ಬೆಂಗಳೂರು: ‘ಕನ್ನಡ ಹಾಗೂ ತೆಲುಗು ಭಾಷೆಗೆ ಅನ್ವಯವಾಗುವ ಏಕಲಿಪಿಯನ್ನು ಕಂಡು ಹಿಡಿಯಬೇಕು’ ಎಂದು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಹೇಳಿದರು.
‘ಪ್ರಭುತ್ವರಂಗ ತೆಲುಗು ಉದ್ಯೋಗಿಗಳ ಸಮನ್ವಯ ಸಮಿತಿ’ಯು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ತೆಲುಗು ಗಣ್ಯರ ಡೈರಿ–2017’ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕನ್ನಡ ಹಾಗೂ ತೆಲುಗು ಸೋದರ ಭಾಷೆಗಳು. ಇವುಗಳ ನಡುವೆ ಯಾವುದೇ ಭೇದಭಾವವಿಲ್ಲ. ಏಕಲಿಪಿಯನ್ನು ಕಂಡು ಹಿಡಿಯಲು ಎರಡೂ ರಾಜ್ಯಗಳ ತಜ್ಞರ ಸಮಿತಿ ರಚನೆ ಮಾಡಬೇಕು. ಏಕಲಿಪಿಯಿಂದ ಸಾಹಿತ್ಯ, ಸಂಸ್ಕೃತಿ ಹಾಗೂ ಬಾಂಧವ್ಯ ಮತ್ತಷ್ಟು ಬೆಳೆಯುತ್ತದೆ’ ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ರಾಜ್ಯದಲ್ಲಿ ಸಾಕಷ್ಟು ಜನ ತೆಲುಗು ಭಾಷಿಕರಿದ್ದಾರೆ. ಆದರೆ, ಅದು ಮಾತೃಭಾಷೆ ಅಷ್ಟೇ. ವ್ಯವಹಾರಿಕವಾಗಿ ಕನ್ನಡ ಭಾಷೆಯನ್ನೇ ಬಳಸಬೇಕು’ ಎಂದರು.
ಶಾಸಕ ಮುನಿರತ್ನ, ‘ಮಾತೃಭಾಷೆ ಯಾವುದೇ ಇರಲಿ, ಎಲ್ಲರೂ ಕನ್ನಡವನ್ನು ಕಲಿಯಬೇಕು. ಇಲ್ಲಿನ ನೆಲ, ಜಲ, ಭಾಷೆಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು. ಕನ್ನಡ ಕಲಿಯಿರಿ, ಓದಿರಿ, ಬೆಳೆಸಿರಿ’ ಎಂದು ಮನವಿ ಮಾಡಿದರು.
ಐಜಿಪಿ ಎಂ.ಚಂದ್ರಶೇಖರ್, ‘ನನ್ನ ಜನ್ಮಭೂಮಿ ಆಂಧ್ರಪ್ರದೇಶವಾಗಿದ್ದರೂ, ಕರ್ಮಭೂಮಿ ಕರ್ನಾಟಕ. ಇಲ್ಲಿ ಕೆಲಸ ಮಾಡುತ್ತಾ, ನೀರು, ಗಾಳಿ, ಅನ್ನವನ್ನು ಸೇವಿಸುವ ನಾವು ಕೃತಜ್ಞತೆ ಸಲ್ಲಿಸುವುದಕ್ಕಾದರೂ ಕನ್ನಡ ಭಾಷೆಯನ್ನು ಕಲಿಯಬೇಕು. ಇದನ್ನು ಮಾತಿನಲ್ಲಿ ಹೇಳಿದರೆ ಸಾಲದು, ಕಾರ್ಯರೂಪಕ್ಕೆ ತರಬೇಕು. ಸೇವೆಗೆ ಸೇರಿದ ಮೂರು ತಿಂಗಳಲ್ಲಿ ಕನ್ನಡ ಓದುವುದು, ಬರೆಯುವುದು ಹಾಗೂ ಮಾತನಾಡುವುದನ್ನು ಕಲಿತೆ. ಅದಕ್ಕೆ ದೃಢಸಂಕಲ್ಪ ಬೇಕು’ ಎಂದು ಹೇಳಿದರು.
**
‘ತೆಲುಗು ಭವನ ನಿರ್ಮಿಸಿಕೊಡಿ’
‘ನಗರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ತೆಲುಗು ಭವನ ಅಗತ್ಯವಿದೆ. ರಾಜ್ಯ ಸರ್ಕಾರವು ಭವನ ನಿರ್ಮಿಸಿಕೊಡಬೇಕು. ರಾಜ್ಯದಲ್ಲಿರುವ ತೆಲುಗು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಕೂಡಲೇ ಶಿಕ್ಷಕರನ್ನು ನೇಮಕ ಮಾಡಬೇಕು’ ಎಂದು ‘ಎಂದು ಸಮಿತಿಯ ಅಧ್ಯಕ್ಷ ಎಲ್.ನಾಗೇಶ್ವರರಾವ್ ಮನವಿ ಮಾಡಿದರು.
**
ಕನ್ನಡಿಗರು ಸೌಮ್ಯ ಸ್ವಭಾವದವರು, ದಯಾಮಯಿಗಳು. ಬೇರೆಯವರನ್ನು ಅಣ್ಣ–ತಮ್ಮಂದಿರಂತೆ ನೋಡುತ್ತಾರೆ. ಕನ್ನಡಿಗರ ಪ್ರೇಮ, ಅಭಿಮಾನಕ್ಕೆ ನನ್ನ ನಮಸ್ಕಾರ
–ಪರಸಾ ರತ್ನಂ,
ಮಾಜಿ ಸಚಿವ, ಆಂಧ್ರಪ್ರದೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.