ್ಕೆ ನೂರು ಶುದ್ಧವಾಗಿರಲು ಸಾಧ್ಯವಿಲ್ಲ. ಕನ್ನಡದಲ್ಲಿ ಬೇಕಾದಷ್ಟು ಭಾಷೆಗಳ ಪದಗಳು ಸೇರಿಕೊಂಡಿವೆ. ಒಂದು ಭಾಷೆ ಸಂಪದ್ಭರಿತವಾಗಬೇಕಾದರೆ ಅದಕ್ಕೆ ಇತರ ಭಾಷೆಗಳ ಪದ ಸೇರ್ಪಡೆ ಆಗಬೇಕು. ಭಾಷೆ ವಿಚಾರದಲ್ಲಿ ಬಹಳ ಮಡಿವಂತಿಕೆ ಮಾಡಲಾಗದು. ಮಾಡಲೂ ಬಾರದು’ ಎಂದರು.
‘ಉದಯಭಾನು ಕಲಾಸಂಘ 50 ವರ್ಷಗಳಷ್ಟು ದೀರ್ಘಕಾಲ ನಾಡುನುಡಿ, ಕಲೆ, ಸಂಸ್ಕೃತಿಗೆ ಅಪಾರ ಕೆಲಸ ಮಾಡುತ್ತ ಬಂದಿದೆ. ಸಂಘ ಹೊರತಂದಿರುವ ಬೆಂಗಳೂರು ದರ್ಶನ ಸಂಪುಟಗಳನ್ನು ನಮ್ಮ ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಪ್ರತಿಯೊಬ್ಬರು ಓದುವುದು ಅವಶ್ಯ. ಅದಕ್ಕಾಗಿ ಸರ್ಕಾರದ ವತಿಯಿಂದ ಸಾವಿರ ಪ್ರತಿಗಳನ್ನು ಖರೀದಿಸುತ್ತೇವೆ. ಜತೆಗೆ, ಸಂಘದ ಸುವರ್ಣ ಮಹೋತ್ಸವದ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಮಾತನಾಡಿ, ‘ಅಂತರ್ಜಾಲ, ವಿದ್ಯುನ್ಮಾನ ಮತ್ತು ಗಣಕೀಕೃತ ವ್ಯವಸ್ಥೆಯಲ್ಲಿ ನಾವು ಕನ್ನಡವನ್ನು ಉಪಯೋಗಿಸಬೇಕಿದೆ. ಆದ್ದರಿಂದ ಸಂಘ ತನ್ನ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಈ ಕುರಿತು ಸಂಶೋಧನೆ ಮಾಡಿ, ಹೊಸದಾದ ರೀತಿಯಲ್ಲಿ ಪಠ್ಯಕ್ರಮವನ್ನು ಮುಂದಿನ ಪೀಳಿಗೆ ನೀಡಲು ಯೋಜನೆ ರೂಪಿಸಿದರೆ ಅದಕ್ಕೆ ನನ್ನ ಸಂಸದರ ನಿಧಿಯಿಂದ ₹25 ಲಕ್ಷ ಅನುದಾನ ನೀಡುತ್ತೇನೆ’ ಎಂದು ಘೋಷಿಸಿದರು.
ಕವಿ ಸಿದ್ದಲಿಂಗಯ್ಯ ಮಾತನಾಡಿ, ‘ಸಂಘ ಐದು ದಶಕಗಳಲ್ಲಿ ಬಡವರು, ಶೋಷಿತರು, ಹಿಂದುಳಿದ ವರ್ಗದ ಹತಭಾಗ್ಯರ ಪರವಾಗಿ ಸಾಕಷ್ಟು ಕೆಲಸ ಮಾಡುತ್ತ ಬಂದಿದೆ. ಜತೆಗೆ ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಜನರನ್ನು ಎಚ್ಚರಿಸುತ್ತ, ಜನಸಾಮಾನ್ಯರ ಬದುಕನ್ನು ಕಟ್ಟುತ್ತ, ಶಿಕ್ಷಣ ಮತ್ತು ಆರೋಗ್ಯ ಸಂರಕ್ಷಣೆಗೆ ಒತ್ತು ನೀಡುತ್ತಿದೆ’ ಎಂದರು.
ವಿಶ್ವಾಸ ಮೂಡಿಸಿದ ಸಂಸ್ಥೆ: ‘70ರ ದಶಕದಲ್ಲಿ ಸಂಘ ಅನಕೃ ಅವರ ಹೆಸರಿನಲ್ಲಿ ಚರ್ಚಾ ಸ್ಪರ್ಧೆಗಳನ್ನು ಪ್ರಾರಂಭಿಸಿತು. ಅದರಲ್ಲಿ ನಾನು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದೆವು. ಆಗ ನಮ್ಮಂತಹ ವರಲ್ಲಿ ನಾವು ಕೂಡ ಮಾತನಾಡಬಲ್ಲೆವು ಎನ್ನುವ ವಿಶ್ವಾಸ ಮೂಡಿಸಿದ್ದೇ ಈ ಸಂಘ. ಆ ಋಣ ನಮ್ಮ ಮೇಲಿದೆ’ ಎಂದರು.
