ಬೆಂಗಳೂರು: ‘ಕನ್ನಡವನ್ನು ರಾಜ್ಯ ಭಾಷೆಯಾಗಿ ಘೋಷಣೆ ಮಾಡ ಬೇಕು. ಆಗ ಮಾತ್ರ ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಿಸಲು ಸಾಧ್ಯ’ ಎಂದು ಕನ್ನಡ ನುಡಿ–ಗಡಿ ಜಾಗೃತಿ ಸಮಿತಿಯ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಾತೃ ಭಾಷೆಯಲ್ಲಿ ಶಿಕ್ಷಣ ಕಡ್ಡಾಯ ಎಂಬ ನೀತಿ ಜಾರಿಗೆ ತಂದರೆ ಮತ್ತೆ ಕನ್ನಡಕ್ಕೆ ಹಿನ್ನಡೆಯಾಗುತ್ತದೆ. ರಾಜ್ಯದಲ್ಲಿ ಹಲವು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಹೀಗಾಗಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಲು ಆದೇಶ ಹೊರಡಿಸಬೇಕು’ ಎಂದರು.
‘ರಾಷ್ಟ್ರೀಯ ಶಿಕ್ಷಣ ನೀತಿ, ಪರಿಷ್ಕೃತ ಸರೋಜಿನಿ ಮಹಿಷಿ ವರದಿ ಅನುಷ್ಠಾನ, ಆಡಳಿತದಲ್ಲಿ ಕನ್ನಡ ಕಡ್ಡಾಯ, ಏಕ ರೀತಿಯ ಸಮವಸ್ತ್ರ ನೀತಿ, ಹಿಂದಿ ಹೇರಿಕೆಗೆ ವಿರೋಧ, ನಾಮ ಫಲಕ, ಜಾಹೀರಾತುಗಳಲ್ಲಿ ಕನ್ನಡಕ್ಕೆ ಆದ್ಯತೆ ಸೇರಿದಂತೆ ವಿವಿಧ ಅಂಶಗಳ ಜಾರಿಗೆ ಹಕ್ಕೊತ್ತಾಯ ಮಾಡಲು ಫೆ.9ರಿಂದ ‘ನಮ್ಮ ನಡೆ: ನಾಡು, ನುಡಿ, ಗಡಿಗಳ ಕಡೆಗೆ’ ಎಂಬ ಜಾಥಾ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿ ತಾಲ್ಲೂಕುಗಳಿಗೆ ತೆರಳಿ ಕರಪತ್ರ, ಮಾಹಿತಿ ಕೈಪಿಡಿ ಹಂಚಲಾಗುವುದು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ತುಮಕೂರಿನಿಂದ ಜಾಥಾ ಆರಂಭಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಗಳಿಗಿಂತ ದೊಡ್ಡವರಲ್ಲ
‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸೌಜನ್ಯದಿಂದ ಪತ್ರ ಬರೆಯುವ ಅಗತ್ಯ ಇಲ್ಲ. ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಲು ಅವರಿಗೆ ಅಧಿಕಾರ ಇದೆ. ಕೌಶಿಕ್ ಮುಖರ್ಜಿ ಮುಖ್ಯಮಂತ್ರಿಗಳಿಗಿಂತ ದೊಡ್ಡವರಲ್ಲ. ಅವರು ಕೇವಲ ಸರ್ಕಾರಿ ಅಧಿಕಾರಿ. ಪ್ರಾಧಿಕಾರದ ಅಧ್ಯಕ್ಷ ಎಲ್. ಹನುಮಂತಯ್ಯ ಅವರು ಧೈರ್ಯವಾಗಿ ತಮ್ಮ ಕೆಲಸ ಮುಂದುವರಿಸಬೇಕು’
–‘ಮುಖ್ಯಮಂತ್ರಿ’ ಚಂದ್ರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.