ಬೆಂಗಳೂರು: ‘ನನ್ನ ಎಲ್ಲ ಹಾಡುಗಳನ್ನು ಪ್ರತಿಯೊಬ್ಬ ಕನ್ನಡಿಗ ‘ನನಗಾಗಿಯೇ ಬಾಲು ಈ ಹಾಡು ಹಾಡಿದ್ದಾರೆ’ ಎಂಬ ಭಾವದಲ್ಲಿ ಅತ್ಯಂತ ಅಕ್ಕರೆಯಿಂದ ಸ್ವೀಕರಿಸಿದ್ದಾನೆ’ ಎಂದು ಹಿರಿಯ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ವಿನೀತರಾಗಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮೊದಲ ‘ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್ ಪ್ರಶಸ್ತಿ’ಯನ್ನು ಸ್ವೀಕರಿಸಿ ಅವರು ಮಾತನಾಡಿದರು.
‘ದಕ್ಷಿಣದ ಎಲ್ಲ ಭಾಷೆಗಳಲ್ಲೂ ನಾನು ಹಾಡಿದ್ದೇನೆ. ಆದರೆ, ಕನ್ನಡಿಗರು ಕೊಟ್ಟ ಪ್ರೀತಿ ಬಲು ದೊಡ್ಡದು. ಮುಂದಿನ ಜನ್ಮವಿದ್ದರೆ ಈ ನಾಡಿನಲ್ಲೇ ಜನಿಸಬೇಕೆನ್ನುವ ಅಪೇಕ್ಷೆ ನನ್ನದಾಗಿದೆ. ಬೇರೆ ರಾಜ್ಯಗಳಲ್ಲೂ ಮುಚ್ಚುಮರೆ ಮಾಡದೆ ನನ್ನ ಈ ಅಪೇಕ್ಷೆಯನ್ನು ಹೇಳಿಕೊಂಡಿದ್ದೇನೆ’ ಎಂದು ಅವರು ಭಾವುಕರಾಗಿ ನುಡಿದರು.
‘ನನಗೆ ಯಾವುದು ಗೊತ್ತಿಲ್ಲ ಎಂಬುದನ್ನು ಸ್ಪಷ್ಟವಾಗಿ ಅರಿತುಕೊಂಡರೆ ಸರಳವಾದ ಬದುಕಿನ ಹಾದಿ ಗೋಚರಿಸುತ್ತದೆ, ವಿನಯವೂ ಮೈಗೂಡುತ್ತದೆ’ ಎಂದ ಅವರು, ‘48 ವರ್ಷಗಳ ಸುದೀರ್ಘ ಸಂಗೀತ ಯಾತ್ರೆ ನನಗೆ ಕಲಿಸಿದ ಪಾಠ ಇದು’ ಎಂದು ಅವರು ಹೇಳಿದರು.
‘ಬಾಲು ಹಾಡಿದರೆ ಮಾತ್ರ ನಾನು ನಟಿಸಲು ಸಿದ್ಧ ಎನ್ನುವ ಷರತ್ತನ್ನು ನಿರ್ಮಾಪಕರಿಗೆ ವಿಧಿಸುತ್ತಿದ್ದ ವಿಷ್ಣುವರ್ಧನ್ ನನ್ನ ಅತ್ಯಂತ ಆತ್ಮೀಯ ಸ್ನೇಹಿತ. ಆತನ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಸಂತಸವಾಗುತ್ತಿದೆ’ ಎಂದು ತಿಳಿಸಿದರು.
‘ಜೂನ್ 4 ನನ್ನ ಜನ್ಮದಿನ. ವಿಷ್ಣು ಬದುಕಿರುವವರೆಗೆ ಆ ದಿನ ತಪ್ಪದೇ ಚೆನ್ನೈಗೆ ಬರುತ್ತಿದ್ದ. ನಾನು ಹಾಡು ಹಾಡಿದರೆ, ಆತ ನೃತ್ಯ ಮಾಡುತ್ತಿದ್ದ. ಆತನ ಸ್ನೇಹಭಾಗ್ಯವನ್ನು ಮರೆಯಲು ಸಾಧ್ಯವಿಲ್ಲ’ ಎಂದು ಹೇಳಿದರು. ಪ್ರಶಸ್ತಿ ಜತೆಗೆ ನೀಡಲಾಗಿದ್ದ ₨25 ಸಾವಿರ ಮೊತ್ತದ ಚೆಕ್‌ಅನ್ನು ಪರಿಷತ್ತಿಗೆ ಹಿಂದಿರುಗಿಸಿದ ಅವರು, ‘ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಸಂಗೀತವೇ ನನ್ನ ಮಾತೃಭಾಷೆ’ ಎಂದ ಅವರು, ‘ನೂರೊಂದು ನೆನಪು ಎದೆಯಾಳದಿಂದ’, ‘ಈ ಭೂಮಿ ಬಣ್ಣದ ಬುಗುರಿ’ ಗೀತೆಗಳನ್ನು ಹಾಡಿದರು.
ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್, ‘ನಮ್ಮ ಯಜಮಾನರ ಶರೀರ ಮತ್ತು ಬಾಲು ಅವರ ಶಾರೀರದಿಂದಾಗಿ ಅವರ ಚಿತ್ರಗಳಿಗೆ ಒಂದು ಅಪೂರ್ವ ಮೆರುಗು ಬಂದಿತ್ತು’ ಎಂದು ಹೇಳಿದರು.
ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಕಲಾವಿದ ಎಸ್.ಶಿವರಾಂ, ‘ಬಾಲಸುಬ್ರಹ್ಮಣ್ಯಂ ಅವರೊಬ್ಬ ಮೇರು ಗಾಯಕ, ಮಾನವೀಯತೆಯ ಸಾಕಾರಮೂರ್ತಿ’ ಎಂದು ಕೊಂಡಾಡಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಕೇಂದ್ರ ಸಚಿವ ಅನಂತಕುಮಾರ್ ನೀಡಿರುವ ದತ್ತಿ ನಿಧಿಯಿಂದ ಈ ಪ್ರಶಸ್ತಿಯನ್ನು ಆರಂಭಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.