‘ಬಿಡಿಎ, ಲೋಕೋಪಯೋಗಿ ಇಲಾಖೆ ವತಿಯಿಂದ ಸಂಘಕ್ಕೆ ಸುವರ್ಣ ಮಹೋತ್ಸವ ಭವನ ಕಟ್ಟಡ ಕಟ್ಟಲು ಸಹಾಯ ಒದಗಿಸುವ ಜತೆಗೆ ಅನುದಾನ ನೀಡಬೇಕು. ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಆರ್ಥಿಕ ಬಲ ಒದಗಿಸಲು ಶಾಶ್ವತ ನಿಧಿ ಸ್ಥಾಪಿಸಲು ಸರ್ಕಾರ ಅನುದಾನ ಕೊಟ್ಟು ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.
ಸುವರ್ಣ ಮಹೋತ್ಸವ ಆಚರಣೆ ಸಮಿತಿ ಗೌರವ ಅಧ್ಯಕ್ಷ ನ್ಯಾ.ಎ.ಜೆ.ಸದಾಶಿವ, ‘ಸಂಘ ಇಷ್ಟು ವರ್ಷ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ₹100 ಕೋಟಿ ಬೆಲೆಬಾಳುವ ಮೈದಾನವನ್ನು ಅನೇಕ ದಶಕಗಳಿಂದ ರಕ್ಷಿಸುತ್ತ ನಾಗರಿಕ ಆಸ್ತಿಯಾಗಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ’ ಎಂದು ತಿಳಿಸಿದರು.
ಗ್ರಂಥದಲ್ಲಿ
ಗ್ರಂಥದ ಸಂಪಾದಕ ಪ್ರೊ.ಎಂ.ಎಚ್.ಕೃಷ್ಣಯ್ಯ ಮಾತನಾಡಿ, ‘ಈ ಗ್ರಂಥಗಳು ಬೆಂಗಳೂರು ಬಗೆಗಿನ ಒಂದು ಬೃಹತ್ ಕಥನ. 300ಕ್ಕೂ ಹೆಚ್ಚು ವಿದ್ವಾಂಸರು, ಆಯಾ ಕ್ಷೇತ್ರದ ವಿಷಯ ತಜ್ಞರು, ಲೇಖಕರು, ಕಲಾವಿದರು ಮತ್ತು ಹಿಂದಿನ ತಲೆಮಾರಿನ ಹಿರಿಯರೂ ನೆನಪುಗಳ ಮೂಲಕ ಇವುಗಳಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರೂ ಬೆಂಗಳೂರು ಜನಾಭಿಪ್ರಾಯದ ಪ್ರತಿನಿಧಿಗಳು. ಆಡಳಿತ ವರ್ಗ ಅವರ ಧ್ವನಿಗೆ ಕಿವಿಗೊಡಬೇಕು. ಆಗ ನಗರದ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತವೆ’ ಎಂದರು.
‘ನಗರದ ಪರಂಪರೆ ಉಳಿಸಿ. ಐತಿಹಾಸಿಕ ಕುರುಹು, ಕೆರೆಗಳು, ಸಾಂಸ್ಕೃತಿಕ ಮಹತ್ವದ ಸಂಸ್ಥೆ, ಕಟ್ಟಡಗಳನ್ನು ಕಾಪಾಡಿ. ವ್ಯಾವಹಾರಿಕ ದೃಷ್ಟಿಯಿಂದ ಹಸ್ತಾಂತರ ಮಾಡಬೇಡಿ. ಖಾಸಗಿಯವರಿಗೆ ವಹಿಸಬೇಡಿ. ಮಾರ್ಪಡಿಸಬೇಡಿ. ಆಧುನಿಕ ಬೆಂಗಳೂರಿನಲ್ಲಿ ಸಾಕಷ್ಟು ಪಡೆದುಕೊಂಡಿದ್ದೇವೆ. ಆದರೆ ಕಳೆದುಕೊಂಡಿದ್ದನ್ನೂ ಯೋಚಿಸಬೇಕಿದೆ’ಎಂದರು.
***
ರಾಜ್ಯದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು. ಅದರ ಬಗ್ಗೆ ಎರಡು ಮಾತಿಲ್ಲ. ಅನ್ಯ ಭಾಷೆ ಕಲಿಯಲು ನಮ್ಮ ವಿರೋಧವಿಲ್ಲ. ಆದರೆ ಕನ್ನಡಕ್ಕೆ ಆದ್ಯತೆ ದೊರೆಯಬೇಕು
-ಸಿದ್ದರಾಮಯ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.